Advertisement
ಕುಲಭೂಷಣ್ ವಿರುದ್ಧ ಪಾಕಿಸ್ಥಾನ ನಡೆಸಿರುವ ವಿಚಾರಣೆ ಒಂದು ನಾಟಕ ಎಂದಿದೆ ಭಾರತ. ನಿಮ್ಮ ಅಭಿಪ್ರಾಯವೇನು?ಅಲ್ಲಿ ವಿಚಾರಣೆ ನಡೆದೇ ಇಲ್ಲ. ಉಗ್ರವಾದಿಗಳ ವಿಚಾರಣೆ ನಡೆಸಲು ಪಾಕಿಸ್ಥಾನಿ ಸೇನೆಗೆ ಅಧಿಕಾರ ನೀಡಲಾಗಿದೆ, ಆ ಅಧಿಕಾರವನ್ನು ಉಪಯೋಗಿಸಿಕೊಂಡು ಕುಲಭೂಷಣ್ ಜಾಧವ್‌ರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದಾಗಿ ಪಾಕ್ ನೀಡಿರುವ ಸ್ಪಷ್ಟನೆಯ ಆಧಾರದಲ್ಲಿ ಜನರು ಭಾವಿಸಿದ್ದಾರೆ. ಆದರೆ ಪಾಕಿಸ್ಥಾನ ಉಲ್ಲೇಖೀಸಿರುವ ಕಾನೂನಿನ ಕಲಮು 1923ರದ್ದು, ಬ್ರಿಟಿಶರ ಕಾಲದ್ದು. ಹೀಗಾಗಿ ಪಾಕ್ ನೀಡಿರುವ ಸ್ಪಷ್ಟನೆ ನಿಜವಲ್ಲ. ಉಗ್ರರನ್ನು ಮಿಲಿಟರಿ ನ್ಯಾಯಾಲಯಗಳಲ್ಲಿ ಕ್ಷಿಪ್ರ ವಿಚಾರಣೆಗೆ ಒಳಪಡಿಸಲು ಪಾಕ್ ಮಿಲಿಟರಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿರುವ ಈ ವ್ಯವಸ್ಥೆಯಲ್ಲಿ ಕೂಡ ನಿರ್ದಿಷ್ಟ ಆಪಾದಿತನೊಬ್ಬನ ವಿರುದ್ಧ ವಿಚಾರಣೆ ಆರಂಭಿಸಲಾಗಿದೆ ಎಂಬ ನೊಟೀಸ್ ಹೊರಡಿಸಲಾಗುತ್ತದೆ. ಜಾಧವ್ ಪ್ರಕರಣದಲ್ಲಿ ಇಂಥ ನೊಟೀಸ್ ನೀಡಲಾಗಿಲ್ಲ. ವಿಚಾರಣೆ ಆರಂಭವಾದುದೇ ಯಾರಿಗೂ ತಿಳಿದಿಲ್ಲ. ಇದು ಅವಸರದಲ್ಲಿ ತೆಗೆದುಕೊಂಡ ನಿರ್ಣಯ ಎಂದೇ ತಿಳಿಯ ಬೇಕಾಗುತ್ತದೆ.
ದುರಂತವೆಂದರೆ, ಅವರು ಪದೇ ಪದೆ ಸುಳ್ಳು ಹೇಳುತ್ತಾರೆ ಮತ್ತು ನಾವದನ್ನು ನಂಬಿಬಿಡುತ್ತೇವೆ. ಜಾಧವ್ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದ್ದು ಯಾಕೆ, ಅವರ ವಿರುದ್ಧ ಇರುವ ಆರೋಪಗಳೇನು ಎಂಬುದು ಭಾರತ ಸರಕಾರಕ್ಕೆ ತಿಳಿದಿದೆ ಎಂದೇ ಪಾಕ್ ಹೈಕಮಿಶನರ್ ಅಬ್ದುಲ್ ಬಸಿತ್ ಮಾಧ್ಯಮ ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ, ಜಾಧವ್ ಎಲ್ಲಿದ್ದಾರೆ, ಯಾಕೆ ಅವರನ್ನು ಸೆರೆಯಲ್ಲಿರಿಸಿದ್ದಾರೆ ಎಂಬುದು ಭಾರತೀಯ ಸರಕಾರಕ್ಕೆ ತಿಳಿದಿಲ್ಲ ಎಂದು ಭಾರತೀಯ ಮಾಧ್ಯಮಗಳು ಹೇಳುತ್ತಿವೆ. ನಿಜಾಂಶವೆಂದರೆ, ಜಾಧವ್ ಇರಾನ್‌ನಲ್ಲಿ ಯಾವ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ಪಡೆಯಲು ಪಾಕ್, ಇರಾನ್ ಸರಕಾರವನ್ನು ಸಂಪರ್ಕಿಸಿತ್ತು. ಆದರೆ ಈಗ ಜಾಧವ್ ತಮ್ಮ ದೇಶದಲ್ಲಿಯೇ ಗೂಢಚರ್ಯೆಯಲ್ಲಿ ನಿರತನಾಗಿದ್ದ ಎಂದು ಪಾಕ್ ಸರಕಾರ ಹೇಳಿಕೊಳ್ಳುತ್ತಿದೆ. ಇದು ಹೌದಾದರೆ, ಪಾಕ್ ಸರಕಾರ ಇರಾನನ್ನು ಸಂಪರ್ಕಿಸಿದ್ದೇಕೆ? ನಾವು ಇಂತಹ ಪ್ರಶ್ನೆಗಳನ್ನು ಪಾಕ್ ಮುಖಕ್ಕೆ ಎಸೆಯಬೇಕು. ಇನ್ನೊಂದು ಸಮಸ್ಯೆಯೆಂದರೆ, ನಾವು ಪಾಕಿಸ್ಥಾನದ ಮಟ್ಟಿಗೆ ತುಂಬಾ ಉದಾರಿಗಳಾಗಿ ವರ್ತಿಸುತ್ತಿದ್ದೇವೆ. ಇತ್ತೀಚೆಗೆ ಭಾರತೀಯ ಸಾಗರ ವ್ಯಾಪ್ತಿಯಲ್ಲಿ ಕಂಡುಬಂದ ಇಬ್ಬರು ಪಾಕಿಸ್ಥಾನಿ ನೌಕಾಯೋಧರನ್ನು ಭಾರತೀಯ ಕೋಸ್ಟ್‌ಗಾರ್ಡ್ ರಕ್ಷಿಸಿ ಕಳುಹಿಸಿಕೊಟ್ಟಿತ್ತು. ಭಾರತೀಯ ಜಲವ್ಯಾಪ್ತಿಯಲ್ಲಿ ಅವರು ಬೇಹುಗಾರಿಕೆ ನಡೆಸುತ್ತಿರಲಿಲ್ಲವೆ? ಹೌದು. ಆದರೂ ನಾವು ಸುರಕ್ಷಿತವಾಗಿ ಹೋಗಗೊಟ್ಟೆವು. ಇದನ್ನು ಪಾಕಿಸ್ಥಾನದ ವರ್ತನೆಯ ಜತೆಗೆ ಹೋಲಿಸಿ ನೋಡಿ. ಕೆಲವು ತಿಂಗಳುಗಳ ಹಿಂದೆ ಅಕಸ್ಮಾತ್ ಗಡಿದಾಟಿದ್ದ ಭಾರತೀಯ ಯೋಧನೊಬ್ಬನನ್ನು ಅವರು ತಿಂಗಳುಗಟ್ಟಲೆ ಸೆರೆಯಲ್ಲಿರಿಸಿ ಚಿತ್ರಹಿಂಸೆ ನೀಡಿ ಬಳಿಕ ಮಹಾಔದಾರ್ಯವೆಂಬಂತೆ ಹಿಂದಕ್ಕೆ ಕಳುಹಿಸಿರಲಿಲ್ಲವೆ? ನನ್ನ ಊಹೆಯ ಪ್ರಕಾರ, ಜಾಧವ್‌ಗೆ ಇನ್ನೆಂದೂ ಚೇತರಿ ಸಿಕೊಳ್ಳಲಾರದಂಥ ಚಿತ್ರಹಿಂಸೆ ನೀಡಿರಬಹುದು. ಹೀಗಾಗಿ ಅವರನ್ನು ಬಿಡುಗಡೆಗೊಳಿಸಲು ಪಾಕ್ ಹಿಂದೇಟು ಹಾಕುತ್ತಿದೆ.
Related Articles
ಜಾಧವ್ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕ್ ಪ್ರಧಾನಿ ಮತ್ತು ವಿದೇಶ ಸಚಿವರೇ ಒಪ್ಪಿಕೊಂಡಿದ್ದಾರೆ. ಆದೂ ಈ ಪ್ರಕರಣದ ಬಗ್ಗೆ ಯಾಕಿಷ್ಟು ರಂಪಾಟ? ಇದಕ್ಕೆ ಎರಡು ಕಾರಣಗಳಿವೆ. ಒಂದನೆಯದಾಗಿ, ಭಾರತವು ಪಾಕಿಸ್ಥಾನದಲ್ಲಿ ಭೀತಿವಾದಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಅದು ಕೂಡ ಉಗ್ರವಾದಿ ರಾಷ್ಟ್ರ ಎಂಬ ಚಿತ್ರಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿತ್ತುವುದು. ಇನ್ನೊಂದು, ಕಾಶ್ಮೀರ ವಿವಾದ ಕುದಿಯುತ್ತಿದ್ದು, ಅದರ ಪರಿಹಾರಕ್ಕೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಆಹ್ವಾನಿಸಲು ಇದು ತಕ್ಕ ಸಮಯ ಎಂದು ಪಾಕ್ ಭಾವಿಸಿದೆ. ಜಾಧವ್ ಆಗಲಿ ಇನ್ಯಾರೇ ಆಗಲಿ; ಈ ದೂರದ ಗುರಿಯ ದಾಳಗಳಷ್ಟೇ.
