Advertisement

ಕರ್ನಾಟಕ ಏಕೀಕರಣದಲ್ಲಿದೆ ಮಹನೀಯರ ಶ್ರಮ

05:56 PM Jul 13, 2022 | Team Udayavani |

ಹೊಳೆಆಲೂರ: ಪ್ರಪಂಚದ ಕೆಲವೇ ಕೆಲವು ಸಮೃದ್ಧ ಸಂಸ್ಕಾರಯುತ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ನಾಡು, ನುಡಿ, ನೆಲ, ಜಲ, ಸಂಸ್ಕೃತಿಯಲ್ಲಿ ನಾವು ಯಾವತ್ತೂ ರಾಜೀ ಮಾಡಿಕೊಳ್ಳಬಾರದು. ಕರ್ನಾಟಕ ಏಕೀಕರಣದಲ್ಲಿ ಆಲೂರ ವೆಂಕಟರಾಯರಂತಹ ಸಾವಿರಾರು ಮಹನೀಯರ ಬೆವರಿನ ಶ್ರಮವಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಉಪನ್ಯಾಸಕಿ ವಿಜಯಕುಮಾರಿ ಶಿಂಧೆ ಹೇಳಿದರು.

Advertisement

ಕನ್ನಡ ಕುಲ ಪುರೋಹಿತ ಆಲೂರ ವೆಂಕಟರಾಯರ ಜನ್ಮ ದಿನಾಚರಣೆ ಅಂಗವಾಗಿ ಕಸಾಪ ಹೋಬಳಿ ಘಟಕ, ಗ್ರಾಪಂ ಹಾಗೂ ಕನ್ನಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳವಾರ ನಡೆದ ಆಲೂರ ವೆಂಕಟರಾವ್‌ ಜನ್ಮದಿನಾಚರಣೆ ನಂತರ ರೇಣುಕಾದೇವಿ ಪ್ರೌಢಶಾಲೆಯಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾತೃಭಾಷೆಯನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಲು ಹತ್ತಾರು ಆದೇಶ, ಸುತ್ತೋಲೆಗಳು ಜಾರಿಯಾಗಿದ್ದರೂ ನಿರೀಕ್ಷತ ಪ್ರಗತಿಯಾಗಿಲ್ಲ. ಹೊಟ್ಟೆಪಾಡು ಮತ್ತು ವ್ಯವಹಾರಿಕವಾಗಿ ನೂರು ಭಾಷೆ ಕಲಿಯಿರಿ. ಆದರೆ, ದಿನಬಳಕೆಯಲ್ಲಿ ಮನಃಪೂರ್ವಕವಾಗಿ ಹೆಮ್ಮೆಯಿಂದ ಕನ್ನಡ ಮಾತನಾಡುವುದರ ಜೊತೆಗೆ ಇತರ ರಾಜ್ಯಗಳಿಂದ ಉದ್ಯೋಗ  ಅರಿಸಿ ಆಗಮಿಸಿದವರಿಗೂ ಸವಿಗನ್ನಡ ಭಾಷೆ ಉಣಬಡಿಸಬೇಕೆಂದು ಹೇಳಿದರು.

ಅತಿಥಿಯಾಗಿದ್ದ ಗ್ರಾಪಂ ಪಿಡಿಒ ಎಸ್‌.ಜಿ.ಮೆಣಸಗಿ ಮಾತನಾಡಿ, ಸಮಾಜದಲ್ಲಿ ನಮ್ಮ ಮಕ್ಕಳಿಗೆ ನಾಡು, ನುಡಿಯ ಬಗೆಗೆ ಸಕಾರಾತ್ಮಕ ಚಿಂತನೆ ಮೂಡಬೇಕಾದರೆ ಕೇವಲ ಸಲಹೆ ಸಾಲದು. ಕನ್ನಡ ಪರ ಕಾರ್ಯ ಚಟುವಟಿಕೆಗಳು, ನಮ್ಮ ಭಾಷೆ, ಇತಿಹಾಸ ಪರಂಪರೆಯ ಸಾಕ್ಷಾತ್‌ ದರ್ಶನವಾಗಬೇಕು. ಕಸಾಪ ಬಳಗ ಹಾಗೂ ಕನ್ನಡಪರ ಮನಸ್ಸುಗಳು ಒಂದುಗೂಡಿ ಮಕ್ಕಳಿಗೆ ಸುಸಜ್ಜಿತ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ತರಬೇತಿ ಹಮ್ಮಿಕೊಂಡರೆ ಗ್ರಾಪಂ ಸಂಪೂರ್ಣ ಸಹಾಯ, ಸಹಕಾರ ನೀಡಲಿದೆ ಎಂದರು.

ಸಾಹಿತಿ ವಿಶ್ವನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ಮಾಡಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೀರಯ್ಯ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗಲದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಒಕ್ಕೂಟದ ಅಧ್ಯಕ್ಷೆ ಶಾಂತಾ ಕಾತರಕಿ, ಕಸಾಪ ಗೌರವ ಕಾರ್ಯದರ್ಶಿ ವಾಸುದೇವ ಪವಾರ, ಕೋಶಾಧ್ಯಕ್ಷ ಪಾಂಡುರಂಗ ಪತ್ತಾರ, ಅಭಿಷೇಕ ಇನಾಮದಾರ, ಗ್ರಾಪಂ ಸದಸ್ಯೆ ಸುಮಂಗಲಾ ಕಲ್ಲಾಪೂರ, ರಕ್ಷಣಾ ವೇದಿಕೆ ಅಧ್ಯಕ್ಷ ಮೈನುದ್ದೀನ್‌ ನದಾಫ್‌, ಗ್ರಾಪಂ ಉಪಾಧ್ಯಕ್ಷೆ ರೇಣುಕ ತೆಗ್ಗಿ, ಸದಸ್ಯೆ ಸುಧಾ ಎಲಿಗಾರ, ಶೋಭಾ ಚಲವಾದಿ, ಬಸವರಾಜ ಗುಡದೂರ, ವಿಶ್ವನಾಥ ಮಾಸ್ತರ, ಜಗದೀಶ ಅಳ್ಳೂಳ್ಳಿ, ಬಸವರಾಜ ಜಾಲಿಹಾಳ, ಬಿ.ಪಿ.ಮಾದರ, ಹೇಮರಡ್ಡಿ ಅರಹುಣಸಿ, ನಿರ್ಮಲಾ ಬಾರಕೇರ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next