ಒಂದು ಚಿತ್ರ ಅಂದಮೇಲೆ ಒಬ್ಬ ಲೈಟ್‌ಬಾಯ್‌ನಿಂದ ಹಿಡಿದು ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಲೇಬೇಕು. ಎಲ್ಲರ ಪರಿಶ್ರಮದಿಂದಲೇ ಒಂದೊಳ್ಳೆ ಚಿತ್ರ ಹೊರ ಬರೋದು. ಎಷ್ಟೋ ಮಂದಿ ಒಂದು ಚಿತ್ರ ಶುರುವಾಗಿ, ಮುಗಿಯೋ ಹೊತ್ತಿಗೆ ಎಷ್ಟೆಲ್ಲಾ ಕಷ್ಟಪಟ್ಟಿರುತ್ತಾರೆ. ಯೂನಿಟ್‌ನವರಂತೂ ಬೆವರು ಸುರಿಸಿ ಕೆಲಸ ಮಾಡಿರುತ್ತಾರೆ. ಅಷ್ಟೇ ಅಲ್ಲ, ಕ್ಯಾಮೆರಾ ಮುಂದೆ ನಿಲ್ಲುವ ನಟ, ನಟಿಯರ ಶ್ರಮವೂ ಇದಕ್ಕೆ ಹೊರತಲ್ಲ.
ಸಿನಿಮಾಗಾಗಿ, ಕಷ್ಟಪಡೋದು, ಬೆವರು ಸುರಿಸೋದು ಹೊಸ ಸುದ್ದಿಯೇನಲ್ಲ. ಆದರೆ, ಸಿನಿಮಾಗೋಸ್ಕರ ರಕ್ತ ಸುರಿಸೋದು ನಿಜಕ್ಕೂ ಹೊಸ ಸುದ್ದಿಯೇ. ಇಲ್ಲೀಗ ಹೇಳ ಹೊರಟಿರೋದು ನಟಿಯೊಬ್ಬರು ಸಿನಿಮಾಗಾಗಿ ರಕ್ತ ಸುರಿಸಿದ್ದಾರೆ! ಹೌದು, ರಘು ಶಿವಮೊಗ್ಗ ನಿರ್ದೇಶನದ “ಚೂರಿಕಟ್ಟೆ’ ಚಿತ್ರದಲ್ಲಿ ಅಂಥದ್ದೊಂದು ಘಟನೆ ನಡೆದಿದೆ. ಈ ಚಿತ್ರಕ್ಕೆ ಪ್ರವೀಣ್ ನಾಯಕ, ಪ್ರೇರಣಾ ನಾಯಕಿ.
ಈ ಚಿತ್ರದ ದೃಶ್ಯವೊಂದರ ಚಿತ್ರೀಕರಣ ನಡೆಯುವಾಗ, ಸಣ್ಣದ್ದೊಂದು ಅವಘಡ ಸಂಭವಿಸಿ, ಪ್ರೇರಣಾ ಹಣೆಯಿಂದ ರಕ್ತ ಸುರಿದಿದೆ. ಈ ವಿಷಯವನ್ನು ಹೊರಹಾಕಿದ್ದು, ಅಚ್ಯುತ್. “ಚೂರಿಕಟ್ಟೆ’ ಚಿತ್ರದಲ್ಲಿ ಅಚ್ಯುತ್ ಅರಣ್ಯ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ದೃಶ್ಯದಲ್ಲಿ ಅಚ್ಯುತ್ ಕೈಯಲ್ಲಿದ್ದ ಗನ್, ಪ್ರೇರಣಾ ಅವರ ಹಣೆಗೆ ತಗುಲಿ ಹಣೆಯಿಂದ ರಕ್ತ ಸುರಿದಿದೆ.
ತಕ್ಷಣವೇ, ಅಲ್ಲಿದ್ದವರೆಲ್ಲೂ ಗಾಬರಿಗೊಂಡು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ, ಆ ದೃಶ್ಯವನ್ನು ಮುಗಿಸಲೇಬೇಕಿತ್ತು. ಆದರೆ, ಹಣೆಗೆ ಬಟ್ಟೆ ಕಟ್ಟಿಕೊಂಡು ಹೇಗೆ ಆ ದೃಶ್ಯದಲ್ಲಿ ಪಾಲ್ಗೊಳ್ಳಬೇಕು? ಕಂಟಿನ್ಯುಟಿ ಬೇರೆ ಮಿಸ್ ಆಗಿಬಿಡುತ್ತೆ. ಕೊನೆಗೆ ನಿರ್ದೇಶಕರು ಚಿತ್ರತಂಡದವರೊಂದಿಗೆ ಚರ್ಚಿಸಿ, ಆ ದೃಶ್ಯವನ್ನು ಮುಗಿಸಿದ್ದಾರೆ. ಹಣೆಗೆ ಪೆಟ್ಟು ಬಿದ್ದಿದ್ದರೂ, ಪ್ರೇರಣಾ ಅವರನ್ನು ನೇರವಾಗಿ ಕ್ಯಾಮೆರಾ ಮುಂದೆ ತೋರಿಸದೆ, ಸೈಡ್ ಆ್ಯಂಗಲ್‌ನಲ್ಲಿ ನಿಲ್ಲಿಸಿ, ಆ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.
ಅಲ್ಲಿಗೆ ಕ್ಯಾಮೆರಾದಲ್ಲಿ ಗಾಯಗೊಂಡಿದ್ದು ಒಂದಷ್ಟೂ ಕಾಣಿಸಿಲ್ಲ. ಅಷ್ಟರಮಟ್ಟಿಗೆ ಎಲ್ಲರೂ ಆ ದೃಶ್ಯವನ್ನು ಯಶಸ್ವಿಗೊಳಿಸಿದ್ದಾರೆ.ಇಡೀ ತಂಡ, ಪ್ರೇರಣಾ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿದ್ದಲ್ಲದೆ, ಸಿನಿಮಾಗಾಗಿ ಅದೆಷ್ಟೋ ಮಂದಿ ಬೆವರು ಸುರಿಸಿದರೆ, ಪ್ರೇರಣಾ ಮಾತ್ರ ರಕ್ತದಾನ ಮಾಡಿದ್ದಾರೆ ಅಂತ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಅಂದಹಾಗೆ, ನಿರ್ದೇಶಕ ರಘು ಶಿವಮೊಗ್ಗ ಅವರು “ಚೌಕಾಬಾರ’ ಬಳಿಕ “ಚೂರಿಕಟ್ಟೆ’ ನಿರ್ದೇಶಿಸಿದ್ದಾರೆ.
ನಯಾಜ್ ಮತ್ತು ತುಳಸಿರಾಮುಡು ನಿರ್ಮಾಣದ ಈ ಚಿತ್ರಕ್ಕೆ ಕೈಲಾಶ್ ಕಥೆ ಬರೆದಿದ್ದಾರೆ. ಅರವಿಂದ್ ಚಿತ್ರಕಥೆ ಬರೆದಿದ್ದಾರೆ. ಇದೊಂದು ಟಂಬರ್ ಮಾಫಿಯಾ ಕುರಿತ ಕಥೆ. ಚಿತ್ರದಲ್ಲಿ ದತ್ತಣ್ಣ, ಮಂಜುನಾಥ್ ಹೆಗಡೆ, ಬಾಲಾಜಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನೊಬಿನ್‌ಪಾಲ್ ಹಿನ್ನೆಲೆ ಸಂಗೀತವಿದೆ. ಅದ್ವೆ„ತ ಗುರುಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ.