Advertisement

ಗ್ರಾಮೀಣ ಸೊಗಡಿನ ನಾಯಿಕತೆ

09:48 PM May 09, 2019 | Team Udayavani |

ಉಡುಪಿಯಲ್ಲಿ ಸುಮನಸಾ ಕೊಡವೂರು ಆಶ್ರಯದಲ್ಲಿ ಇತ್ತೀಚೆಗೆ ಪ್ರದರ್ಶಿತವಾದ ಶೈಲೇಶ ಕುಮಾರ್‌ ಎಂ.ಎಂ. ನಿರ್ದೇಶನದ ಡಾ| ಚಂದ್ರಶೇಖರ ಕಂಬಾರರ ಕೃತಿ “ನಾಯಿಕತೆ’ಯನ್ನು ರಂಗರೂಪಕ್ಕಿಳಿಸಿದವರು ಸೈಡ್‌ ವಿಂಗ್‌ (ರಿ.) ಬೆಂಗಳೂರು ಇದರ ಕಲಾವಿದರು. ಗ್ರಾಮೀಣ ಸೊಗಡನ್ನು ನಾಟಕದುದ್ದಕ್ಕೂ ಉಳಿಸಿಕೊಂಡು ಸಮಾಜದ ಆಗುಹೋಗುಗಳನ್ನು ನೈಜ ಜೀವನಕ್ಕೆ ಹತ್ತಿರವಾಗುವ ಕಥೆ‌ಯೊಂದಿಗೆ ಅನುಸಂಧಾನ ಮಾಡಿಕೊಂಡು, ಅಲೆಮಾರಿ ಜನಾಂಗ ಹೊಟ್ಟೆಪಾಡಿಗಾಗಿ ಪಡುವ ಬವಣೆಯನ್ನು ನವಿರಾದ ಹಾಸ್ಯದೊಂದಿಗೆ ಪೋಣಿಸಿ “ಪ್ರೀತಿ-ಪ್ರೇಮ ದೊಡ್ಡದೋ-ಹಣದೊಡ್ಡದೋ’ ಎನ್ನುವ ತಾರ್ಕಿಕ ಅಂತ್ಯ ಕಾಣುವ ಸಂಗೀತ ನಾಟಕ ಕಲಾವಿದರ ಪ್ರಬುದ್ಧತೆಯಿಂದಾಗಿ ಪ್ರೇಕ್ಷಕರನ್ನು ಸಮಾರು ಒಂದೂವರೆ ತಾಸು ಮೂಕವಿಸ್ಮಿತರನ್ನಾಗಿಸಿತು. ಸ್ತ್ರೀಲಂಪಟ ಸಾಹುಕಾರ್‌ ಸೊಮಣ್ಣನ ನಿಷ್ಠಾವಂತ ಸೇವಕ ನಾಯಿಮಗ ಹೆಸರಿಗೆ ತಕ್ಕಂತೆ ನಾಯಿಯ ಕೊರಳಿಗೆ ಹಾಕುವ ಪಟ್ಟಿಯನ್ನು ತನ್ನ ಕಾಲಿಗೆ ಕಟ್ಟಿಕೊಂಡು ಯಜಮಾನನ ಸೇವೆಯಲ್ಲಿ ತೊಡಗಿರುವ ರೀತಿ, ತೋರುವ ಸ್ವಾಮಿನಿಷ್ಠೆ, ನಾಯಿಯ ತದ್ರೂಪು ಆಗಿ ವರ್ತಿಸುವ ಪಾತ್ರಧಾರಿಯ ಅಭಿನಯ ಮೆಚ್ಚುವಂಥಾದ್ದು. ಅದರಲ್ಲೂ ಯಜಮಾನನ ಕೋಣೆಯ ಹೊರಗೆ ಕಾವಲು ಕಾಯುತ್ತಲಿದ್ದು ಉಳಿದ ಪಾತ್ರಧಾರಿಗಳ ಸಂಭಾಷಣೆಗಳಿಗೆ ತನ್ನ ಹಾವ-ಭಾವ ಹಾಗೂ ಅಂಗಾಭಿನಯದ ಮೂಲಕ ಪ್ರತಿಕ್ರಯಿಸುವುದನ್ನೆ ಪ್ರೇಕ್ಷಕರು ನೋಡುವಂತೆ ಮಾಡುವುದು ನಾಯಿಮಗನ ಕಲಾವಂತಿಕೆಗೆ ಸಾಕ್ಷಿ. ಅದರಲ್ಲೂ ಕಥಾನಾಯಕಿ ಶಾರಿ ಯಾನೆ ಸಂಗೀತಾ ಅವನಿಗೆ ಪ್ರೇಮಾಭಿಷೇಕ ಮಾಡಿ ಸಿದ್ಧರಾಮ ಎಂದು ಪುನರ್‌ ನಾಮಕರಣ ಮಾಡಿ ಅದುವರೆಗೆ ಸ್ವಾಮಿನಿಷ್ಠೆ- ನಾಯಿ ಕೆಲಸವನ್ನು ಬಂಡೆಕಲ್ಲಿನಂತೆ ಚಾಚೂ ತಪ್ಪದಂತೆ ಮಾಡುತ್ತಿದ್ದವನು ಪ್ರೇಮಮೂರ್ತಿಯಾಗಿ ಸ್ಥಿತ್ಯಂತರ ಹೊಂದುವುದನ್ನು ನಾಜೂಕಾಗಿ ಅಭಿನಯಿಸಿದ ಪರಿ ಪ್ರಶಂಸನೀಯ. ಪ್ರೀತಿ-ಪ್ರೇಮದ ಪ್ರಭಾವದಿಂದ ನಾಯಿಮಗ ತನ್ನ ಬಂಧನದಿಂದ ಕಳಚಿಕೊಂಡು ಸಾಹುಕಾರ್‌ ಸೋಮಣ್ಣನಿಗೆ ಎದುರಾಡುವುದು, ಸೋಮಣ್ಣನ ಉಪೇಕ್ಷಿತ ಪತ್ನಿ ಒಂದು ಕಾಲದಲ್ಲಿ ಸೋಮಣ್ಣನಿಂದ ಅತ್ಯಾಚಾರಕ್ಕೊಳಗಾಗಿ ಜೀವ ಕಳೆದುಕೊಂಡವಳ ಪತಿ ಮಾರುತಿಯ ಪ್ರೇಮಪಾಶಕ್ಕೊಳಗಾಗಿ ಅವನೊಂದಿಗೆ ಓಡಿಹೋಗುವುದು, ಕೊನೆಯಲ್ಲಿ ಸೋಮಣ್ಣ ಎಲ್ಲರನ್ನೂ-ಎಲ್ಲವನ್ನೂ ಕಳೆದುಕೊಂಡು ದುಡ್ಡಿಗಿಂತ ಪ್ರೀತಿ-ಪ್ರೇಮವೇ ದೊಡ್ಡದು ಎಂದು ಸಾರುವ ನಾಟಕದ ನಿರ್ದೇಶಕರ ಜಾಣ್ಮೆ, ಸುಮಧುರ ಯಥೋಚಿತ ಹಿನ್ನಲೆ ಸಂಗೀತ, ಯಥಾವತ್‌ ಬೆಳಕಿನ ವ್ಯವಸ್ಥೆ ಒಂದಕ್ಕೊಂದು ಪೂರಕ ಅಂಶಗಳು.

