Advertisement

ಅರ್ಜಿದಾರರಿಗೆ ಭದ್ರತೆ ಒದಗಿಸಲು ಹೈಕೋರ್ಟ್‌ ಆದೇಶ

12:26 AM Apr 09, 2019 | Team Udayavani |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಖಾಸಗಿ ಫ್ಲಾಟ್‌ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಅರ್ಜಿ ಸಲ್ಲಿಸಿರುವ ರಾಕೇಶ್‌ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಹೈಕೋರ್ಟ್‌ ಸೋಮವಾರ ನಗರ ಪೊಲೀಸ್‌ ಆಯುಕ್ತರಿಗೆ ಆದೇಶ ನೀಡಿದೆ.

Advertisement

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಎನ್‌.ರಾಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ಬಂದಿತ್ತು. ಈ ವೇಳೆ ರಾಕೇಶ್‌ ಪರ ವಕೀಲರು, ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದ ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ದೂರು ಹಿಂಪಡೆಯುವಂತೆ ಅರ್ಜಿದಾರರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ.

ಅರ್ಜಿದಾರರು ಮತ್ತವರ ಕುಟುಂಬದ ಸದಸ್ಯರಿಗೆ ಪ್ರಾಣ ಬೆದರಿಕೆ ಇದೆ. ಈಗ ಚುನಾವಣೆ ಸಂದರ್ಭ ಆಗಿರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಕೇಶ್‌ ಮತ್ತವರ ಕುಟುಂಬ ಸದಸ್ಯರಿಗೆ ಬಿಗಿ ಭದ್ರತೆ ಒದಗಿಸಲು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸುವಂತೆ ಮನವಿ ಮಾಡಿದರು.

ಈ ಮನವಿ ಮಾನ್ಯ ಮಾಡಿದ ನ್ಯಾಯಪೀಠ, ರಾಕೇಶ್‌ ಮತ್ತವರ ಕುಟುಂಬದ ಸದಸ್ಯರಿಗೆ ಮೇ 31ರವರೆಗೆ ಸಶಸ್ತ್ರ ಸಿಬ್ಬಂದಿ ಮೂಲಕ ದಿನದ 24 ಗಂಟೆಯೂ ಭದ್ರತೆ ಒದಗಿಸಬೇಕು ಎಂದು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಏ.16ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next