Advertisement

ರಂಗೇರಿದ ಹಾವೇರಿ ಲೋಕ ಸಮರ

02:26 PM Apr 05, 2019 | Team Udayavani |
ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಏರ್ಪಡಬಹುದಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಲೋಕಸಮರದ ಚುನಾವಣಾ ಕಣ ರಂಗೇರಿದೆ.
ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಇಬ್ಬರ ನಡುವೆ ಕ್ಷೇತ್ರದಲ್ಲಿ ನೇರ
ಹಣಾಹಣಿಗೆ ಆಖಾಡ ಸಿದ್ಧವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಮ್ಮದೇ ಆದ ರಣತಂತ್ರ ರೂಪಿಸಿಕೊಂಡಿವೆ. ಹಾಲಿ ಸಂಸದರಾಗಿರುವ ಶಿವಕುಮಾರ ಉದಾಸಿ ಹ್ಯಾಟ್ರಿಕ್‌ ಸಾಧನೆ ಮಾಡಲು ಹೊರಟಿದ್ದರೆ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಲೋಕಸಮರದ ಆಖಾಡಕ್ಕಿಳಿದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ, ಬಿಜೆಪಿ ಅಭ್ಯರ್ಥಿಯ ಹ್ಯಾಟ್ರಿಕ್‌ ಗೆಲುವು ತಡೆದು ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಏ. 3ರಂದು ನಾಮಪತ್ರ ಸಲ್ಲಿಸಿ ಬೃಹತ್‌ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನದೊಂದಿಗೆ ಚುನಾವಣಾ ಆಖಾಡಕ್ಕೆ ಪ್ರವೇಶ ಮಾಡಿದರೆ, ಗುರುವಾರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಸಹ ಭವ್ಯ ಮೆರವಣಿಗೆಯೊಂದಿಗೆ ಬಲ ಪ್ರದರ್ಶಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಗೆಲುವಿಗಾಗಿ ಸೆಣಸಾಟ: ಶಿವಕುಮಾರ ಉದಾಸಿ 2009, 2014 ಹೀಗೆ ಎರಡು ಬಾರಿ ಸತತ ಗೆಲುವು ಸಾಧಿಸಿ ಹ್ಯಾಟ್ರಿಕ್‌
ಗೆಲುವಿಗೆ ಸೆಣಸಾಟ ನಡೆಸಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನ ಮುಸ್ಲಿಂ ಅಲ್ಪಸಂಖ್ಯಾತ ಅಭ್ಯರ್ಥಿ ಸಲೀಂ ಅಹ್ಮದ್‌ ಅವರನ್ನು
ಪರಾಭವಗೊಳಿಸಿದ ಉದಾಸಿ, ಈಗ ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ಡಿ.ಆರ್‌. ಪಾಟೀಲ ಅವರನ್ನು ಎದುರಿಸಲು ಅಗತ್ಯ
ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌. ಪಾಟೀಲ ಇದೇ ಪ್ರಥಮ ಬಾರಿಗೆ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಎದುರಿಸಲು
ಸಜ್ಜಾಗಿದ್ದಾರೆ. ಡಿ.ಆರ್‌. ಪಾಟೀಲ ನಾಲ್ಕು ಬಾರಿ ಶಾಸಕರಾಗಿದ್ದು ಗದಗ ಜಿಲ್ಲೆಯಲ್ಲಿ ಚಿರಪರಿಚಿತರು. ಡಿ.ಆರ್‌. ಪಾಟೀಲ ಅವರು ಕಳೆದೆರಡು ಚುನಾವಣೆಗಳಿಂದ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸಿದ್ದರು.
ಟಿಕೆಟ್‌ಗಾಗಿ ನಡೆಸಿದ ಪೈಪೋಟಿಯ ಕಾರಣದಿಂದಲೇ ಅವರು ಕ್ಷೇತ್ರದಲ್ಲಿ ಹೆಚ್ಚು ಚಿರಪರಿಚಿತರಾಗಿದ್ದಾರೆ. ಇನ್ನು ಡಿ.ಆರ್‌. ಪಾಟೀಲ ಅವರು ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಎಚ್‌. ಕೆ. ಪಾಟೀಲ ಅವರ ಸಹೋದರ ಸಂಬಂ ಧಿಯಾಗಿದ್ದು