Advertisement
ಭಾರತ ಹೇಗೆ ಪ್ರತಿಕ್ರಿಯಿಸಬೇಕು?ಜಾಧವ್ ಬಳಿ ಮುಸ್ಲಿಮ್ ಹೆಸರಿನದ್ದರ ಸಹಿತ ಎರಡು ಪಾಸ್‌ಪೋರ್ಟ್‌ಗಳೇಕಿವೆ ಎನ್ನುತ್ತಿದೆ ಪಾಕ್. ಇದನ್ನೇ ಮುಂದಿಟ್ಟು ಜಾಧವ್ ಒಬ್ಬ ಗೂಢಚರ ಎಂದು ವಾದಿಸುತ್ತಿದೆ. ದಾವೂದ್ ಬಳಿ ಹತ್ತು ಭಾರತೀಯ ಪಾಸ್‌ಪೋರ್ಟ್‌ಗಳಿವೆ, ಆತ ಭಾರತೀಯ ಬೇಹುಗಾರನಲ್ಲವಲ್ಲ! ಭಾರತ ಜಾಧವ್‌ರನ್ನು ಗೂಢಚಾರಿಕೆಗೆ ಕಳಿಸುವುದಿದ್ದರೆ ಭಾರತೀಯ ಪಾಸ್‌ಪೋರ್ಟ್ ನೀಡಿ ಯಾಕೆ ಕಳುಹಿಸುತ್ತಿತ್ತು? ಬಾಂಗ್ಲಾದೇಶಧ್ದೋ ನೇಪಾಳಧ್ದೋ ಸ್ವತಃ ಪಾಕಿಸ್ಥಾನಧ್ದೋ ಪಾಸ್‌ಪೋಟ್ ನೀಡುತ್ತಿತ್ತಲ್ಲ! ಾಧವ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ಪಾಕ್ ವಿದೇಶ ನೀತಿ ಸಲಹೆಗಾರ ಸರ್ತಾಜ್ ಅಜೀಜ್ ಡಿಸೆಂಬರಿನಲ್ಲಿ ಹೇಳಿದ್ದರು. ಈಗ ಮೂರ್ನಾಲ್ಕು ತಿಂಗಳುಗಳ ಒಳಗೆ ಮರಣದಂಡನೆ ವಿಧಿಸುವಂಥ ಪುರಾವೆ ಲಭಿಸಿದ್ದು ಹೇಗೆ? ಹೀಗಾಗಿ ಅಬ್ದುಲ್ ಬಸಿತ್‌ನಂಥವರು ತಮ್ಮ ಸುಳ್ಳಿನ ಪ್ರತಿಪಾದನೆಯನ್ನು ನಡೆಸಲು ನಮ್ಮ ಟಿವಿ ಮಾಧ್ಯಮಗಳಲ್ಲಿ ಅವಕಾಶ ಕೊಡಬಾರದು. ಮೂರನೆಯದಾಗಿ, ಪಾಕಿಸ್ಥಾನಕ್ಕೆ ಭೇಟಿ ನೀಡದಂತೆ ಭಾರತೀಯರಿಗೆ ಕನಿಷ್ಠ ಪ್ರವಾಸೀ ಎಚ್ಚರಿಕೆಯನ್ನಾದರೂ ಹೊರಡಿಸಬೇಕು. ಹಜರತ್ ನಿಜಾಮುದ್ದೀನ್ ದರ್ಗಾದ ಹಿರಿಯ ಧರ್ಮಗುರುಗಳಿಬ್ಬರು ಅಲ್ಲಿ ಗೂಢಚಾರಿಕೆಯ ಶಂಕೆಯ ಮೇಲೆ ಬಂಧನಕ್ಕೆ ಒಳಗಾಗಿ ಪ್ರಶ್ನಿಸಲ್ಪಡುತ್ತಾರೆಂದರೆ, ಸಾಮಾನ್ಯ ಭಾರತೀಯರ ಪಾಡೇನಾಗಬಹುದು! – ರಾಜೀವ್ ಡೋಗ್ರಾ ಭಾರತೀಯ ರಾಜತಂತ್ರಜ್ಞ