ಬೆಂಗಳೂರು: ಮದ್ಯ ಅಥವಾ ಮಾದಕ ವಸ್ತು ವ್ಯಸನಿಯಾಗಿದ್ದರೆ ಅಂತಹ ವ್ಯಕ್ತಿಯನ್ನು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಸನ ಮುಕ್ತ ಕೇಂದ್ರದ ಹೆಸರಿನಲ್ಲೇ ಡ್ರಗ್ಸ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಶ್ರೀನಿವಾಸ ನಗರದ ನಿವಾಸಿ ಸುಹಾಸ್‌ಗೌಡ ಅಲಿಯಾಸ್ ಸೂರಜ್‌ಗೌಡ (32) ಬಂಧಿತ. ಆರೋಪಿಯಿಂದ 11.3 ಗ್ರಾಂ ಎಂಡಿಎಂಎ, 3.5 ಗ್ರಾಂ ಎಕ್ಸೈಸಿ ಮಾತ್ರೆಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇತ್ತೀಚೆಗೆ ಹೊಸಕೆರೆಹಳ್ಳಿಯ ಕಾಲೇಜುವೊಂದರ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಈ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಬಳಿಕ ಆರೋಪಿಯ ವಿಚಾರಣೆಯಲ್ಲಿ ತಾನು ವ್ಯಸನ ಮುಕ್ತ ಕೇಂದ್ರ ನಡೆಸುತ್ತಿರುವುದು ಗೊತ್ತಾಗಿದೆ. ಕೆಂಗೇರಿಯಲ್ಲಿರುವ ಪೂರ್ಣ ಪ್ರಜ್ಞಾ ಫೌಂಡೇಷನ್ ಹೆಸರಿನಲ್ಲಿ ಆರೋಪಿ ಮದ್ಯ ಮತ್ತು ಮಾದಕವಸ್ತು ವ್ಯಸನ ಮುಕ್ತ ಕೇಂದ್ರವನ್ನು ನಡೆಸುತ್ತಿದ್ದು, ಈತ ಅವಿವಾಹಿತನಾಗಿದ್ದಾನೆ. ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರುತ್ತೇನೆ. ಅದಕ್ಕಾಗಿ ಹಣದ ಅಗತ್ಯವಿದೆ ಎಂದು ಹೇಳಿ ಮನೆಯರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರಿಂದ ಮನೆಯವರು ಸುಮಾರು 40 ಲಕ್ಷ ರೂ. ಸಾಲ ಮಾಡಿಕೊಟ್ಟಿದ್ದರು. ಆದರೆ, ಈ ಹಣವನ್ನು ಮೋಜು-ಮಸ್ತಿ ಮಾಡಿಕೊಂಡು ಕಾಲ ಕಳೆಯುತ್ತಿದ್ದು, ಐಷಾರಾಮಿ ಹೋಟೆಲ್‌ಗಳಲ್ಲಿ ವಾಸವಾಗಿ ಮಾದಕ ವಸ್ತು ಸೇವಿಸಿಕೊಂಡು ಜೀವನ ಕಳೆಯುತ್ತಿದ್ದ. ಅದರಿಂದ ಆತನ ಪೋಷಕರು ಆರೋಪಿಯನ್ನು ಮನೆಯಿಂದ ಹೊರ ಹಾಕಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಸನ ಮುಕ್ತ ಕೇಂದ್ರದ ಮುಖ್ಯಸ್ಥನಾಗಿದ್ದು ಹೀಗೆ… : ಅತಿಯಾದ ಮಾದಕ ವಸ್ತು ವ್ಯಸನಿಯಾಗಿದ್ದ ಸುಹಾಸ್ ಗೌಡ, ಸುಮಾರು 6 ವರ್ಷಗಳ ಕಾಲ ಕೆಂಗೇರಿಯಲ್ಲಿರುವ ಪೂರ್ಣ ಪ್ರಜ್ಞಾ ಫೌಂಡೇಷನ್ ಮದ್ಯ ಮತ್ತು ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರದಲ್ಲಿ ರೋಗಿಯಾಗಿದ್ದ. ಬಳಿಕ ಕೆಲ ದಿನಗಳ ಕಾಲ ವ್ಯಸನ ಮುಕ್ತನಾಗಿದ್ದ. ಈ ವೇಳೆ ಕೇಂದ್ರದ ಮಾಲೀಕರ ಜತೆ ಮಾತುಕತೆ ನಡೆಸಿ, ತಾನೂ ಕೂಡ ಕೇಂದ್ರದ ಮೇಲೆ ಹಣ ಹೂಡಿಕೆ ಮಾಡುತ್ತೇನೆ ಎಂದು ಶೇ.25ರಷ್ಟು ಹೂಡಿಕೆ ಮಾಡಿದ್ದ. ಬಳಿಕ ಅದರ ವ್ಯವಸ್ಥಾಪಕ ನಿರ್ದೇಶಕನಾಗಿದ್ದು, ಎರಡ್ಮೂರು ವರ್ಷಗಳಿಂದ ಈತನೇ ಕೇಂದ್ರ ನಡೆಸುತ್ತಿದ್ದಾನೆ. ಈ ಮಧ್ಯೆ ಕಳೆದ ಎರಡು ತಿಂಗಳ ಹಿಂದೆ ಈತನ ತಂದೆ ತೀರಿಕೊಂಡಿದ್ದರು. ಈ ವೇಳೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೂ ಯತ್ನಿಸಿದ್ದ. ಆಗಿನಿಂದಲೂ ಮತ್ತೆ ಮಾದಕ ವಸ್ತು ವ್ಯಸನಿಯಾಗಿದ್ದು, ಕೇಂದ್ರದಲ್ಲಿರುವ ರೋಗಿಗಳಿಗೂ ಎಂಡಿಎಂಎ, ಗಾಂಜಾ, ಕೋಕೇನ್ ನೀಡುತ್ತಿದ್ದ. ಹೀಗೆ ಮೈಸೂರಿನಿಂದ ಮಾದಕ ವಸ್ತು ತಂದು ಕಳೆದ 6 ತಿಂಗಳಿನಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.