ಅವರ ಪ್ರಭಾವವೂ ಅವರ ಬೆನ್ನಿಗಿದೆ. ಅಪಾರ ರಾಜಕೀಯ ಅನುಭವದೊಂದಿಗೆ ಎದುರಾಳಿಯನ್ನು ಮಣಿಸಲು ಮುಂದಾಗಿದ್ದಾರೆ.
ಪ್ರಚಾರಾಸ್ತ್ರ : ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರೀಯ ವಿಚಾರಗಳನ್ನೇ ತಮ್ಮ ಪ್ರಚಾರದ ಪ್ರಮುಖ ಅಸ್ತ್ರಗಳನ್ನಾಗಿಸಿಕೊಂಡಿವೆ. ಮೋದಿ ಹಾಗೂ ರಾಹುಲ್‌ ಕುರಿತು ಟೀಕೆ, ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ತಮ್ಮ ಪಕ್ಷದ ಸರ್ಕಾರಗಳು ಮಾಡಿದ ಸಾಧನೆ, ರಾಜಕೀಯ ಪಕ್ಷಗಳ ಮೇಲಿರುವ ರಾಷ್ಟ್ರೀಯ ಆಪಾದನೆಗಳೇ ಈ ಬಾರಿ ಪ್ರಚಾರದಲ್ಲಿ ಅಗ್ರಸ್ಥಾನ ಪಡೆಯುತ್ತಿವೆ. ಇವುಗಳ ಆಧಾರದಲ್ಲಿಯೇ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಸಜ್ಜಾಗಿವೆ.
ಧಾರವಾಡದಲ್ಲಿ ವಿನಯ್‌ ಉಮೇದುವಾರಿಕೆ
 ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಗುರುವಾರ ನಾಮಪತ್ರ ಸಲ್ಲಿಸಿದರು. ಬುಧವಾರ 8 ಸಾವಿರಕ್ಕೂ ಅಧಿಕ ಜನರೊಂದಿಗೆ ಬಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಗುರುವಾರ 15 ಸಾವಿರದಷ್ಟು ಜನರೊಂದಿಗೆ ಆಗಮಿಸಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿತ್ತು.
ಮೆರವಣಿಗೆ ನಿಧಾನಕ್ಕೆ ಸಾಗಿದ್ದನ್ನು ಗಮನಿಸಿದ ವಿನಯ ಕುಲಕರ್ಣಿ ಅವರು ಮೊದಲೇ ಜಿಲ್ಲಾಧಿಕಾರಿ ಕಚೇರಿಗೆ
ಆಗಮಿಸಿ ನಾಮಪತ್ರದ ಒಂದು ಪ್ರತಿ ಸಲ್ಲಿಕೆ ಮಾಡಿದರು. ನಂತರ ಮರಳಿ ಮತ್ತೆ ಜುಬಿಲಿ ವೃತ್ತಕ್ಕೆ ತೆರಳಿ ಮೆರವಣಿಗೆ ಮೂಲಕ ಆಗಮಿಸಿ ಮತ್ತೆರಡು ಪ್ರತಿ ನಾಮಪತ್ರ ಸಲ್ಲಿಕೆ ಮಾಡಿದರು. ಮೊದಲ ಸಲ ಪ್ರತಿಜ್ಞಾವಿಧಿಯ ಪ್ರಮಾಣ ವಚನ ಓದುವಾಗ ಅವಸರದಲ್ಲಿ ವಿನಯ ಕುಲಕರ್ಣಿ ಅವರು ತಮ್ಮ ಹೆಸರು ಹೇಳದೇ ಓದಿದರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಸೂಚನೆ ಮೇರೆಗೆ ಮತ್ತೆ ಪ್ರತಿಜ್ಞಾವಿಧಿ ಓದಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಮಾಜಿ ಸಂಸದ ಪ್ರೊ| ಐ.ಜಿ. ಸನದಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎನ್‌. ಎಚ್‌. ಕೋನರಡ್ಡಿ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸದಾನಂದ ಡಂಗನವರ, ಅಲ್ಕೋಡ ಹನುಮಂತಪ್ಪ, ಎಂ.ಎಸ್‌. ಅಕ್ಕಿ, ಇಸ್ಮಾಯಿಲ್‌ ತಮಟಗಾರ, ಅನ್ವರ ಮುಧೋಳ, ಶರಣಪ್ಪ ಕೊಟಗಿ ಮೊದಲಾದವರು ವಿನಯ್‌ಗೆ ಸಾಥ್‌ ನೀಡಿದರು.
„ಎಚ್‌.ಕೆ. ನಟರಾಜ
Advertisement

Udayavani is now on Telegram. Click here to join our channel and stay updated with the latest news.

Next