Advertisement

ಆಡಳಿತಾಧಿಕಾರಿಗೆ ಹೈಕೋರ್ಟ್‌ ಅನುಮತಿ

12:11 PM Sep 05, 2018 | |

ಬೆಂಗಳೂರು: ಸಂಘದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ರಾಜ್ಯ ಒಕ್ಕಲಿಗರ ಸಂಘದ ನೂತನ ಆಡಳಿತಾಧಿಕಾರಿಗೆ ಹೈಕೋರ್ಟ್‌ ಮಂಗಳವಾರ ಅನುಮತಿ ಕೊಟ್ಟಿದೆ.

Advertisement

ಆಡಳಿತಾಧಿಕಾರಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಅದರ ಹಾಲಿ ನಿರ್ದೇಶಕ ಶಿವಲಿಂಗಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯಪೀಠ, ಆಡಳಿತಾಧಿಕಾರಿ ಸಂಘದ ಆಡಳಿತಾತ್ಮಕ ಹಾಗೂ ಹಣಕಾಸಿನ ವಿಷಯಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಆ.29ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮಾರ್ಪಡಿಸಿತು.

ಮಂಗಳವಾರ ವಿಚಾರಣೆ ವೇಳೆ ವಾದ ಮಂಡಿಸಿದ ಆಡಳಿತಾಧಿಕಾರ ಪರ ವಕೀಲರು, ಸಂಘದ ಅಧೀನದಲ್ಲಿ 30ಕ್ಕೂ ಅಧಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಿಂದ ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗಿಲ್ಲ. ಪ್ರತಿದಿನದ ಖರ್ಚು ವೆಚ್ಚಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿಲ್ಲ. ಹೀಗಾಗಿ ಹಿಂದೆ ನೀಡಿರುವ ಮಧ್ಯಂತರ ಆದೇಶ ತೆರವುಗೊಳಿಸಬೇಕೆಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸಂಘಕ್ಕೆ ಕಾನೂನು ಬಾಹಿರವಾಗಿ ಆಡಳಿತಾಧಿಕಾರಿ ನೇಮಕ ಮಾಡಲಾಗಿದ್ದು, ಸರ್ಕಾರದ ಕ್ರಮವನ್ನೇ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಮಧ್ಯಂತರ ಆದೇಶ ತೆರವುಗೊಳಿಸಿದರೆ, ಆಡಳಿತಾಧಿಕಾರಿಯು ಸಂಘದ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಂತರ ಆದೇಶ ತೆರವುಗೊಳಿಸಬಾರದು ಎಂದು ಕೋರಿದರು.

ಆದರೆ, ವಾದಿ-ಪ್ರತಿವಾದಿಗಳ ನಡುವೆ ಸಂಬಂಧವಿಲ್ಲದ ಮೂರನೇ ವ್ಯಕ್ತಿ ತೊಂದರೆ ಅನುಭವಿಸುವಂತಾಗಬಾರದು. ಮಧ್ಯಂತರ ಆದೇಶದಿಂದ ಸಂಘದ ಅಧೀನ ಸಂಸ್ಥೆಗಳ ಸಿಬ್ಬಂದಿ ವೇತನ ಪಡೆಯದೇ ಕಷ್ಟ ಅನುಭವಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಕೇವಲ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಡಳಿತಾಧಿಕಾರಿಗೆ ಅನುಮತಿ ಕೊಟ್ಟಿತು.

Advertisement

ಇದೇ ವೇಳೆ, ಆಡಳಿತಾಧಿಕಾರಿಯು ಸಂಘದ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ಆಡಳಿತಾಧಿಕಾರಿ ಕೈಗೊಳ್ಳುವ ನಿರ್ಧಾರ ಹಾಗೂ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು.

ಮಧ್ಯಂತರ ಅರ್ಜಿ: ಈ ಮಧ್ಯೆ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ತಮಗೂ ವಾದ ಮಂಡಿಸಲು ಅವಕಾಶ ಕಲ್ಪಿಸುವಂತೆ ಕೋರಿ ಸಂಘದ ಮಾಜಿ ನಿರ್ದೇಶಕರಾದ ಎಸ್‌.ಟಿ. ರಾಜಶೇಖರ್‌, ಕೃಷ್ಣಪ್ಪ ಸೇರಿ 6 ಜನ ಆಜೀವ ಸದಸ್ಯರು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಐಎಎಸ್‌ ಅಧಿಕಾರಿ ಎಚ್‌.ಎಸ್‌. ಅಶೋಕಾನಂದ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ. ಈಗ ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next