Advertisement
ಪರಸ್ಪರ ಕಲೆತು, ಬೆರೆತು ನಡೆಯುವುದೇ ಬಾಳು. ಅಂತಿಪ್ಪ ಬಾಳಲ್ಲಿ ಕೆಲವೊಂದು ಅಡ್ಜಸ್ಟ್‌ಮೆಂಟ್, ಕೊಡು-ಕೊಳ್ಳುವಿಕೆ ಇರಬೇಕಾದದ್ದೇ. ಕೊಡು-ಕೊಳ್ಳುವಿಕೆಯ ಪ್ರಮಾಣ ವ್ಯತ್ಯಸ್ತವಾಗಬಹುದು, ಬಯಸಿದ್ದಷ್ಟು ಸಿಗದೆ ಇರಬಹುದು, ಕೆಲವೊಮ್ಮೆ ತುಸು ಹೆಚ್ಚೇ ಪಡಕೊಂಡಿದ್ದಿರಬಹುದು ಅಥವಾ ಹೆಚ್ಚೇ ಕೊಟ್ಟಿದ್ದಿರಬಹುದು. ಹಾಗಂತ ಅವುಗಳ ಲೆಕ್ಕಪಟ್ಟಿಯನ್ನು ಹಿಡಕೊಂಡು ಎದುರ-ಬದುರ ನಿಂತು ಜಗ್ಗುವುದಿದೆ ನೋಡಿ ದೊಡ್ಡ ದುರಂತ ಕಣ್ರೀ. ತೀರಾ ಕೆಲವೊಮ್ಮೆ ಇನ್ನೊಬ್ಬರನ್ನು ಹೆಚ್ಚೇ ಅವಲಂಬಿಸಿ ಬಿಡುತ್ತೇವೆ. ಬದುಕಿನ ಏರಿಳಿತಗಳು ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಅಬ್ಬರ-ಇಳಿತಗಳು ಸಾಮಾನ್ಯ. ನಮ್ಮ ನಡವಳಿಕೆ, ನಾವು ತೋರುವ ಪ್ರೀತಿ ಮತ್ತು ಕಾಳಜಿಯು ನಿಷ್ಕಲ್ಮಶವಾಗಿದ್ದಲ್ಲಿ ಬಾಳ ಯಾತ್ರೆಯ ಯಾವುದೋ ಒಂದು ಘಟ್ಟದಲ್ಲಿ ನಮಗದು ಪ್ರಾಪ್ತಿಸುತ್ತದೆ. ಇನ್ನೊಬ್ಬರಿಗೆ ತೋರುವ ಕಾಳಜಿಯು ಅವರನ್ನು ಕಳೆದು ಕೊಳ್ಳಬಾರದು ಎಂಬ ಪ್ರೀತಿ, ಮಮಕಾರವೇ ಹೊರತು ಮತ್ತೇ ನಲ್ಲ. ಆದರೆ ಅದನ್ನೇ ಅವರು “ನಾವಿಲ್ಲದೆ ಇನ್ನಿಲ್ಲ, ನಾವೇ ಎಲ್ಲ’ ಎಂಬ ಭಾವನೆಯಲ್ಲಿ ತೇಲಿದರೆ, ಮುಳುಗಲು ಹೆಚ್ಚಿನ ಹೊತ್ತೇನು ಬೇಕಿಲ್ಲ. ಸಂಕಟದ-ನೋವಿನ ಕರೆ ಕಿವಿಗೆ ತಲುಪಲಿಲ್ಲವೆಂದರೆ ಬೌದ್ಧಿಕ ಪ್ರಪಂಚದವರಲ್ಲೊಬ್ಬರಾಗಿರುವುದು ಕೂಡ ದಂಡ.
Related Articles
Advertisement
ಬದುಕಿನ ಎಲ್ಲಾ ಕ್ಷಣಗಳು, ಘಟನೆಗಳು ಸಂತೋಷದಾಯ ಕವೂ, ಸಮಾಧಾನಕರವೂ ಆಗಿರಲಾರದು. ಆದರೆ ಬೇರೆಯವರ ಕಂಗಳಲ್ಲಿ ನಮ್ಮ ಬಗೆಯ ಕಾಳಜಿಯನ್ನು ನೋಡಿದಾಗ ಆಗುವ ಖುಷಿಯನ್ನು ವರ್ಣಿಸುವಲ್ಲಿ ಪದಗಳೇ ಸೋತುಬಿಡುತ್ತವೆ. ಖುಷಿಯನ್ನು ಹೀಗೂ ಅನುಭವಿಸಬಹುದೇ? ಎಂಬ ಜಿಜ್ಞಾಸೆ ಯೊಂದು ಆ ಘಟ್ಟದಲ್ಲಿ ಮೂಡುವುದು ಸುಳ್ಳಲ್ಲ. ಯಾರೂ ಯಾರಿಗೂ ತಲೆಬಾಗದೆ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವಂತಿರ ಬೇಕು. ಯಾರಿಂದಲೋ ಮೋಸಹೋದರೆ ಮೂರ್ಖರೆಂದೋ, ಲೆಕ್ಕಾಚಾರ ತಪ್ಪಾದರೆ ಹೆಡ್ಡರೆಂದೋ, ಅವಮಾನಿತರಾದರೆ ವ್ಯಕ್ತಿತ್ವ ಸರಿ ಇಲ್ಲವೆಂದೋ, ನೆನೆದಂತೆ ಬಾಳು ನಡೆಯುತ್ತಿಲ್ಲವೆಂದರೆ ಹಣೆಬರಹ ಸರಿಯಿಲ್ಲವೆಂದಲ್ಲ. ಇವುಗಳೆಲ್ಲಾ ಬದುಕು ಕಲಿಸುವ ಪಾಠಗಳು. ಪದೇ ಪದೇ ಹೀಗಾದಾಗ, ಬದುಕು ಕಲಿಸಿದ ಪಾಠವನ್ನು ಸರಿಯಾಗಿ ಮನನ ಮಾಡಿಕೊಳ್ಳಲಿಲ್ಲವೆಂದರ್ಥ. ಎಲ್ಲವೂ ಕ್ಷಣ ಮಾತ್ರದಲ್ಲಿ ಒದಗುವ ಕೊಳ್ಳುಬಾಕ ಯುಗದಲ್ಲಿ ಯಾವುದಕ್ಕೆ ಕೊರತೆಯಿದೆ ಹೇಳಿ? ಕೊರತೆ ಇರುವುದೇ ಆದಲ್ಲಿ ಅದು ಪ್ರೀತಿ ಮತ್ತು ನಂಬಿಕೆಗಳಿಗೆ ಮಾತ್ರ. ಅವುಗಳ ದಾಸ್ತಾನು ಯಥೇತ್ಛವಾಗಿದ್ದಲ್ಲಿ ಯಾರನ್ನಾದರೂ ಗೆಲ್ಲಬಹುದು, ಅದೆಂತಹ ಬಂಧವನ್ನಾದರೂ ಉಳಿಸಿಕೊಳ್ಳಬಹುದು, ಎಂತಹವರೊಂದಿಗೂ ವ್ಯವಹರಿಸಬಹುದು. ಸುಲಭವಾಗಿ ದಕ್ಕಿಸಿಕೊಳ್ಳಬೇಕಾದದ್ದನ್ನು ಅದೆಷ್ಟು ಕ್ಲಿಷ್ಟಕರವನ್ನಾಗಿಸಿಕೊಳ್ಳುತ್ತೇವೆಯಲ್ಲ! ಉಳಿ ತಾಕಿದ ಶಿಲೆ ಶಿಲ್ಪವಾದರೆ, ಸುಟ್ಟುಕೊಂಡ ಬತ್ತಿ ಬೆಳಕಾಗುತ್ತದೆ. ಕಷ್ಟವಿಲ್ಲದೆ ಬದುಕಿಲ್ಲ, ಸುಟ್ಟುಕೊಳ್ಳದ ದೇಹವಿಲ್ಲ. ಕಷ್ಟದಲ್ಲೂ ಬದುಕಿನ ಬಗೆಗಿನ ಅದಮ್ಯ ಉತ್ಸಾಹವಿದೆಯಲ್ಲ ಅದುವೇ ಮುಂದೆ ಒದಗಿ ಬರಲಿರುವ ಸುಖದ ಬದುಕಿನ ಅಡಿಪಾಯ. ಬದುಕು ನಿಂತಿರುವುದೇ ಜೀವನೋತ್ಸಾಹದ ಮೇಲೆ. ಬಿ¨ªಾಗ ಕುಗ್ಗದೆ, ಗೆ¨ªಾಗ ಬೀಗದೆ. ಸಮಚಿತ್ತತೆಯನ್ನು ಕಾಪಾಡಿಕೊಂಡು ಬಂದಲ್ಲಿ ಬದುಕೊಂದು ನವನವೀನ. ಸಮಚಿತ್ತತೆಯನ್ನು ಅಳವಡಿಸಿಕೊಳ್ಳು ವುದು ಸುಲಭ ಕಾರ್ಯವಲ್ಲ. ವಿವೇಕದ ಎಚ್ಚರವಿದ್ದಲ್ಲಿ ಅಳವಡಿಸಿ ಕೊಳ್ಳುವುದು ಸುಲಭ. ವಿವೇಕದ ಅರಿವು ಬದುಕಿನ ಬಹಳಷ್ಟು ಗೊಂದಲಗಳನ್ನು ನಿವಾರಿಸಿಬಿಡುತ್ತದೆ. ಅಂತಹ ಅರಿವಿನೆಡೆಗೆ ನಮ್ಮ ನಡೆಯಾಗಬೇಕು. ಬದುಕನ್ನು ಆಗಾಗ ರೀವೈಂಡ್ ಮೋಡ್‌ಗೆ ಹಾಕಿ ರಿಫ್ರೆಶ್ ಆಗುತ್ತಿರಬೇಕು. ನಾವು ಸತ್ತ ಮೇಲೆಯೇ ನಮ್ಮನ್ನು ಇತರರು ಅರ್ಥ ಮಾಡಿಕೊಳ್ಳಬೇಕಾದ ದುರ್ಗತಿ ಬರಬಾರದು.
