ಬಂಗಾರಪೇಟೆ: ಪಟ್ಟಣದ ಹೃದಯಭಾಗದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ 38 ಗುಂಟೆ ಜಾಗದಲ್ಲಿ ಶ್ರೀರಾವ್ ಬಹುದ್ದೂರ್ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಪಿಡಬ್ಲ್ಯೂಡಿ ಮತ್ತು ಮುಜರಾಯಿ ಇಲಾಖೆ ಬೇಜವಾಬ್ದಾರಿಯಿಂದ ನನೆಗುದಿಗೆ ಬಿದ್ದಿದ್ದು, 20 ವರ್ಷಗಳಿಂದ ಕಸ ವಿಲೇವಾರಿಗೆ ಬಳಸಿಕೊಳ್ಳಲಾಗುತ್ತಿದೆ.
ಪಟ್ಟಣದ ಬಸ್‌ನಿಲ್ದಾಣ, ತಾಲೂಕು ಕಚೇರಿ ಮಧ್ಯಭಾಗದಲ್ಲಿರುವ ಸ್ಥಳವು 35 ವರ್ಷಗಳಿಂದಲೂ ಅನಾಥವಾಗಿದೆ. 2012ರಲ್ಲಿ 1.5 ಕೋಟಿ ರೂ. ನಲ್ಲಿ ಅಂದಿನ ಮುಜರಾಯಿ ಸಚಿವರಾಗಿದ್ದ ಎಸ್.ಎನ್.ಕೃಷ್ಣಯ್ಯಶೆಟ್ಟಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರೂ ಕಟ್ಟಡ ನಿರ್ಮಾಣ ವಾಗಲೇ ಇಲ್ಲ.
2012ರಲ್ಲಿ 1.5 ಕೋಟಿ ರೂ.ನಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಬಗ್ಗೆ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಯು ಕೋಲಾರದ ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು. ನಂತರ ಅನುದಾನ ಸಾಕಾಗುವುದಿಲ್ಲ ಎಂದು ಕಾಮಗಾರಿ ಸ್ಥಗಿತಗೊಳಿಸಿದ್ದು, ಇದುವರೆಗೂ ಕಟ್ಟಡ ನಿರ್ಮಾಣಕ್ಕೆ ಯಾರೂ ಮುಂದಾಗಿಲ್ಲ. ಖಾಲಿ ಇರುವ ಈ ಜಾಗವನ್ನು ಜನ ಕಸ ವಿಲೇವಾರಿಗೆ, ಖಾಸಗಿ ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದಾರೆ. ಇದೇ ಜಾಗದಲ್ಲಿ ಮುಖ್ಯ ಬಜಾರ್ ರಸ್ತೆಗೆ ಹೊಂದಿಕೊಂಡಂತೆ 10 ಅಂಗಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ಬರುವ ಬಾಡಿಗೆ ಹಣವನ್ನು ಮುಜರಾಯಿ ಇಲಾಖೆಗೆ ಸೇರುತ್ತಿದೆ. 2012ರಿಂದ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡದೇ ಇರುವುದರಿಂದ 2015ರಲ್ಲಿ ಮತ್ತೆ ಲೋಕೋಪಯೋಗಿ ಇಲಾಖೆಗೆ ವಹಿಸಿ ನಿರ್ಮಾಣ ಮಾಡಲು ಮುಜರಾಯಿ ಇಲಾಖೆ ಪ್ರಯತ್ನ ಮಾಡುತ್ತಿದ್ದರೂ ತೊಂದರೆ ಎದುರಾಗುತ್ತಲೇ ಇದೆ. ರಾವ್ ಬಹದ್ದೂರ್ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲು ದರ ಪರಿಷ್ಕರಣಿಗೊಳಿಸಿ 1.5 ಕೋಟಿ ರೂ.ನಿಂದ 1.98 ಕೋಟಿ ರೂ.ಗೆ ಏರಿಸಿದ್ದು, ಈ ಬಗ್ಗೆ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಅಂದಾಜುಪಟ್ಟಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದರೂ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಪ್ರಾಥಮಿಕ ಹಂತದ ಠೇವಣಿಯಾಗಿ ಸರ್ಕಾರದಿಂದ 60 ಲಕ್ಷ ರೂ. ಹಾಗೂ 1.10 ಕೋಟಿ ಬಾಡಿಗೆ ಸಂಗ್ರಹ ಹಣ ಪಿಡಬ್ಲ್ಯೂಡಿಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಿ ನೀಡಿದ್ದರೂ ಕಟ್ಟಡ ಪ್ರಾರಂಭಕ್ಕೆ ಮುಂದಾಗುತ್ತಿಲ್ಲ.
ಪಿಡಬ್ಲ್ಯೂಡಿ ಏಪ್ರಿಲ್ ತಿಂಗಳಲ್ಲಿ 1.98 ಕೋಟಿ ರೂ. ಟೆಂಡರ್ ಅನ್ನು ಕರೆದಿದ್ದು, ತಾಂತ್ರಿಕ ಕಾರಣದಿಂದ ಹಾಗೂ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಿಂದಾಗಿ ಪ್ರಕ್ರಿಯೆ ಮುಂದೂಡಿರುವುದರಿಂದ ಮತ್ತೆ ರಾವ್ ಬಹದ್ದೂರ್ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಗ್ರಹಣ ಹಿಡಿದಂತಾಗಿದೆ