Advertisement

ಹೈಕೋರ್ಟ್‌ ಆದೇಶ ಪಾಲಿಸಿ, ಪ್ರಾಣಿಬಲಿ ಬೇಡ: ಡಿಸಿ

02:48 PM Jan 14, 2017 | Team Udayavani |

ಚಾಮರಾಜನಗರ: ಜಿಲ್ಲೆಯ  ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ತಡೆಯುವಂತೆ ಹೈಕೋರ್ಟ್‌ ಆದೇಶವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನ್ಯಾಯಾಲಯದ ಆದೇಶ ಪಾಲನೆ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಕೋರಿದರು. ಜಿಲ್ಲಾಡಳಿತ ಭವನದ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಚಿಕ್ಕಲ್ಲೂರು ಗ್ರಾಮದಲ್ಲಿ ಸಿದ್ದಪ್ಪಾಜಿ ಜಾತ್ರೆ ಆಚರಿಸಲಿದ್ದು, ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಜನರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಈ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಸ ದಂತೆ ಹೈಕೋರ್ಟ್‌ ಆದೇಶವಿರುವ ಹಿನ್ನೆಲೆಯಲ್ಲಿ, ಜಾತ್ರೆಗೆ ಪ್ರಾಣಿಗಳನ್ನು ತೆಗೆದುಕೊಂಡು ಹೋಗದಂತೆ ಮಾರ್ಗಗಳಲ್ಲಿ 4 ಕಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿ ಸಲಾಗಿದೆ. 800 ಮಂದಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ ಎಂದರು.

ಜಾತ್ರೆ ಪ್ರದೇಶವನ್ನು 6 ಸೆಕ್ಟರ್‌ಗಳನ್ನಾಗಿ ವಿಂಗಡಿಸಿ, ಈ ಸೆಕ್ಟರ್‌ಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅನುಕೂಲವಾಗುವಂತೆ 18 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿ ಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರಗೆ, ಮಧ್ಯಾಹ್ನ 2 ಗಂಟೆಗೆ ರಾತ್ರಿ 10 ಗಂಟೆವರೆಗೆ, ರಾತ್ರಿ 10ರಿಂದ ಬೆಳಗ್ಗೆ 8 ಗಂಟೆವರಗೆ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಏಕಮುಖ ಸಂಚಾರ ವ್ಯವಸ್ಥೆ: ಚಿಕ್ಕಲ್ಲೂರು ಗ್ರಾಮಕ್ಕೆ ಒಳಬರಲು ಕೊತ್ತನೂರು ಗ್ರಾಮದಿಂದ-ಬಾಣೂರು, ಕ್ರಾಸ್‌-ಬಾಣೂರು-ಸುಂಡ್ರಳ್ಳಿ ಮಾರ್ಗವಾಗಿ ಮತ್ತು ಹೊರಹೋಗಲು ಚಿಕ್ಕಲ್ಲೂರು-ಬಾಣೂರು ಕ್ರಾಸ್‌-ಕೊತ್ತನೂರು ಮಾರ್ಗದಲ್ಲಿ ಏಕಮುಖ ಸಂಚಾರ ನಡೆಸಲು ಆದೇಶ ಹೊರಡಿಸಲಾಗಿದೆ ಎಂದರು.

ಜಾತ್ರೆ ನಡೆಯುವ ಸ್ಥಳದಿಂದ 100 ಮೀಟರ್‌ ದೂರದಲ್ಲಿ ವ್ಯಾಪಾರಿಗಳಿಗೆ ಅಂಗಡಿಮುಂಗಟ್ಟುಗಳಿಗೆ ವ್ಯವಸ್ಥೆ ಮಾಡಿ ವಿಶಾಲವಾದ ರಸ್ತೆ ನಿರ್ಮಿಸಲಾಗಿದೆ. ಮುಡಿಕಟ್ಟೆ ನಿರ್ಮಿಸಿ ಕಾಂಕ್ರಿಟ್‌ ಹಾಕಿಸಲಾಗಿದ್ದು, ಮುಡಿ ಮಾಡುವವರಿಗೆ ಬಿಸಿನೀರು ಉಪಯೋಗಿ ಸುವಂತೆ ಹಾಗೂ ಒಬ್ಬರಿಗೊಂದು ಪ್ರತ್ಯೇಕ ಬ್ಲೇಡ್‌ ಉಪಯೋಗಿಸಬೇಕು ಸ್ವತ್ಛತೆ ಕಾಪಾಡಬೇಕು ಎಂದು ಸೂಚಿಸಲಾಗಿದೆ ಎಂದರು.

Advertisement

ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ನ್ಯಾಯಾಲಯಕ್ಕೆ ಮೊರೆ ಹೋಗಿ ಸಾಬೀತುಪಡಿಸಿದ್ದರಿಂದ ಪ್ರಾಣಿ ಬಲಿಯನ್ನು ತಡೆಯಬೇಕೆಂದು ಹೈಕೋರ್ಟ್‌ ಆದೇಶ ನೀಡಿದೆ. ಈ  ಹಿನ್ನೆಲೆಯಲ್ಲಿ ಕಳೆದ ವರ್ಷ  ಪ್ರಾಣಿ ಬಲಿಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ತಡೆದು ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಜನರಿಗೆ ಪ್ರಾಣಿಗಳನ್ನು ಜಾತ್ರೆಗೆ ತರಬಾರದು ಎಂದು ಸೂಚಿಸಲಾಗಿದ್ದು, ಒಂದು ವೇಳೆ ತಂದರೆ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕೆಲವು ಮುಖಂಡರು, ಇದು ಪರಂಪರೆಯಿಂದ ನಡೆದುಕೊಂಡು ಬಂದಿದೆ. ಮಾಂಸಾಹಾರ ಸೇವನೆ  ಮಾಡುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಅವರು ಹೈಕೋರ್ಟ್‌ ಆದೇಶದ ವಿರುದ್ಧವಾಗಿ ಹೇಳಿಕೆ ನೀಡುವುದು ಸರಿಯಲ್ಲ. ನ್ಯಾಯಾಲಯದ ಆದೇಶ ಪಾಲನೆ ಎಲ್ಲರ ಕರ್ತವ್ಯ ಎಂದರು.

ಪ್ರಾಣಿ ಬಲಿ ನೋಡುವುದರಿಂದ ಹಿಂಸೆ: ಪ್ರಾಣಿ ಬಲಿ ನಡೆಯುವುದರಿಂದ ಜಾತ್ರೆಗೆ ಬರುವ ಚಿಕ್ಕಮಕ್ಕಳು, ಗರ್ಭೀಣಿಯರು, ವೃದ್ಧರು ಪ್ರಾಣಿಬಲಿಯನ್ನು ನೋಡುವುದರಿಂದ ಹಿಂಸೆಯಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ನೀಡುವುದು ಸರಿಯಲ್ಲ ಎಂದು ನಿಯಮ ಹೇಳುತ್ತದೆ.

ಆದರಿಂದ ಪರಂಪರೆಯನ್ನು ಗೌರವಿಸಿ, ಹಿಂದೆ ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ, ಜೀತಪದ್ಧತಿಯನ್ನು ಪರಂಪರೆ ಎಂದು ಹೇಳುತ್ತಿದ್ದರು ಅದನ್ನು ಬಿಟ್ಟಿದ್ದೇವೆ ಎಂದು  ತಿಳಿಸಿದ ಅವರು, ಅದೇ ರೀತಿ ಜಾತ್ರೆಯಲ್ಲಿ ಪ್ರಾಣಿಬಲಿ ನೀಡುವ ಪದ್ಧತಿಯನ್ನು ಬಿಡಬೇಕಾಗುತ್ತದೆ ಎಂದು ಡೀಸಿ ಅಭಿಪ್ರಾಯಪಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ ಕುಮಾರ್‌ ಜೈನ್‌ ಸುದ್ದಿಗೋಷ್ಠಿಯಲ್ಲಿದ್ದರು.

ಹಂಪಿ ಕನ್ನಡ ವಿವಿ ಡಾ.ಗುರುಪ್ರಸಾದ್‌ಗೆ ಮಂಟೇಸ್ವಾಮಿ ಪ್ರಶಸ್ತಿ
ಪ್ರತಿವರ್ಷದಂತೆ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆಯಂದು ಮಂಟೇಸ್ವಾಮಿ ಪ್ರತಿಷ್ಠಾನ ದಿಂದ ನೀಲಗಾರರ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಹಂಪಿ ವಿವಿಯ ಜಾನಪದ ಸಹಪ್ರಾ ಧ್ಯಾಪಕ ಡಾ.ಸಿ.ಟಿ.ಗುರುಪ್ರಸಾದ್‌ (ಲೀಲಗಾರ ಸಂ ಕಥನ ಕೃತಿಯ ಲೇಖಕ) ಅವರಿಗೆ ವಿದ್ವಾಂಸ ಪ್ರಶಸ್ತಿ ಹಾಗೂ ಜಿಲ್ಲೆಯ ಕೆಬ್ಬೇಪುರ ಸಿದ್ದರಾಜು ಅವರಿಗೆ ನೀಲಗಾರರ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಂ. ಮಹದೇವಪ್ರಸಾದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next