Advertisement

ದ್ವೇಷ ತೊರೆದು ಮನುಷ್ಯ ಸ್ನೇಹಿಯಾಗಬೇಕು: ಅಬ್ದುಲ್‌ ಖಾದರ್‌ ಮೌಲವಿ

08:25 PM Jun 05, 2019 | sudhir |

ಕಾಸರಗೋಡು: ಪವಿತ್ರ ರಮ್ಜಾನ್‌ ಮಾಸವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಭಕ್ತಿಯಿಂದ ಉಪವಾಸ, ಪ್ರಾರ್ಥನೆ ಮತ್ತು ದಾನದ ಮೂಲಕ ಪೂರ್ಣಗೊಳಿಸಿದ ಮುಸ್ಲಿಮರು ಬುಧವಾರ ಕೇರಳ ರಾಜ್ಯಾದ್ಯಂತ ಸಂಭ್ರಮದಿಂದ ಈದುಲ್‌ ಫಿತ್ರ ಹಬ್ಬವನ್ನು ಭಕ್ತಿ, ಶ್ರದ್ಧೆ, ಸಂಭ್ರಮ, ಸಡಗರದಿಂದ ಆಚರಿಸಿದರು.

Advertisement

ರಾಜ್ಯದೆಲ್ಲೆಡೆ ಮಸೀದಿ, ಈದ್ಗಾ ಮೈದಾನ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಧಾರ್ಮಿಕ ಉಪನ್ಯಾಸಗಳಲ್ಲಿ ಪ್ರೀತಿ, ತ್ಯಾಗ, ಸಹೋದರ ಭಾವ, ಶಾಂತಿಯ ಆದರ್ಶಗಳನ್ನು ಎತ್ತಿ ಹಿಡಿಯುವಂತೆ ಧರ್ಮ ಗುರುಗಳು ಕರೆ ನೀಡಿದರು.

ಸಂಭ್ರಮದ ಅಂಗವಾಗಿ ಮುಸ್ಲಿಮರು ನಡೆಸುತ್ತಿರುವ ಯತೀಮ್‌ ಖಾನಾಗಳಿಗೆ (ಅನಾಥಾಶ್ರಮ) ಭೇಟಿ ನೀಡಿದ ಮುಸ್ಲಿಮರು ಅಲ್ಲಿನ ನಿವಾಸಿಗಳಿಗೆ ಬಟ್ಟೆಗಳನ್ನು ದಾನವಾಗಿ ನೀಡಿದರಲ್ಲದೆ ಹಬ್ಬದ ಪಾರಿತೋಷಕಗಳನ್ನು ವಿತರಿಸಿದರು.

ಇತಿಹಾಸ ಪ್ರಸಿದ್ಧ ತಳಂಗರೆ ಮಾಲಿಕ್‌ ದಿನಾರ್‌ ಜುಮಾ ಮಸ್ಜಿದ್‌, ನೆಲ್ಲಿಕುಂಜೆ ಮುಹಿಯುದ್ದೀನ್‌ ಜುಮಾ ಮಸ್ಜಿದ್‌, ಕಾಸರಗೋಡು ಇಸ್ಲಾಮಿಕ್‌ ಸೆಂಟರ್‌, ಟೌನ್‌ ಮುಬಾರಕ್‌ ಮಸ್ಜಿದ್‌, ಟೌನ್‌ ಹಸನ್‌ತುಲ್‌ ಜಾರಿಯ (ಕಣ್ಣಾಡಿಪಳ್ಳಿ), ಕಾಸರಗೋಡು ಹೊಸ ಬಸ್‌ ನಿಲ್ದಾಣದ ಸುನ್ನಿ ಸೆಂಟರ್‌ ಮೊದಲಾದೆಡೆ ವಿಶೇಷ ಪ್ರಾರ್ಥನೆ ನಡೆಯಿತು. ಕೆಎನ್‌ಎಂ ಕಾಸರಗೋಡು ಟೌನ್‌ ಸಲಫಿ ಜುಮಾ ಮಸ್ಜಿದ್‌ ಈದ್ಗಾದಲ್ಲಿ ಪ್ರಾರ್ಥನೆಗೆ ಮುಹಮ್ಮದಲಿ ಸಲಫಿ ನೇತೃತ್ವ ನೀಡಿದರು.

