Advertisement

ಹೈಕ ಪ್ರದೇಶ ಕಡೆಗಣನೆ ಇಂದಿಗೂ ನಿಂತಿಲ್ಲ

09:51 AM Feb 11, 2019 | Team Udayavani |

ರಾಯಚೂರು: ಬೆಂಗಳೂರಿನಂಥ ಸಿಲಿಕಾನ್‌ ಸಿಟಿ ಶರವೇಗದಲ್ಲಿ ಬೆಳೆಯಲು ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಜನರ ಶ್ರಮ ಸಾಕಷ್ಟಿದೆ. ಆದರೆ, ಅವರ ಕೊಡುಗೆ ಮರೆತು ಈ ಭಾಗವನ್ನು ಇಂದಿಗೂ ಕಡೆಗಣಿಸುತ್ತಲೇ ಬರಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ವಿಷಾದಿಸಿದರು.

Advertisement

ಹೈದರಾಬಾದ್‌ ಕರ್ನಾಟಕ ಜನಾಂದೊಲನ ಕೇಂದ್ರದಿಂದ ರವಿವಾರ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ರಮಾನಂದ ತೀರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಆದಾಯದಲ್ಲಿ ಬೆಂಗಳೂರಿನಿಂದಲೇ ಶೇ.63ರಷ್ಟು ಪಾಲಿದೆ. ಆದರೆ, ಅದು ಅಷ್ಟೊಂದು ಶರವೇಗದಲ್ಲಿ ಬೆಳೆಯಬೇಕಾದರೆ ಉತ್ತರ ಕರ್ನಾಟಕದ ಭಾಗದ ಜನರ ಕೊಡುಗೆ ಅಪಾರ ಎಂಬುದನ್ನು ಆಳುವ ಸರ್ಕಾರಗಳು ಮನಗಾಣಬೇಕು. ತಮ್ಮ ಆದಾಯ ಹೆಚ್ಚು ಎಂಬ ಕಾರಣಕ್ಕೆ ಕರ್ನಾಟಕ ಏಕೀಕರಣಕ್ಕೆ ಮೈಸೂರು ಪ್ರಾಂತ್ಯದ ಜನ ವಿರೋಧಿಸಿದ್ದರು. ಅಂದು ಅವರು ತೋರಿದ್ದ ಪ್ರಾದೇಶಿಕ ತಾರತಮ್ಯ ಇಂದಿಗೂ ಮುಂದುವರಿದಿದೆ. ಈ ಭಾಗ ಇಂದಿಗೂ ಗುರುತಿಸಲ್ಪಡುತ್ತಿಲ್ಲ ಎಂದು ವಿಷಾದಿಸಿದರು.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರು ರಮಾನಂದ ತೀರ್ಥರು ನನ್ನ ಗುರುಗಳು ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರ ಬಗ್ಗೆ ಈ ಭಾಗದವರಿಗೇ ತಿಳಿದಿಲ್ಲ ಎನ್ನುವುದು ವಿಪರ್ಯಾಸ ಎಂದರು.

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಮಾತನಾಡಿ, ನಮ್ಮ ರಾಜ್ಯ ಇಬ್ಬರು ಮಹಾನ್‌ ಸಾಧಕರನ್ನು ಬಿಟ್ಟುಕೊಟ್ಟಿದೆ. ಒಬ್ಬರು ಭೀಮಸೇನ್‌ ಜೋಶಿ, ಮತ್ತೂಬ್ಬರು ರಮಾನಂದ ತೀರ್ಥರು. ಈ ಇಬ್ಬರು ಮಾಡಿದ ಸಾಧನೆ ವರ್ಣಿಸುವುದು ಕಷ್ಟ. ಇಬ್ಬರೂ ಕನ್ನಡಿಗರು ಎನ್ನುವುದೇ ಖುಷಿಯ ವಿಚಾರ ಎಂದರು.

ಈ ಭಾಗದ ಜನಪ್ರತಿನಿಧಿಗಳ ಆಯ್ಕೆ ಬಗ್ಗೆ ಜನ ಚಿಂತಿಸಬೇಕಿದೆ. ಕಾಲ ಬದಲಾದಂತೆ ಜನರೂ ಬದಲಾಗಬೇಕು. ಹೈದರಾಬಾದ್‌ ವಿಮೋಚನೆಗೆ ರಮಾನಂದ ತೀರ್ಥರ ಹೋರಾಟ ಎಂದಿಗೂ ಮರೆಯುವಂಥದ್ದಲ್ಲ. ಅವರ ಹೆಸರಿನಲ್ಲಿ ಜಿಲ್ಲೆಯಲ್ಲಿ ಒಂದು ರಾಜಕೀಯ ತರಬೇತಿ ಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.

Advertisement

ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ಸರ್ಕಾರ ಈ ಭಾಗದ ಎಲ್ಲ ಹೋರಾಟಗಾರರನ್ನು, ಪ್ರತಿಭೆಗಳನ್ನು ಮರೆತು ಹೋಗಿದೆ. ನಾಡಿಗೆ ಅವರ ಕೊಡುಗೆ ಸ್ಮರಿಸುವ ಕನಿಷ್ಠ ಸೌಜನ್ಯವೂ ತೋರುತ್ತಿಲ್ಲ. ಹೀಗಾಗಿ ಈ ಪ್ರಶಸ್ತಿ ನೀಡುವ ಮೂಲಕ ಸಾಧಕರು ಹಾಗೂ ರಮಾನಂದ ತೀರ್ಥರನ್ನು ಸ್ಮರಿಸುತ್ತಿದ್ದೇವೆ ಎಂದರು.

ಕೃಷ್ಣಾ ಬಲದಂಡೆ ಕಾಲುವೆ ಹೋರಾಟದ ಪ್ರಮುಖ ರೂವಾರಿಗಳಾದ ಚಂದ್ರಶೇಖರ ಬಾಳೆ ಅವರಿಗೆ ಶ್ರೀ ರಮಾನಂದ ತೀರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ| ಕಿರಣ ಖೇಣೇದ, ನಾಗರಿಕ ವೇದಿಕೆ ಅಧ್ಯಕ್ಷ ಭಂಡೂರಾವ್‌ ಚಾಗಿ ಮಾತನಾಡಿದರು. ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಭಂಡಾರಿ ವೀರಣ್ಣ ಶೆಟ್ಟಿ, ಬೆಂಗಳೂರಿನ ಮಹಿಳಾ ಒಕ್ಕೂಟದ ಕಮಲಾ ಚಂದ್ರಶೇಖರ ಬಾಳೆ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next