ರಾಯಚೂರು: ಅಸ್ಪೃಶ್ಯ ಸಮುದಾಯದ ಮೀಸಲಾತಿ ರಕ್ಷಿಸಲು ಹೈಕೋರ್ಟ್ 2002ರಲ್ಲಿ ನೀಡಿದ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಾ| ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್ ಅಸ್ಪೃಶ್ಯ ಜನಾಂಗವನ್ನು ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ವಿವಿಧ ಸೌಕರ್ಯಗಳಿಂದ ವಂಚಿತಗೊಳಿಸಲು ಸಂವಿಧಾನದ ವಿರುದ್ಧವಾಗಿ ಆದೇಶ ನೀಡಿದ್ದರು.
ಒಬಿಸಿ ಜಾತಿಗಳಾದ ವಡ್ಡರ, ಲಮಾಣಿ, ಕೊರಚ ಮತ್ತು ಕೊರಮ ಸ್ಪೃಶ್ಯ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಿಸುವ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಎಸಗಿದ್ದಾರೆ ದೂರಿದರು. ಅವರನ್ನು ಎಸ್ಸಿ ಪಟ್ಟಿಗೆ ಸೇರಿಸಿ ಅಸ್ಪೃಶ್ಯರನ್ನು ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತಗೊಳಿಸಲಾಗಿದೆ. ಭಾರತ ಸಂವಿಧಾನದ ಅನುಚ್ಛೇದ 38ರ ಪ್ರಕಾರ ಅಸ್ಪೃಶ್ಯ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನವನ್ನೇ ತಿರುಚಿದೆ.
ಆ ಮೂಲಕ ಶತಶತಮಾನಗಳಿಂದ ಶೋಷಣೆಗೊಳಪಟ್ಟ ಅಸ್ಪೃಶ್ಯರನ್ನು ಹೀನಾಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎಂದು ದೂರಿದರು. 2002ರಲ್ಲಿ ಹೈಕೋರ್ಟ್ ನೀಡಿದ ಆದೇಶದಲ್ಲಿ ವಡ್ಡರ, ಲಮಾಣಿ, ಕೊರಚ ಮತ್ತು ಕೊರಮ ಜಾತಿಗಳನ್ನು ಎಸ್ಸಿಗೆ ಸೇರಿಸಿರುವುದು 1950ರ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸೇರ್ಪಡೆಯನ್ನು ರದ್ದುಪಡಿಸಿದೆ.
ಅಸ್ಪೃಶ್ಯ ಸಮುದಾಯದ ಸೌಲಭ್ಯ ಗಳ ರಕ್ಷಣೆಗಾಗಿ ಹೈಕೋರ್ಟ್ ನೀಡಿದ 2002ರ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಸಂಸ್ಥಾಪಕ ದೇವಮಿತ್ರ, ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ, ಜಿಲ್ಲಾಧ್ಯಕ್ಷ ಸಿ.ಎಂ. ನಾರಾಯಣ, ಕಾರ್ಯಕರ್ತರಾದ ಗೋಪಾಲ, ಯೇಸುದಾಸ, ಭೀಮೇಶ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.