ಮನಸ್ಸನ್ನು ಕಾಡುವ ಇಚ್ಛೆಗಳನ್ನು ಸಂತೃಪ್ತಿಪಡಿಸದಿದ್ದರೆ ಅವುಗಳಿಂದ ಬಿಡುಗಡೆಯಿಲ್ಲವಂತೆ! ಹೃದಯವು ಸಾಧನೆಯಿಂದ ಮೃದುವಾಗದೆ ಹೋದಲ್ಲಿ ಸಾಧನೆಯೇ ನಿರುಪಯುಕ್ತ. ಈಶೋಪನಿಷತ್ತಿನಲ್ಲಿ ಹೇಳಿದಂತೆ “ತ್ಯಜಿಸಿ ಹರ್ಷಿಸಬೇಕು’. ನಮ್ಮದೇನಿದ್ದರೂ ಆರಿಸಿಕೊಂಡ ಬದುಕಲ್ಲವಲ್ಲ! ಬದುಕೇ ನಮ್ಮನ್ನು ಆರಿಸಿಕೊಂಡದ್ದು. ಕ್ಷೇತ್ರವೊಂದು ತಯಾರಾಯಿತು ನಾವಲ್ಲಿ ಮೊಳಕೆಯೊಡೆದೆವು. ಅಷ್ಟೆ. ಮುಂದಿನದ್ದು ನಾವು ಕಟ್ಟಿಕೊಳ್ಳಲಿರುವ ಬದುಕು. ಅದು ಹೇಗೆ? ಏನು? ಎಂಬುದನ್ನು ಕೂಡಾ ನಿರ್ಧರಿಸುವವರು ಖಂಡಿತಾ ನಾವಲ್ಲ. ಯಾವುದೂ ನಾವಲ್ಲ ವಾದರೆ ನಾವು ಯಾರು? ಏನು? ಮುಂದಿನ ದಾರಿ ಯಾವುದು? ಈ ಎಲ್ಲಾ ಪ್ರಶ್ನೆಗಳ ನಿರಂತರ ಹುಡುಕಾಟವೇ ಬದುಕು. ಹಾಗಾದರೆ ಪ್ರತಿಯೊಂದು ಕಾರ್ಯದಲ್ಲೂ ಅಗಮ್ಯ ಸ್ಥಾನದತ್ತ ತಲುಪಲು ಇಚ್ಛಿಸುವ ಯಾತ್ರೆಯನ್ನು ಬದುಕು ಎನ್ನಬಹುದೇ? ಇಲ್ಲಿ ನನ್ನದು ಎನ್ನುವುದು ಕೇವಲ ತೋರಿಕೆಯದ್ದು. ಎಲ್ಲವೂ ಅವನಿಂದ ದೊರೆತ ಬಳುವಳಿ. ಹಾಗಾಗಿ ಯಾಕೆ ಹೂಡ್ತಿರಾ ಸುಖಾ ಸುಮ್ಮನೆ ಚಳುವಳಿ? ಇರಲಿ ಒಂದಿಷ್ಟು ಕಳಕಳಿ. ಜೈಕಾರ, ಘೋಷಣೆಗಳ ಮೆರವಣಿಗೆಯಲ್ಲಿ ಯಡವಟ್ಟುಗಳು, ಅವಾಂತರ ಗಳು ನಿರಂತರ. ಒಟ್ನಲ್ಲಿ ಸಂಭ್ರಮಿಸುವ ಬಗೆಯನ್ನು ಮಾತ್ರ ತಿಳಿಯದಾಗುತ್ತೇವೆ. ಅಂತೂ ಇಂತೂ ಸಂಭ್ರಮಿಸುವ ಗಳಿಗೆ ಬಂದಾಗ ವಿದಾಯದ ಮೆಟ್ಟಲಿಳಿಯಲು ಸಜ್ಜಾಗಿರುತ್ತೇವೆ. ಬದುಕು ಇಷ್ಟೇನಾ? ಎಂದುಕೊಳ್ಳುತ್ತಲೇ, ಛೇ…ಎಷ್ಟೆಲ್ಲಾ ಕ ಕೊಂಡೆ ನಲ್ಲ ಎಂದು ಹಿಂದುರುಗಿ ಕೈ ಚಾಚಲು ಯಾತ್ರೆಯು ತನ್ನ ಕೊನೆಯ ಹಂತವನ್ನು ತಲುಪಿರುತ್ತದೆ. ಹೃದಯ ಕಮಲದಲ್ಲಿ ದಿವ್ಯ ಬೆಳಕೊಂದು ಬೆಳಗುವ ಉತ್ಸುಕತೆಯಲ್ಲಿರುತ್ತದೆ.
ಸಂತೋಷ್ ಅನಂತಪುರ