ಭಾರವಾದ ಮನಸ್ಸು. ರೋಷಾಗ್ನಿ ತುಂಬಿದ ಹೃದಯ. ಅದೆಲ್ಲವನ್ನೂ ಮೀರಿಸುವ ಗಾಢವಾದ ಶೋಕ. ಉಗ್ರರ ರಣಹೇಡಿ ದಾಳಿಗೆ ಜೀವ ತೆತ್ತ 40 ಸೈನಿಕರ ಪಾರ್ಥಿವ ಶರೀರಗಳು ಅವರವರ ಹಳ್ಳಿಗಳಿಗೆ ಶನಿವಾರ ತಲುಪಿದಾಗ ಎಲ್ಲೆಡೆ ಜನವೋ ಜನ, ಅತ್ಯಂತ ಭಾವುಕತೆಯಿಂದ ಕಂಬನಿ ಮಿಡಿದು ಬಲಿದಾನಗೈದ ಯೋಧರಿಗೆ ಕಂಬನಿಯ ವಿದಾಯ ಹೇಳಿದರು. ಈ ಭಾವಕ್ಕೆ ಅನುಕಂಪಕ್ಕೆ ಜಾತಿ-ಧರ್ಮದ ಹಂಗಿರಲಿಲ್ಲ. ಮೇಲು, ಕೀಳಿನ ಸಂಕೋಲೆಯಿರಲಿಲ್ಲ. ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡ ಭಾವವೇ ಎಲ್ಲೆಲ್ಲೂ ಅಭಿವ್ಯಕ್ತಗೊಂಡಿತ್ತು.
ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಶೋಕವೇ: ಉತ್ತರ ಪ್ರದೇಶದ ಕನ್ನೋಜ್ ಜಿಲ್ಲೆಯ ಟಿವ್ರಾ ಹಳ್ಳಿಗೆ ಬೆಳಗ್ಗೆ 9ಕ್ಕೆ ಆಗಮಿಸಿದ ಯೋಧ ಪ್ರದೀಪ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಆ ಊರಿನ ಜನ ಬೆಳಗಿನ ಜಾವದಿಂದಲೇ ಕಾದುಕುಳಿತಿದ್ದರು. ಪ್ರದೀಪ್ ಕುಟುಂಬದ ದುಃಖದಲ್ಲಿ ಭಾಗಿಯಾದ ಸಾವಿರಾರು ಜನ ಆ ಹೆಮ್ಮೆಯ ಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು.
ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಯೋಧ ಅಜಿತ್ ಕುಮಾರ್ ಆಜಾದ್‌ರ ಪಾರ್ಥಿವ ಶರೀರವನ್ನು ಬೆಳಗ್ಗೆ 7 ಗಂಟೆಗೆ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ ದಾಗ, ಅವರ ರೋದನ ಮುಗಿಲು ಮುಟ್ಟಿತ್ತು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಜಿತ್ ಅಗಲಿದ್ದಾರೆ.
ಪಂಜಾಬ್‌ನ ಮೋಗಾದಲ್ಲಿ, ಸಿಆರ್‌ಪಿಎಫ್ ಚಾಲಕ ಜೈಮರ್ ಸಿಂಗ್ ಅವರ ಪಾರ್ಥಿವ ಶರೀರ ಬೆಳಗ್ಗೆ ಆಗಮಿಸಿತು. ಸಿಆರ್‌ಪಿಎಫ್ನಲ್ಲಿ ಚಾಲಕರಾಗಿದ್ದ ಅವರು, ಗುರುವಾರ ಉಗ್ರರ ದಾಳಿಗೆ ತುತ್ತಾದ ಬಸ್ಸನ್ನು ಚಾಲನೆ ಮಾಡಿದ್ದರು. ಮಧ್ಯಾಹ್ನ ಅವರ ಅಂತ್ಯಸಂಸ್ಕಾರ ನಡೆಯಿತು. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ರಾಟಕ್ ಕುಮಾರ್ ಠಾಕೂರ್ ಹಾಗೂ ಸಿಆರ್‌ಪಿಎಫ್ ಮುಖ್ಯ ಪೇದೆ ಸಂಜಯ್ ಕುಮಾರ್ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು.
ಹೃದಯ ಸಮುದ್ರ ಕಲಕಿ… ಆಗ್ರಾದ ಕೆಹರಾಯಿ ಹಳ್ಳಿಯಲ್ಲಿ, ಕೌಶಲ್ ಕುಮಾರ್ ರಾವತ್ ಅವರ ಶರೀರ ಗ್ರಾಮ ತಲುಪುತ್ತಲೇ ಜನ ರೊಚ್ಚಿಗೆದ್ದು, ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ರಾವತ್ ತಂದೆ, ಗೀತಾ ರಾಮ್ ರಾವತ್ ಮಾತನಾಡಿ, ಪಾಕಿಸ್ಥಾನಕ್ಕೆ ಭಾರತ ತಕ್ಕ ಶಾಸ್ತಿ ಮಾಡಲೇಬೇಕೆಂದು ಆಗ್ರಹಿಸಿದರು. ಆಕ್ರೋಶ ಭರಿತರಾದ ಜನ ಉಗ್ರರ ಹುಟ್ಟಗಿಸಬೇಕೆಂದು ಘೋಷಣೆ ಕೂಗಿದರು.
ಪಟ್ಟು ಹಿಡಿದ ಸಂಬಂಧಿ: ವಾರಾಣಸಿಯ ತೋಫಾಪುರ ಹಳ್ಳಿಯಲ್ಲಿ ರಮೇಶ್ ಯಾದವ್ ಅವರ ಪಾರ್ಥಿವ ಶರೀರ ಬೆಳಗ್ಗೆ 8:30ಕ್ಕೆ ಆಗಮಿಸಿತು. ದಾರಿ ಇಕ್ಕೆಲಗಳಲ್ಲಿ ನಿಂತಿದ್ದ ಹಳ್ಳಿ ಜನ ಕೈಯ್ಯಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು “ರಮೇಶ್ ಯಾದವ್ ಅಮರ್ ರಹೇ’ ಎಂದು ಘೋಷಣೆ ಕೂಗುತ್ತಿದ್ದರು. ಇವರ ಅಂತ್ಯ ಸಂಸ್ಕಾರದ ವೇಳೆ ರಮೇಶ್ ಯಾದವ್ ಸಂಬಂಧಿಯೊಬ್ಬರು, ಹಳ್ಳಿಗೆ ಒಂದು ಪೆಟ್ರೋಲ್ ಪಂಪ್ ಹಾಗೂ ಟಾರ್ ರಸ್ತೆ ಮಾಡಿಸಬೇಕೆಂದು ಪಟ್ಟು ಹಿಡಿದರು. ಸಚಿವ ಅನಿಲ್ ರಾಜಭರ್ ಅವರು ಈ ಬಗ್ಗೆ ಆಶ್ವಾಸನೆ ನೀಡಿದ ನಂತರ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡಲಾಯಿತು.