ಬೆಂಗಳೂರು: ಬೆಳ್ಳಂದೂರು ಕೆರೆಗೆ ತ್ಯಾಜ್ಯ ನೀರು ಹರಿಸುವ ಕಾರ್ಖಾನೆಗಳನ್ನು ಮುಚ್ಚಿಸುವಂತೆ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದೆಹಲಿಯ ಹಸಿರು ನ್ಯಾಯಪೀಠ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ದೆಹಲಿ ಹಸಿರು ನ್ಯಾಯಪೀಠದ ಆದೇಶದಂತೆ ಮೇ 12ರಂದು ಮಾಲಿನ್ಯನಿಯಂತ್ರಣ ಮಂಡಳಿ ಕಂಪೆನಿ ಮುಚ್ಚುವಂತೆ ನೀಡಿದ್ದ ನೋಟೀಸ್ ರದ್ದುಕೋರಿ ಶಶಿ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದಿಸಿ, ದಕ್ಷಿಣ ಭಾರತದ ಪರಿಸರ ಸಂರಕ್ಷಣೆಗೆ ಸೇರಿದ ಅರ್ಜಿ ವಿಚಾರಣೆಗಳನ್ನು ನಡೆಸುವ ಅಧಿಕಾರ ಚೆನೈನ ಹಸಿರು ನ್ಯಾಯಪೀಠಕ್ಕೆ ಸೇರಿದೆ. ಹೀಗಿದ್ದರೂ ಬೆಳ್ಳಂದೂರು ಕೆರೆವ್ಯಾಪ್ತಿಯಲ್ಲಿನ ಕಂಪೆನಿಗಳನ್ನು ಮುಚ್ಚಿಸುವಂತೆ ದೆಹಲಿಯ ಹಸಿರು ನ್ಯಾಯಪೀಠ ಆದೇಶಿಸಿರುವುದು ಸರಿಯಲ್ಲ. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆ 2010, ಕಲಂ4 ಉಲ್ಲಂಘನೆಯಾಗಿದೆ. ಹೀಗಾಗಿ ದೆಹಲಿ ಎನ್‌ಜಿಟಿ ಆದೇಶ ಹಾಗೂ ಮಾಲಿನ್ಯನಿಯಂತ್ರಣ ಮಂಡಳಿ ನೋಟೀಸ್ ರದ್ದುಗೊಳಿಸುವಂತೆ ಕೋರಿದರು.
ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ದೆಹಲಿ ಎನ್‌ಜಿಟಿ ನೀಡಿದ್ದ ಆದೇಶ ಹಾಗೂ ಮಾಲಿನ್ಯನಿಯಂತ್ರಣ ಮಂಡಳಿ ಅರ್ಜಿದಾರ ಕಂಪೆನಿಗೆ ನೀಡಿದ್ದ ನೋಟೀಸ್‌ಗೆ ತಡೆಯಾಜ್ಞೆ ನೀಡಿತು. ಈ ಸಂಬಂಧ ಪ್ರತಿವಾದಿಗಳಾಗಿರುವ ರಾಜ್ಯಸರ್ಕಾರ, ಬಿಬಿಎಂಪಿ ಬೆಸ್ಕಾಂ ಜಲಮಂಡಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಬೆಳ್ಳಂದೂರು ಕೆರೆಯ ಮಲಿನತೆಯ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿಯ ಹಸಿರು ನ್ಯಾಯಪೀಠ, ಬೆಳ್ಳಂದೂರು ಕೆರೆಗೆ ತ್ಯಾಜ್ಯಯುಕ್ತ ನೀರು ಹರಿಯಬಿಡುತ್ತಿರುವ ಸುತ್ತಮುತ್ತಲ ಪ್ರದೇಶಗಳಲ್ಲಿನ ಕಾರ್ಖಾನೆಗಳನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದೆಹಲಿ ಎನ್‌ಜಿಟಿ ಏಪ್ರಿಲ್ 19ರಂದು ಆದೇಶ ನೀಡಿತ್ತು.