Advertisement
ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ. ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆ ಮಾಡಿತ್ತು. ಆದರೆ, ಇದೇ ಸಮಯದಲ್ಲಿ ವರುಣನ ಆಗಮನ ಹಾಗೂ ಹವಾಮಾನ ತಜ್ಞರ ಮುನ್ಸೂಚನೆಯು ಜನರ ಆತಂಕ ತಕ್ಕಮಟ್ಟಿಗೆ ದೂರ ಮಾಡಿದೆ. ರಾಜ್ಯದಲ್ಲಿ “ಬೇಸಿಗೆಯ ಪೀಕ್’ ಅಂದರೆ ಮೇನಲ್ಲೂ ಮಳೆಯ ದಿನಗಳು ಹೆಚ್ಚು ಇರಲಿದ್ದು, ಇದರಿಂದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಪಮಾನ ಕಡಿಮೆ ಇರಲಿದೆ.
Related Articles
Advertisement
ಕಾರಣವೇನು? ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾದ ವೇಳೆ ಸಹಜವಾಗಿ ಮಳೆ ಬರುತ್ತದೆ. (ವೈಜ್ಞಾನಿಕವಾಗಿ ಇದನ್ನು “ಅಪ್ ಡ್ರಾಫ್ಟ್’ ಎನ್ನಲಾಗುತ್ತದೆ) ಅದೇ ರೀತಿ, ಏಪ್ರಿಲ್‌ನಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಮೇನಲ್ಲಿ ಹೆಚ್ಚಿನ ಮಳೆಯ ದಿನಗಳು ಇರುತ್ತವೆ. ಬಿಸಿಲು ಕೂಡ ಇರುತ್ತದೆ. ಆದರೆ, ತಾಪಮಾನ ಏರಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂಗಾರು ಮೇಲೆ ಪರಿಣಾಮವಿಲ್ಲ: ಪೂರ್ವ ಮುಂಗಾರು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾದರೆ ಅಥವಾ ತಾಪಮಾನ ಕಡಿಮೆಯಾಗುವುದರಿಂದ ಮುಂಗಾರು ಮಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಏಪ್ರಿಲ್‌ನಲ್ಲಿ ವರದಿ ನೀಡಿರುವಂತೆ ಸಾಮಾನ್ಯ ಮುಂಗಾರು ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಎಂದಿನಂತೆ ಮುಂಗಾರು ಮಾರುತಗಳು ಮಳೆ ಸುರಿಸಲಿವೆ ಎಂದು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನಿ ಎ. ಪ್ರಸಾದ್ ಹೇಳುತ್ತಾರೆ.
–ಎನ್.ಎಲ್.ಶಿವಮಾದು