ಬೆಂಗಳೂರು: ಮದುವೆ ಆಗಲು ಬಂದು ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಪಾಕ್ ಪ್ರಜೆ (ದಂಪತಿ)ಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡಲು ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.
ಇಬ್ಬರು ಪಾಕ್ ಪ್ರಜೆಗಳನ್ನು ಅವರ ದೇಶಕ್ಕೆ ಹಸ್ತಾಂತರಿಸುವಂತೆ ಹೈಕೋರ್ಟ್ ನೀಡಿರುವ ಆದೇಶ ಪಾಲಿಸಲು ಮೂರು ವಾರಗಳ ಕಾಲಾವಕಾಶ ಬೇಕು ಎಂದು ಕೋರಿ ಕೇಂದ್ರ ಸರ್ಕಾರದ ಪರ ವಕೀಲ ಆದಿತ್ಯ ಸಿಂಗ್ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮೂರು ವಾರಗಳ ಬದಲಿಗೆ ಎರಡು ವಾರಗಳ ಕಾಲಾವಕಾಶ ನೀಡಿ ಆದೇಶಿಸಿತು.
ಪಾಕಿಸ್ತಾನ ಮೂಲದ ಕಾಶಿಫ್ ಶಂಶುದ್ದೀನ್ ಹಾಗೂ ಆತನ ಪತ್ನಿ ಕಿರಣ್ ಗುಲಾಮ್ ಅಲಿ ದಂಪತಿಯನ್ನು ಮೇ 5ರೊಳಗೆ ಅವರ ದೇಶಕ್ಕೆ ಗಡಿಪಾರು ಮಾಡಬೇಕು ಎಂದು ಏ.26ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿತ್ತು. ಈ ಮಧ್ಯೆ, ಕಾಲಾವಕಾಶ ಕೋರಿ ಕೇಂದ್ರ ಸರ್ಕಾರದ ಪರ ವಕೀಲರು ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ಬುಧವಾರ ಮಾನ್ಯ ಮಾಡಿತು.
ಕರ್ನಾಟಕ ಗೃಹ ಇಲಾಖೆಯಿಂದ ನಿರಾಕ್ಷೇಪಣೆ ದೊರೆತ ಬಳಿಕ ಮತ್ತು “ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ’ (ಎಫ್ಆರ್‌ಆರ್‌ಓ) ಇಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ “ನಿರ್ಗಮನ ಪಾಸ್’ ಜಾರಿಗೊಳಿಸಿದ ತಕ್ಷಣ ಈ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಅತ್ತಾರಿ/ವಾಘಾ ಗಡಿಗೆ ಬಿಟ್ಟು ಬರುವಂತೆ ರಾಜ್ಯ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದಕ್ಕೂ ಮೊದಲು ಇಬ್ಬರು ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಲು ಈವರೆಗೆ ಕೈಗೊಂಡ ಕ್ರಮಗಳನ್ನು ಮೆಮೋ (ಜ್ಞಾಪನಾ ಪತ್ರ) ಮೂಲಕ ಹೈಕೋರ್ಟ್‌ಗೆ ಸಲ್ಲಿಸಲಾಯಿತು. ವಿಚಾರಣೆ ವೇಳೆ ಖುದ್ದು ಹಾಜರಿದ್ದ ಬೆಂಗಳೂರು ಎಫ್ಆರ್‌ಆರ್‌ಓ ಅಧಿಕಾರಿ ಲಾಬೂರಾಮ್, ಪಾಕ್ ಪ್ರಜೆಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಮಧ್ಯೆ ನಡೆದ ಪತ್ರ ವ್ಯವಹಾರದ ಮಾಹಿತಿಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.