Advertisement

ತೀರ್ಪುಗಳ ತರಾತುರಿ ವಿಶ್ಲೇಷಣೆ ಸಾಧುವಲ್ಲ

08:22 AM Jul 27, 2019 | Suhan S |

ಹುಬ್ಬಳ್ಳಿ: ನ್ಯಾಯಾಲಯಗಳ ತೀರ್ಪುಗಳನ್ನು ಎಲೆಕ್ಟ್ರಾನಿಕ್‌ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತರಾತುರಿಯಲ್ಲಿ ವಿಶ್ಲೇಷಣೆ ಮಾಡುವುದು ಸಾಧುವಲ್ಲ. ಇದರಿಂದ ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶಗಳು ರವಾನೆಯಾಗುವ ಸಾಧ್ಯತೆಗಳಿರುತ್ತವೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಹೇಳಿದರು.

Advertisement

ಇಲ್ಲಿನ ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸುಪ್ರೀಂ ಹಾಗೂ ಹೈಕೋರ್ಟ್‌ಗಳಲ್ಲಿನ ಮಹತ್ವದ ತೀರ್ಪುಗಳು ಸುಮಾರು 800-1000 ಪುಟಗಳಲ್ಲಿರುತ್ತವೆ. ಬೆಳಗ್ಗೆ ತೀರ್ಪು ಪ್ರಕಟವಾದರೆ ಒಂದೆರಡು ಗಂಟೆಗಳಲ್ಲಿ ಈ ಬಗ್ಗೆ ವಿಶ್ಲೇಷಣೆಗಳು ಶುರುವಾಗುತ್ತವೆ. ಇದರಲ್ಲಿ ಕಾನೂನು ಪರಿಣಿತರು, ತಜ್ಞರೆನಿಸಿಕೊಂಡ ಕೆಲವರು ಚರ್ಚೆಯಲ್ಲಿ ಪಾಲ್ಗೊಂಡಿರುತ್ತಾರೆ. ಸುದೀರ್ಘ‌ ತೀರ್ಪನ್ನು ಸೀಮಿತ ಅವಧಿಯಲ್ಲಿ ಓದಿ, ಅರ್ಥೈಸಿಕೊಂಡು ವಿಶ್ಲೇಷಣೆ, ವ್ಯಾಖ್ಯಾನ ಮಾಡುವುದು ಸುಲಭವಲ್ಲ. ಹೀಗೆ ತರಾತುರಿಯಿಂದ ಚರ್ಚೆ ಮಾಡುವುದು, ವಿಶ್ಲೇಷಿಸುವುದರಿಂದ ಸಾರ್ವಜನಿಕ ವಲಯಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆಗಳಿರುತ್ತದೆ ಎಂದರು. ನ್ಯಾಯಾಲಯದ ತೀರ್ಪುಗಳನ್ನು ವಿಮರ್ಶಿಸುವುದು ತಪ್ಪಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ವಿಮರ್ಶಿಸಬಹುದು. ಆದರೆ ಅದು ಕಾನೂನಿನ ತಳಹದಿ ಮೇಲೆ ಇರಬೇಕು. ಸಮಾಜದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ದೊಡ್ಡ ಗೌರವವಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ತನಗೆ ಕೊನೆಯದಾಗಿ ನ್ಯಾಯ ದೊರೆಯುವುದಾದರೆ ನ್ಯಾಯಾಲಯದಲ್ಲಿ ಎನ್ನುವ ಭಾವನೆಯಿದೆ. ಈ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡು ವೃತ್ತಿಪರತೆ ಕಾಪಾಡಿಕೊಳ್ಳಬೇಕು. ನಮ್ಮ ತೀರ್ಪುಗಳನ್ನು ಸಾಮಾನ್ಯ ಜನರು ಸೇರಿದಂತೆ ಕೆಲ ಏಜೆನ್ಸಿಗಳು ಗಮನಿಸುತ್ತಿರುತ್ತವೆ ಎಂಬುದು ನಮ್ಮ ಮನದಲ್ಲಿರಬೇಕು ಎಂದರು.

ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ವಕೀಲರಾಗಿದ್ದರು ಎಂಬುದು ಇತಿಹಾಸವಾಗಿದೆ. ಮೊದಲ ಲೋಕಸಭೆಯಲ್ಲಿ ಶೇ.35 ಸದಸ್ಯರು ವಕೀಲರಾಗಿದ್ದರು. ಹೀಗಾಗಿ ಅಂದಿನ ಚರ್ಚೆಗಳು, ಕಾನೂನುಗಳ ತಿದ್ದುಪಡಿಗೆ ಸಾಕಷ್ಟು ನೆರವಾಯಿತು. ಪರೋಕ್ಷವಾಗಿ ಸಾಕಷ್ಟು ಹಿರಿಯ ವಕೀಲರು ಕೂಡ ಅಂದಿನ ಸಂಸತ್ತಿಗೆ ಕಾನೂನಿನ ನೆರವು ನೀಡಿದರು. ಯುವ ವಕೀಲರು ನ್ಯಾಯಾಧೀಶರ ಹುದ್ದೆಗಳಿಗೆ ಬರಬೇಕು. ಆ ನಿಟ್ಟಿನಲ್ಲಿ ಅಧ್ಯಯನ, ಸತತ ಪರಿಶ್ರಮವಿರಬೇಕು. ಆಧುನಿಕ ತಂತ್ರಜ್ಞಾನ ಸಾಕಷ್ಟು ಅನುಕೂಲವಾಗಿದ್ದು, ಹಳೆಯ ತೀರ್ಪುಗಳನ್ನು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ. ಆದರೆ ಇದನ್ನು ಬಳಸುವಾಗ, ಅಳವಡಿಸಿಕೊಳ್ಳುವಾಗ ಜಾಗರೂಕತೆ ಅಗತ್ಯ ಎಂದರು. ಹೈಕೋರ್ಟ್‌ ರಿಜಿಸ್ಟ್ರಾರ್‌ ನ್ಯಾ| ವಿ. ಶ್ರೀಶಾನಂದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next