ಬೆಂಗಳೂರು: ಆದಾಯ ತೆರಿಗೆ ಇಲಾಖೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು ಬೆಂಗಳೂರಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಆದಾಯ ತೆರಿಗೆ ಇಲಾಖೆಯ ಗೋವಾ-ಕರ್ನಾಟಕ ವಿಭಾಗ ಪ್ರಸಕ್ತ ವರ್ಷದಲ್ಲಿ 85 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಮಾರ್ಚ್ 16ರ ವೇಳೆಗೆ 86,229 ಕೋಟಿ ತೆರಿಗೆ ಸಂಗ್ರಹವಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಾಯ ತೆರಿಗೆ ಗೋವಾ-ಕರ್ನಾಟಕ ವಿಭಾಗದ ಆಯುಕ್ತರಾದ ನೂತನ್ ಒಡೆಯರ್, ಇದೇ ಮೊದಲ ಬಾರಿಗೆ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. 2016-17 ನೇ ಸಾಲಿನಲ್ಲಿ 85 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಆರ್ಥಿಕ ವರ್ಷ ಮುಗಿಯುವ ಮೊದಲೇ ಗುರಿ ತಲುಪಿದ್ದು, ಮಾರ್ಚ್ 16ರ ವೇಳೆಗೆ 86,229 ಕೋಟಿ ತೆರಿಗೆ ಸಂಗ್ರಹವಾಗಿದೆ.
ಬೆಂಗಳೂರಿನಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹವಾಗಿದ್ದು, ಶೇ.22.48 ರಷ್ಟು ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು. ರಾಜ್ಯದ ತೆರಿಗೆ ಸಂಗ್ರಹ ಬೆಳವಣಿಗೆ ದುಪ್ಪಟ್ಟಾಗಿದ್ದು, ಮುಂಬೈ ಮತ್ತು ದೆಹಲಿಯ ನಂತರದ ಸ್ಥಾನ ಬೆಂಗಳೂರಿಗೆ ಲಭಿಸಿದೆ ಎಂದರು. ಈ ಆರ್ಥಿಕ ವರ್ಷದಲ್ಲಿ ಸ್ವಯಂ ಘೋಷಿತವಾಗಿ ಆದಾಯ ಘೋಷಿಸಿಕೊಂಡ ಮೊತ್ತ 4,828 ಕೋಟಿ ರೂ.ಗಳಾಗಿದ್ದು, ಐಟಿ ದಾಳಿ ವೇಳೆ 132 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಆಯುಕ್ತ ರವಿಚಂದ್ರನ್ ಮಾತನಾಡಿ, ಗರಿಷ್ಠ ಮುಖಬೆಲೆಯ 500 ಮತ್ತು 1 ಸಾವಿರ ನೋಟುಗಳು ನಿಷೇಧದ ನಂತರ ಹಣಕಾಸು ವಹಿವಾಟಿನ ಮಾಹಿತಿ ಸಮರ್ಪಕವಾಗಿ ನೀಡದ 307 ಕೋ ಆಪರೇಟೀವ್ ಬ್ಯಾಂಕ್‌ಗಳು ಮತ್ತು ಏಳು ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ 9 ಸಾವಿರ ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದ್ದು, ಶಿವಮೊಗ್ಗದ ಎರಡು ಮತ್ತು ಮಂಗಳೂರಿನ ಒಂದು ಸಹಕಾರಿ ಬ್ಯಾಂಕುಗಳಿಂದ 900 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಮಾತನಾಡಿ, ಕರ್ನಾಟಕ-ಗೋವಾ ವಲಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅಘೋಷಿತ ಆದಾಯವನ್ನು ಹೆಚ್ಚಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 2135 ಕೋಟಿ ವಶಪಡಿಸಿಕೊಂಡಿದ್ದರೆ, ಪ್ರಸಕ್ತ ಸಾಲಿನಲ್ಲಿ 4828 ಕೋಟಿ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ 73 ಗ್ರೂಪ್‌ಗ್ಳ ಮೇಲೆ ದಾಳಿ ನಡೆಸಲಾಗಿದ್ದು, 328 ಪರಿಶೀಲನಾ ವಾರೆಂಟ್ ರವಾನಿಸಲಾಗಿದೆ. ಚಿನ್ನದ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ಇತರೆ ಉದ್ಯಮಿಗಳೇ ಇದರಲ್ಲಿ ಹೆಚ್ಚಾಗಿದ್ದಾರೆ ಎಂದು ಹೇಳಿದರು.