ಬೆಂಗಳೂರು: ಸರ್ಕಾರಿ ಶಿಕ್ಷಕರೂ ಸೇರಿದಂತೆ ಕನ್ನಡ ಭಾಷಾ ಪರೀಕ್ಷೆ ತೇರ್ಗಡೆಯಾದ ಸರ್ಕಾರಿ ನೌಕರರಿಗೆ ನೀಡುವಂತೆ 1974ರಿಂದ 1987ರ ಅವಧಿಯಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಗೊಂಡ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ “ಒಂದು ಹೆಚ್ಚುವರಿ ವೇತನ ಬಡ್ತಿ’ ಸೌಲಭ್ಯ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ದಾವಣಗೆರೆಯ ಎಸ್. ಪರಮೇಶ್ವರಪ್ಪ ಹಾಗೂ ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿದ ನ್ಯಾ. ಎಲ್. ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶವನ್ನು 6 ತಿಂಗಳಲ್ಲಿ ಪಾಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಿತು.
“ಒಂದು ಹೆಚ್ಚುವರಿ ವೇತನ ಬಡ್ತಿ’ ಸೌಲಭ್ಯವನ್ನು ಸರ್ಕಾರಿ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸೀಮಿತಿಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಎಸ್.ಪರಮೇಶ್ವರಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತಿಗೊಂಡಿರುವ 500ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
“ನ್ಯಾಯ ಕೋರಿ ಬಂದಿರುವ ಅರ್ಜಿದಾರರು 1974ರಿಂದ 1987ರ ಅವಧಿಯಲ್ಲಿ ರಾಜ್ಯದ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಜಿದಾರರ ಶಾಲೆಗಳಿಗೂ ಸರ್ಕಾರ ಅನುದಾನ ಕಲ್ಪಿಸುತ್ತಿದೆ. ಹೀಗಾಗಿ, ಕರ್ನಾಟಕ ಸಿವಿಲ್ ಸೇವೆಗಳು (ಸೇವೆಗಳು ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ಅಧಿನಿಯಮ-1976ರ ನಿಯಮ 6ರ ಪ್ರಕಾರ 1987ರ ಪೂರ್ವದಲ್ಲಿ ಸರ್ಕಾರಿ ಶಾಲೆಗಳಿಗೆ ನೇಮಕಗೊಂಡು ಕನ್ನಡ ಪರೀಕ್ಷೆ ಉತ್ತೀರ್ಣರಾದ ಹಾಗೂ ಉತ್ತೀರ್ಣರಾಗಬೇಕಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಡೆಯುತ್ತಿರುವ “ಒಂದು ಹೆಚ್ಚುವರಿ ವೇತನ ಬಡ್ತಿ’ ಸೌಲಭ್ಯವನ್ನು ಪಡೆಯಲು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅರ್ಹರಾಗಿದ್ದಾರೆ’ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಈ ಹಿಂದೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಸೌಲಭ್ಯ ಕಲ್ಪಿಸಲು ಆದೇಶಿಸಿದೆ. ಆದರೆ, ಸರ್ಕಾರ ಮಾತ್ರ ಈವರೆಗೂ ಆ ಆದೇಶ ಪಾಲನೆ ಮಾಡಿಲ್ಲ. ಆದ್ದರಿಂದ ಒಂದು ಹೆಚ್ಚುವರಿ ವೇತನ ಬಡ್ತಿ ಸೌಲಭ್ಯ ಕಲ್ಪಿಸಬೇಕೆಂಬ ಅರ್ಜಿದಾರರ ಮನವಿಯನ್ನು ರಾಜ್ಯ ಸರ್ಕಾರವು ಆರು ತಿಂಗಳಲ್ಲಿ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ವಕೀಲ ಜಿ.ಬಿ. ಮಾರುತಿ ಅರ್ಜಿದಾರರ ಪರ ವಾದ ಮಂಡಿಸಿದ್ದರು.
ಪ್ರಕರಣವೇನು?
ಕರ್ನಾಟಕ ಸಿವಿಲ್ ಸೇವೆಗಳು (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ಅಧಿನಿಯಮ-1974ರ ನಿಯಮ 6ರ ಅನುಸಾರ 1974ರ ಅ.1ರಿಂದ 1987ರ ಸೆ.2ರ ಅವಧಿಯೊಳಗೆ ಸರ್ಕಾರಿ ಶಾಲೆಗಳಿಗೆ ನೇಮಕಗೊಂಡಿದ್ದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ಸೌಲಭ್ಯವನ್ನು ತಮಗೂ ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 1987ರ ಪೂರ್ವದಲ್ಲಿ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು 2012ರ ಆ.10ರಂದು ಮಾನ್ಯ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿದಾರರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದರ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಭಾಗೀಯಪೀಠ 2013ರ ಆ.28ರಂದು ಮೇಲ್ಮನವಿಯನ್ನು ವಜಾಗೊಳಿಸಿತ್ತು. ಆಗ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ಆದೇಶ ಎತ್ತಿ ಹಿಡಿದಿತ್ತು. ಆದಾಗ್ಯೂ ಸರ್ಕಾರ ತಮ್ಮ ಮನವಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.