ಶಹಾಪುರ: ಗ್ರಾಮೀಣ ಭಾಗದಲ್ಲಿಯೇ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕಿದೆ. ಇಂತಹ ಶಿಬಿರಗಳಿಂದ ಗ್ರಾಮೀಣ ಭಾಗದ ಬಡ ಜನರ ಆರೋಗ್ಯ ಸುಧಾರಿಸಲು ಸಹಕಾರಿಯಾಗಲಿದೆ ಎಂದು ವೈದ್ಯ ಡಾ| ಚಂದ್ರಶೇಖರ ಸುಬೇದಾರ ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ಸ್ವಾತಂತ್ತ್ಯ ಹೋರಾಟಗಾರ ದಿ| ಅಚ್ಚಪ್ಪಗೌಡ ಸುಬೇದಾರ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ದಿ| ಅಚ್ಚಪ್ಪಗೌಡ ಸುಬೇದಾರ ಅರ್ಬನ್ ಮತ್ತು ರೂರಲ್ ಟ್ರಸ್ಟ್ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಯಾಂತ್ರಿಕ ಬದುಕಿನತ್ತ ಸಾಗುತ್ತಿದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ ಬಡವರಿಗೆ ಅನುಕೂಲಕರವಾಗಲು ಇಂತಹ ಉಚಿತ ಆರೊಗ್ಯ ಶಿಬಿರಗಳು ಅಗತ್ಯವಾಗಿವೆ ಎಂದರು.
ಬೆಂಗಳೂರಿನ ನುರಿತ ವೈದ್ಯ ಡಾ| ರಿಷಬ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್, ಹೃದಯ ರೋಗ, ಕಿಡ್ನಿ ಕಾಯಿಲೆಗಳಿಗೆ ಹೆಚ್ಚೆಚ್ಚು ಜನರು ತುತ್ತಾಗುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಪಡೆಯಲಾಗದೆ ಗ್ರಾಮೀಣ ಭಾಗದ ಜನರು ಜೀವನ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.
ಶಿಬಿರದಲ್ಲಿ 210 ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದಾಗ ಇದರಲ್ಲಿ 9 ಹೃದಯರೋಗ, 4 ಕಿಡ್ನಿ ಕಾಯಿಲೆ, 2 ನರ ರೋಗ, 2 ಮಕ್ಕಳ ಕಾಯಿಲೆ, 1 ಕ್ಯಾನ್ಸರ್ ರೋಗಿಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಉಚಿತ ಚಿಕಿತ್ಸೆಗಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಸೂಚಿಸಲಾಯಿತು. ಈ ಶಿಬಿರದಲ್ಲಿ ಉಚಿತವಾಗಿ ಇಸಿಜಿ, ಇಕೋ, ಸಾಮಾನ್ಯ ತಪಾಸಣೆ, ಉಚಿತ ಔಷಧಿ ವಿತರಣೆ ಮಾಡಲಾಯಿತು. ಸಪ್ತಗಿರಿ ಆಸ್ಪತ್ರೆಯ ಡಾ| ನಿಖೀಲ್, ಡಾ| ಫಿರೋಜ್, ಆನಂದಗೌಡ ಸುಬೇದಾರ್, ಲಿಂಗನಗೌಡ ಮಾಲಿಪಾಟೀಲ, ಕರನ್ ಸುಬೇದಾರ ಇದ್ದರು.