ಮಸ್ಜಿದುನ್ನೂರಿನಲ್ಲಿ ಪ್ರವಚನ
ಈದುಲ್‌ ಫಿತ್ರ ಹಬ್ಬವು ಶಾಂತಿ ಸೌಹಾರ್ದವನ್ನು ಲೋಕಕ್ಕೆ ಸಾರುತ್ತಿದೆ. ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಮನುಷ್ಯ ಸ್ನೇಹಿಯಾಗಿ ಇತರ ಧರ್ಮ ದವರನ್ನು ನೋಯಿಸದೆ ಅವರನ್ನೂ ತಮ್ಮ ಸಹೋದರರಂತೆ ಕಾಣಲು ಪ್ರೇರಿಸಿದ ಧರ್ಮವಾಗಿದೆ ಇಸ್ಲಾಂ ಧರ್ಮ. ಮನುಷ್ಯ ಮನುಷ್ಯರೊಳಗಿನ ಸಂಬಂಧ ಉತ್ತಮ ವಾಗಬೇಕಿದೆ. ಹಳಸಿದ ಸಂಬಂಧಗಳು ಮರು ಜೋಡಣೆಯಾಗಬೇಕಿದೆ ಎಂಬ ಖುರಾನ್‌ ಸಂದೇಶ ನಮಗೆಲ್ಲ ಸ್ಫೂರ್ತಿಯಾಗಲಿ ಎಂಬುದಾಗಿ ಹಿರಿಯ ವಿದ್ವಾಂಸ ಅಬ್ದುಲ್‌ ಖಾದರ್‌ ಮೌಲವಿ ಹೇಳಿದರು.

Advertisement

ಅವರು ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪೆರ್ನಾಲ್‌ ನಮಾಝ್ನ ಬಳಿಕ ಖುತುಬಾ ಪ್ರವಚನ ಹಾಗೂ ಸಂದೇಶವನ್ನು ನೀಡಿ ಮಾತನಾಡಿದರು. ಪವಿತ್ರವಾದ ರಮ್ಜಾನ್‌ ಉಪವಾಸದ ಬಳಿಕ ಶವ್ವಾಲ್‌ ತಿಂಗಳ ಆರಂಭದ ದಿನ ಈದುಲ್‌ ಫಿತ್ರ (ಸಣ್ಣ ಪೆರ್ನಾಲ್‌) ಹಬ್ಬವನ್ನು ನಾಡಿನಾ ದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಕುಂಜತ್ತೂರು ರಾ. ಹೆದ್ದಾರಿಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ನಡೆದ ನಮಾಜಿಗೂ ಅಬ್ದುಲ್‌ ಖಾದರ್‌ ಮೌಲವಿಯವರು ನೇತೃತ್ವ ನೀಡಿದರು. ಈ ಮಸೀದಿಯಲ್ಲಿ ಸಹಸ್ರಾರು ಮಹಿಳೆಯರು ಹಾಗೂ ಪುರುಷರು ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಉದ್ಯಾವರ ಸಾವಿರ ಜಮಾಹತ್‌, ಕುಂಜತ್ತೂರು, ಪೊಸೋಟು, ಪಾಂಡ್ಯಾಲ್‌ ಜಮಾಹತ್‌ಗಳಲ್ಲಿ, ಹೊಸಂಗಡಿ, ಕಡಂಬಾರ್‌, ಆನೆಕಲ್ಲು, ತೂಮಿನಾಡು, ಅಲ್‌ ಫತಾಹ್‌ ಜುಮಾ ಮಸೀದಿ ಗಳಲ್ಲಿ ಪೆರ್ನಾಲ್‌ ನಮಾಜ್‌, ಪ್ರವಚನ ಹಾಗೂ ಸಂದೇಶ ನಡೆಯಿತು.

30 ದಿವಸಗಳ ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು ಸಾಕಷ್ಟು ಒಳಿತಿನ ಪುಣ್ಯದ ಕಾರ್ಯಗಳನ್ನು ಮಾಡಿ ತಮ್ಮ ಕುಟುಂಬಗಳೊಂದಿಗೆ ಈದುಲ್‌ ಫಿತ್ರ ಹಬ್ಬವನ್ನು ಆಚರಿಸಿದರು.

ಶುಭಾಶಯ ಸಂಭ್ರಮ
ಬೆಳಗ್ಗೆ ಶುಚಿಭೂìತರಾಗಿ ಹೊಸ ಉಡುಪುಗಳನ್ನು ಧರಿಸಿ ಸುಗಂಧ ಲೇಪಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆ ಬಳಿಕ ಪರಸ್ಪರ ಆಲಿಂಗಿಸಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಬಂಧುಗಳ ಮತ್ತು ಮಿತ್ರರ ಮನೆಗಳಿಗೆ ತೆರಳಿ ಮೃಷ್ಟಾನ್ನ ಭೋಜನವನ್ನು ಸವಿದರು. ಮಕ್ಕಳು, ಮಹಿಳೆಯರು ಮನೆಯಲ್ಲಿ ಹೊಸ ಉಡುಗೆ ತೊಟ್ಟು ಹಬ್ಬವನ್ನು ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next