ಬೆಂಗಳೂರು: ರಾಜ್ಯದ ಅರಣ್ಯ ವಲಯಗಳಲ್ಲಿ ಕಾಡ್ಗಿಚ್ಚು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು. ಜತೆಗೆ, ಅವಘಡ ಸಂಭವಿಸಿದರೆ ಸ್ಥಳೀಯ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡಬೇಕೆಂದು ಹೈಕೋರ್ಟ್ ಆದೇಶಿಸಿದೆ.
ಕೊಡಗು ಜಿಲ್ಲೆಯಲ್ಲಿ ಕಾಡ್ಗಿಚ್ಚಿನಿಂದ ನಾಶವಾಗುವ ಅರಣ್ಯ ಸಂಪತ್ತು ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೆ.ವಿ.ರವಿ ಚೆಂಗಪ್ಪ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಲೇವಾರಿ ಮಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಕಾಡ್ಗಿಚ್ಚು ಸಂಭವಿಸಿ ಉಂಟಾಗುವ ನಾಶದಲ್ಲಿ ಅರಣ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲದ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದೂ ನಿರ್ದೇಶಿಸಿರುವ ನ್ಯಾಯಪೀಠ, ಪ್ರಕೃತಿ ಸಂರಕ್ಷಣೆಗೆ ಸುಶಿಕ್ಷಿತರು ಮತ್ತು ಅನಕ್ಷರಸ್ಥರೂ ಸೇರಿದಂತೆ ಸಮಸ್ತ ಜನಕೋಟಿ ಕಟಿಬದ್ಧರಾಗಬೇಕಾದ ಕಾಲ ಈಗ ಕೂಡಿ ಬಂದಿದೆ ಎಂದು ತಿಳಿಸಿದೆ.
ಅರಣ್ಯ ಸಂರಕ್ಷಣೆಗೆ ಸ್ಥಳೀಯರನ್ನು ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು
ಎಂದು ಸೂಚಿಸಿರುವ ನ್ಯಾಯಪೀಠ, ಕೊಡುಗು ಜಿಲ್ಲೆಗೆ ಅನ್ವಯ ಆಗುವಂತೆ ಅರ್ಜಿದಾರ ಕೆ.ವಿ.ರವಿ ಚೆಂಗಪ್ಪ ಅವರನ್ನೂ ಸೇರ್ಪಡೆ ಮಾಡಬೇಕು ಎಂದು ತಿಳಿಸಿದೆ.
ದಿನೇದಿನೆ ಮನುಷ್ಯ ತನ್ನ ಮಿತಿ ಮೀರುತ್ತಿರುವುದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷ ಕಾಣಿಸಿಕೊಳ್ಳುತ್ತಿದೆ. ಇದು ಭವಿಷ್ಯದ ಅಪಾಯಕಾರಿ ಮುನ್ಸೂಚನೆ ಆಗಿದೆ. ನಾವೀಗ ಎಚ್ಚೆತ್ತುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದೆ.
ಅರಣ್ಯ ಸಂರಕ್ಷಣೆಗೆ ಸ್ಥಳೀಯರನ್ನು ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು ಎಂದು ಸೂಚಿಸಿರುವ ನ್ಯಾಯಪೀಠ, ಕೊಡುಗು ಜಿಲ್ಲೆಗೆ ಅನ್ವಯ ಆಗುವಂತೆ ಅರ್ಜಿದಾರ ಕೆ.ವಿ.ರವಿ ಚೆಂಗಪ್ಪ ಅವರನ್ನೂ ಸೇರ್ಪಡೆ ಮಾಡಬೇಕು ಎಂದು ತಿಳಿಸಿದೆ.