ಚಿತ್ರದುರ್ಗ: ಹೆಲ್ಮೆಟ್ ಮತ್ತು ವಾಹನ ಚಾಲನಾ ಪರವಾನಗಿ ಇಲ್ಲದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ರೇವತಿ ತಡೆದು ದಂಡ ವಿಧಿಸಿದರು. ಮದಕರಿನಾಯಕ ಪ್ರತಿಮೆ ಸಮೀಪ ಸಂಚಾರಿ ಠಾಣೆ ಪಿಎಸ್‌ಐ ರೇವತಿ ಕೈಯಲ್ಲಿ ಲಾಠಿ ಹಿಡಿದು ರಸ್ತೆಗಿಳಿದರು.
ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ಹಾಗೂ ದಾಖಲೆಗಳಿಲ್ಲದ ಓಡಿಸುತ್ತಿದ್ದ ಆಟೋ ಹಾಗೂ ಇತರೆ ವಾಹನಗಳಿಂದಲೂ ದಂಡ ವಸೂಲಿ ಮಾಡಿದರು.
ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿದ್ದುದನ್ನು ದೂರದಿಂದ ಗಮನಿಸಿದ ಕೆಲವು ದ್ವಿಚಕ್ರ ವಾಹನ ಚಾಲಕರು ತಮ್ಮ ವಾಹನಗಳನ್ನು ಹಿಂದಕ್ಕೆ ತಿರುಗಿಸಿಕೊಂಡು ಪಲಾಯನಗೈದರು. ಮದ್ಯ ಸೇವಿಸಿ ದ್ವಿಚಕ್ರವಾಹನ ಓಡಿಸುತ್ತಿದ್ದ ಕೆಲವು ಚಾಲಕರು ರೇವತಿಯವರ ಕೈಗೆ ಸಿಕ್ಕಿ ಬಿದ್ದು ದಂಡ ತೆತ್ತರು. ವೇಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನಗಳಿಗೆ ಲಾಠಿಯನ್ನು ಅಡ್ಡ ಇಟ್ಟು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸುವಂತೆ ಸೂಚಿಸಿದಾಗ ಕೆಲವರು ತಮ್ಮ ಗುರುತಿನಚೀಟಿಗಳನ್ನು ತೋರಿಸಿ ತುರ್ತಾಗಿ ಹೋಗಬೇಕಿದೆ ಬಿಡಿ ಎಂದು ಕೇಳಿಕೊಳ್ಳುತ್ತಿದ್ದರು.
ಅದಕ್ಕೆ ಬುದ್ಧಿವಂತರೇ ಕಾನೂನು ಗೌರವಿಸದಿದ್ದರೆ ಹೇಗೆ ಎಂದು ನಯವಾಗಿಯೇ ತಿಳಿಸಿದ ರೇವತಿ ದಂಡ ಕಟ್ಟಿಸುತ್ತಿದ್ದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ಚಿತ್ರದುರ್ಗದಲ್ಲಿ ಸಾಕಷ್ಟು ಮಂದಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಎಲ್ಲರೂ ಹೆಲ್ಮೆಟ್ ಧರಿಸುವಂತೆ ಮಾಡುವುದು ನಮ್ಮ ಉದ್ದೇಶ. ಅದೇ ರೀತಿ ವಾಹನಗಳ
ದಾಖಲೆಗಳನ್ನು ಪರಿಶೀಲಿಸುವುದು ಅತಿ ಮುಖ್ಯವಾಗಿದ್ದು, ಕಾನೂನನ್ನು ಗೌರವಿಸುವ ಜಾಗೃತಿ ಜನರಲ್ಲಿ ಮೂಡಬೇಕಿದೆ ಎಂದು ಪಿಎಸ್‌ಐ ರೇವತಿ ತಿಳಿಸಿದರು.