ಸಾಮಾನ್ಯವಾಗಿ ಸಿನಿಮಾಗೆ ಎಂಟ್ರಿ ಕೊಡುವ ಬಹುತೇಕ ನಟಿಮಣಿಯರು, ನಟನೆ ಮತ್ತು ಡ್ಯಾನ್ಸ್ ಕುರಿತು ಪಕ್ವಗೊಂಡಿರುತ್ತಾರೆ. ಅವೆರೆಡನ್ನು ನಂಬಿಕೊಂಡು ಇಲ್ಲಿಗೆ ಬಂದವರೇ ಹೆಚ್ಚು. ಆದರೆ, ಸಿನಿಮಾ ಪಾತ್ರಕ್ಕಾಗಿ ಫೈಟ್ ಕಲಿಯೋದು, ಕಾರು ಮತ್ತು ಬೈಕ್ ಓಡಿಸುವುದನ್ನು ಕಲಿಯೋದು ವಿರಳ. ಇಲ್ಲೊಬ್ಬ ನವ ನಾಯಕಿ ಪಾತ್ರ ಡಿಮ್ಯಾಂಡ್ ಮಾಡಿದ್ದಕ್ಕಾಗಿ ಸುಮಾರು ದಿನಗಳ ಕಾಲ ಬುಲೆಟ್ ಓಡಿಸುವುದನ್ನು ಪಕ್ಕಾ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಹೌದು, ಆ ನಟಿ ಬೇರಾರೂ ಅಲ್ಲ, ಚೈತ್ರಾ ಆಚಾರ್.
ಯಾರು ಈ ಹುಡುಗಿ ಎಂಬ ಪ್ರಶ್ನೆ ಕಾಡಿದರೆ, ಹೊಸಬರ “ಮಹಿರ’ ಚಿತ್ರದ ಬಗ್ಗೆ ಹೇಳಬೇಕು. ಈ ವಾರ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಚೈತ್ರಾ ಆಚಾರ್ ನಾಯಕಿ. ಇದು ಇವರ ಮೊದಲ ಚಿತ್ರ. ಚಿತ್ರಕ್ಕೆ ಆಡಿಷನ್ ಮೂಲಕವೇ ಆಯ್ಕೆಯಾಗಿರುವ ಚೈತ್ರಾ ಆಚಾರ್, ಮೊದಲ ಸಲ ಆಡಿಷನ್ ಕೊಟ್ಟಾಗ, ನಿರ್ದೇಶಕರಿಂದ ಯಾವ ಉತ್ತರವೂ ಬರಲಿಲ್ಲವಂತೆ. ಸುಮಾರು 46 ಹುಡುಗಿಯರಿಗೆ ಆಡಿಷನ್ ನಡೆಸಿದ ನಿರ್ದೇಶಕರು, ಕೊನೆಗೆ ಚಿತ್ರದ ಪಾತ್ರಕ್ಕೆ ಚೈತ್ರಾ ಆಚಾರ್ ಅವರೇ ಸೂಕ್ತ ಅಂತ ನಿರ್ಧರಿಸಿ, ಚೈತ್ರಾ ಆಚಾರ್ ಅವರನ್ನೇ ಆಯ್ಕೆ ಮಾಡಿದರಂತೆ.
ತಮ್ಮ ಮೊದಲ ಚಿತ್ರ “ಮಹಿರ’ ಕುರಿತು ಚೈತ್ರಾ ಆಚಾರ್ ಹೇಳುವುದಿಷ್ಟು. “ನಾನು ಪಕ್ಕಾ ಕನ್ನಡದ ಹುಡುಗಿ. ಚಿಕ್ಕಂದಿನಿಂದ ನನಗೆ ಸಿನಿಮಾ ಮತ್ತು ಸ್ವಿಮ್ಮಿಂಗ್ ಅಂದರೆ ಇಷ್ಟ. ಕಾಲೇಜು ದಿನಗಳಲ್ಲಿ ಹವ್ಯಾಸಿ ರಂಗತಂಡದಲ್ಲಿದ್ದ ನನಗೆ, ನಟನೆ ಹೆಚ್ಚು ಆಸಕ್ತಿ ಬೆಳೆಸಿತು. ಓದಿನ ಜೊತೆ ನಟನೆ ಬ್ಯಾಲೆನ್ಸ್ ಮಾಡುತ್ತಲೇ, “ಬೆಂಗಳೂರು ಕ್ವೀನ್ಸ್ ‘ ವೆಬ್‌ಸೀರಿಸ್‌ನಲ್ಲಿ ನಟಿಸಿದೆ. ಹಾಗೆಯೇ, “ಮಹಿರ’ ಚಿತ್ರಕ್ಕೂ ಆಯ್ಕೆಯಾದೆ. ಪಾತ್ರದ ಬಗ್ಗೆ ಹೇಳುವುದಾದರೆ, ನಾನಿಲ್ಲಿ ಬಬ್ಲಿ ಹುಡುಗಿ. ನಟನೆಗೆ ಹೆಚ್ಚು ಜಾಗವಿದೆ.
ಎರಡು ಶೇಡ್ ಇರುವ ಪಾತ್ರದಲ್ಲಿ ಮೊದಲರ್ಧ ಜಾಲಿಯಾದರೆ, ದ್ವಿತಿಯಾರ್ಧ ಗಂಭೀರವಾಗಿರುವ ಪಾತ್ರ. ತುಂಬಾ ತೂಕವಿರುವ ಪಾತ್ರ ಮಾಡಿದ್ದು ಹೆಮ್ಮೆ ಎನಿಸಿದೆ. ಕೋಪ ಬಂದರೆ ವ್ಯಕ್ತಪಡಿಸ್ತಾಳೆ, ಪ್ರೀತಿಯಾದರೆ, ಎಲ್ಲವನ್ನೂ ಅಷ್ಟೇ ಪ್ರೀತಿಸುತ್ತಾಳೆ. ಅವಳಿಗೆ ಅಮ್ಮ ಅಂದರೆ ಎಲ್ಲಿಲ್ಲದ ಪ್ರೀತಿ. ಆಕೆಯನ್ನು ಹೆಸರಿಡದೇ ಕರೆಯೋ ಮಗಳು. ಅಮ್ಮ, ಮಗಳ ಬಾಂಡಿಂಗ್ ಚಿತ್ರದ ಹೈಲೈಟ್. ಪೋಸ್ಟರ್ ನೋಡಿದವರಿಗೆ ಕುತೂಹಲ ಸಹಜವಾಗಿದೆ. ಕಾರಣ, ಇದೊಂದು ವಿಭಿನ್ನ ಪ್ರಯೋಗದ ಚಿತ್ರ. ನಿರ್ದೇಶಕರಿಗೆ ಹೊಸ ಕಲ್ಪನೆಯ ಚಿತ್ರ.
ಇನ್ನು, ಚಿತ್ರದಲ್ಲಿ ನನ್ನ ತಾಯಿ ಪಾತ್ರ ಮಾಡಿರುವ ವರ್ಜೀನಿಯಾ ಅವರಿಂದ ಸಾಕಷ್ಟು ಕಲಿತಿದ್ದೇನೆ. ಇಲ್ಲಿ ವಿನಾಕಾರಣ ಬಿಲ್ಡಪ್ಸ್ ಇಲ್ಲ. ಅದೇ ಚಿತ್ರದ ಗಟ್ಟಿತನ. ಮಹಿಳೆ ಫೈಟ್ ಮಾಡಿದರೆ ಹೇಗಿರಬಹುದು ಎಂಬ ಕಲ್ಪನೆ ಅಸಾಧ್ಯ. ಆದರೆ, ಇಲ್ಲಿ ನನ್ನ ತಾಯಿ ಫೈಟ್ ಮಾಡಿದ್ದಾರೆ. ಅದಕ್ಕಾಗಿ ಅವರು ಸಾಕಷ್ಟು ತರಬೇತಿ ಪಡೆದು, ಯಾವುದೇ ಡೂಪ್ ಇಲ್ಲದೆ ಸಾಹಸ ಮಾಡಿದ್ದಾರೆ. ಒಟ್ಟಾರೆ, “ಮಹಿರ’ ನನಗಷ್ಟೇ ಅಲ್ಲ, ಎಲ್ಲರಿಗೂ ಚಾಲೆಂಜ್ ಆಗಿರುವ ಚಿತ್ರ’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಚೈತ್ರಾ ಆಚಾರ್.