ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಸಂಬಂಧ ವಸತಿ ಸಚಿವ ಜಮೀರ್ ಅಹಮದ್ ವಿರುದ್ಧ ಲೋಕಾಯುಕ್ತ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಐ ಮಾನಿಟರಿ ಅಡ್ವೈಸರಿ ಲಿ., (ಐಎಂಎ)ನ ಮನ್ಸೂರ್ ಅಲಿಖಾನ್ ಅವರೊಂದಿಗೆ ವಹಿವಾಟು ನಡೆಸಿದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ವರದಿ ಪಡೆದಿದ್ದ ಅಂದಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿತ್ತು. ಆದರೆ, ಎಸಿಬಿ ರದ್ದುಗೊಳ್ಳುತ್ತಿದ್ದಂತೆ ಈ ಪ್ರಕರಣ ಲೋಕಾಯಕ್ತಕ್ಕೆ ವರ್ಗವಾಗಿದೆ. ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಜಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ವಜಾಗೊಳಿಸಿದೆ.
ತನಿಖೆಗೆ ಮಧ್ಯಾಂತರ ತಡೆ ನೀಡಬೇಕು ಎಂದು ಜಮೀರ್ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಜಮೀರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ 2023ರ ಎ. 6ರಂದು ತನಿಖೆಗೆ ತಡೆ ನೀಡಿತ್ತು.
ಪ್ರಕರಣ ಕುರಿತಂತೆ ವಾದ ಆಲಿಸಿದ ನ್ಯಾಯಪೀಠ, ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿಖಾನ್ ವಿರುದ್ಧ ಇ.ಡಿ. ಈಗಾಗಲೇ ಪ್ರಕರಣ ದಾಖಲಿಸಿದ್ದು, ಜಮೀರ್ ಅಹ್ಮದ್ ಮನೆ ಮೇಲೆಯೂ ದಾಳಿ ಮಾಡಿದೆ. ಜತೆಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ವರದಿ ಸಲ್ಲಿಸಿದೆ. ಆದ್ದರಿಂದ ಎಸಿಬಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಇ.ಡಿ. ಪ್ರಕ್ರಿಯೆ ಪ್ರಾರಂಭಿಸಿತ್ತು. ಆದ್ದರಿಂದ ಇ.ಡಿ. ವರದಿಯ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿರುವುದು ತಪ್ಪಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.