Advertisement

ಮಾರನೇ ದಿನ ದೃಶ್ಯಕಾವ್ಯ ಬೆಂಗಳೂರು ಇವರು ಕೆ.ವೈ. ನಾರಾಯಣ ಸ್ವಾಮಿ ಕೃತ “ಮಾಯಾಬೇಟೆ’ ನಾಟಕವನ್ನು ನಂಜುಂಡೇ ಗೌಡ ಸಿ. ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದರು. ಸ್ತ್ರೀ ಶೋಷಣೆಯೇ ಪ್ರಧಾನ ಕಥಾವಸ್ತುವಾಗುಳ್ಳ ಈ ನಾಟಕ ಸುಶ್ರಾವ್ಯ ಹಿನ್ನಲೆ ಗಾಯನ ಹಾಗೂ ಸುಮಧುರ ಸಂಗೀತದಿಂದಾಗಿ ರಂಜಿಸಿತು, ನಾಟಕಾರಂಭದಲ್ಲಿ ಪಾರಿಜಾತ, ರತುನ ಹಾಗೂ ಲೀಲಾ ಎನ್ನು ಮೂರು ಸ್ತ್ರೀ ಪಾತ್ರಗಳು ತಮ್ಮ ಒಡಲಾಳವನ್ನು ಬಿಚ್ಚಿಟ್ಟ ಪರಿ ಅದ್ಭುತವಾಗಿದ್ದರೂ, ಕಥಯ ಎಳೆಗಳು ಒಂದಕ್ಕೊಂದು ಸಂಬಂಧ ಕಲ್ಪಿಸುವಲ್ಲಿ ಗೊಂದಲ ಸೃಷ್ಟಿಸಿದರೂ, ನಾಟಕ ಮುಂದುವರಿದಂತೆ ಈ ಮೂರು ಪಾತ್ರಗಳ ಸುತ್ತ ಹಣೆಯಲ್ಪಟ್ಟ ಕಥಾಹಂದರ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾದರು. ತನ್ನ ನಿಷ್ಕಪಟ ಪ್ರೀತಿಯನ್ನು ಅನುಮಾನದ ದೃಷ್ಟಿಯಿಂದ ನೋಡುವ ಬೇಟೆಗಾರ ಗೆಳೆಯನು ಲೀಲಾ ತಪ್ಪಿಸಿಕೊಳ್ಳದಂತೆ ಶರವ್ಯೂಹವನ್ನು ರಚಿಸಿ ಬೇಟೆಗಾಗಿ ತಿಂಗಳುಗಟ್ಟಲೆ ಹೊರಗೆ ಹೋಗುವ ಸಂದರ್ಭ ಹೆಣ್ಣಿನ ಶೋಷಣೆಯ ಒಂದು ಮುಖವನ್ನು ತೆರೆದಿಟ್ಟರೆ, ಯುದೊœàನ್ಮಾದದಲ್ಲಿ ಹೆಣ್ಣೊಬ್ಬಳನ್ನು ಮದುವೆಯಾಗಿ ತನ್ನ ಮನೆಗೆ ಕರೆದುಕೊಂಡು ಬಂದ ರತುನಳನ್ನು ಅತ್ತೆ ಮಗನ ಅನುಪಸ್ಥಿತಿಯಲ್ಲಿ ಹಿಂಸಿಸುವ ಪರಿ ಮತ್ತೂಂದು ರೀತಿಯದು. ಪತಿ ಪರದೇಶದಲ್ಲಿದ್ದು ಮಾವನ ಕಾಮುಕತೆಗೆ ಬಲಿಯಗಿ ಮೂಕವಾಗಿ ರೋದಿಸುವ ಪಾರಿಜಾತ ಸ್ತ್ರೀ ಶೋಷಣೆಯ ಮತ್ತೂಂದು ಮುಖವಾಗಿ ಪ್ರಕಟವಾಗುವುದು ನಾಟಕದ ವಿಶೇಷತೆ. ನಿಗೂಢತೆಯನ್ನು ಅಂತ್ಯದವರೆಗೂ ಮುಂದುವರಿಸಿಕೊಂಡು ಕೊನೆಯಲ್ಲಿ ಏನಾಗುತ್ತದೆ ಎನ್ನವ ಕುತೂಹಲ ಪ್ರೇಕ್ಷಕರಲ್ಲಿ ಮೂಡುವಂತೆ ಮಾಡಿದ ನಾಟಕದಲ್ಲಿ ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದರು.

ಜನನಿ ಭಾಸ್ಕರ್‌ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next