Advertisement
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ 10 ವರ್ಷಗಳ ಹಿಂದೆ ಸುಮಾರು 9.5 ಕೋ.ರೂ. ವೆಚ್ಚದಲ್ಲಿ 40 ಮೀ. ಉದ್ದದ ಜೆಟ್ಟಿ, ಹರಾಜು ಪ್ರಾಂಗಣ ಸಹಿತ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೆ ಈಗ ಅದರಲ್ಲಿ ಕೇವಲ 150 ಮೀ. ಜೆಟ್ಟಿ ಮಾತ್ರ ಮೀನುಗಾರರ ಪ್ರಯೋಜನಕ್ಕೆ ಸಿಗುತ್ತಿದೆ.
ಇದರಿಂದ ಮೀನುಗಾರರಿಗೆ ಬೋಟ್, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ. ಗಂಗೊಳ್ಳಿ
ಬಂದರಿನಲ್ಲಿ 300ಕ್ಕೂ ಅಧಿಕ ಪಸೀನ್ ಬೋಟುಗಳು, 600ಕ್ಕೂ ಮಿಕ್ಕಿ ಮೀನುಗಾರಿಕಾ ಬೋಟು ಹಾಗೂ 500ಕ್ಕೂ ಅಧಿಕ ನಾಡದೋಣಿಗಳಿವೆ. ಕಳೆದ ವರ್ಷ ಇಲ್ಲಿನ ಬಂದರಿನ ಜೆಟ್ಟಿಯ ಸ್ಲಾ$Âಬ್ ಕುಸಿದಿತ್ತು. ಆ ಕಾರಣಕ್ಕೆ ಇಡೀ ಕಟ್ಟಡವೇ ಕುಸಿಯುವ ಭೀತಿಯಿಂದ ಎರಡನೇ ಹರಾಜು ಪ್ರಾಂಗಣದ ವಠಾರದಲ್ಲಿ ಮೀನುಗಾರಿಕೆ ಚಟುವಟಿಕೆ ನಿರ್ಬಂಧಿಸಲಾಗಿದೆ. ಇದರಿಂದ ಈಗ ಬಂದರಿನಲ್ಲಿ ಬೋಟುಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಜೆಟ್ಟಿಯ ವಿಸ್ತರಣೆ ಅಥವಾ ಪುನರ್ ನಿರ್ಮಾಣ ಅಗತ್ಯವಾಗಿದೆ. ಈಗ ಮತ್ಸ್ಯ ಕ್ಷಾಮದಿಂದಾಗಿ ಬಿರುಸಿನ ಮೀನುಗಾರಿಕೆ ನಡೆಯುತ್ತಿಲ್ಲವಾದ್ದರಿಂದ ಬಂದರಿನಲ್ಲಿ ಬೋಟ್‌ಗಳು ಹಾಗೂ ದೋಣಿಗಳ ಒತ್ತಡ ಅಷ್ಟೇನೂ ಇಲ್ಲ. ಆದರೆ ಒಂದು ವೇಳೆ ಈ ಸಮಯದಲ್ಲಿ ಉತ್ತಮ ಮೀನುಗಾರಿಕೆ ನಡೆಯುತ್ತಿದ್ದರೆ ಆಗ ಬೋಟ್, ದೋಣಿಗಳನ್ನು ನಿಲ್ಲಿಸುವ ವಿಚಾರದಲ್ಲಿ ಜಾಗಕ್ಕಾಗಿಯೇ ಸಂಘರ್ಷ ಏರ್ಪಡುವ ಸಾಧ್ಯತೆಯೂ ಉಂಟಾಗುತ್ತಿತ್ತು ಎನ್ನುವುದು ಮೀನುಗಾರರ ಅನಿಸಿಕೆ.
Related Articles
ಕುಸಿದ ಜೆಟ್ಟಿ ದುರಸ್ತಿಯಾಗುವವರೆಗೆ ಮೀನುಗಾರಿಕೆಗೆ ತೊಂದರೆಯಾಗದಂತೆ ಬಂದರಿನ ಉತ್ತರ ದಿಕ್ಕಿನಲ್ಲಿ ನಿರುಪಯುಕ್ತ ವಾಗಿರುವ ಕಿರು ಜೆಟ್ಟಿ ಬಳಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಕಳೆದ ಆಗಸ್ಟ್ ನಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೆ.ಗಣೇಶ ಅವರು ಭೇಟಿ ಕೊಟ್ಟಾಗ ಭರವಸೆ ನೀಡಿದ್ದರು. ಈ ಜೆಟ್ಟಿ ಪ್ರದೇಶದಲ್ಲಿ ಕಲ್ಲು ಹಾಗೂ ಹೂಳು ತುಂಬಿರುವುದರಿಂದ ಇದರ ತುರ್ತು ಕಾಮಗಾರಿಗೆ 10 ಲಕ್ಷ ರೂ. ಅನುದಾನ ಬಿಡುಗಡೆ ಕೂಡ ಆಗಿತ್ತು. ಆದರೆ ಆಗ ಜೆಸಿಬಿಯನ್ನು ಒಮ್ಮೆ ನೀರಿಗಿಳಿಸಿ 2 ದಿನ ಕೆಲಸ ಮಾಡಿದ್ದು ಬಿಟ್ಟರೆ ಬೇರೆನೂ ಆಗಿಲ್ಲ ಎನ್ನುವುದು ಆರೋಪ. ಆದರೆ ಅಧಿಕಾರಿಗಳು ಅದು ಇ- ಟೆಂಡರ್‌ನಲ್ಲಿ ಲೋಪ ಆಗಿದೆ ಎನ್ನುತ್ತಾರೆ. ಇದರಿಂದ ಕಿರುಜೆಟ್ಟಿಯೂ ಮೀನುಗಾರರಿಗೆ ಪ್ರಯೋಜನಕ್ಕಿಲ್ಲವಾಗಿದೆ.
Advertisement
ಟೆಂಡರ್ ಪ್ರಕ್ರಿಯೆಗಂಗೊಳ್ಳಿಯ ಮೀನುಗಾರಿಕೆ ಬಂದರಿಗೆ ನಾನು ಭೇಟಿ ಕೊಟ್ಟಾಗ ಅಧಿಕಾರಿಗಳನ್ನೇ ಕರೆದುಕೊಂಡು ಬಂದು ಅವರಿಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಲಾಗಿದೆ. ಈಗಾಗಲೇ ಬಂದರಿನ ಪುನರ್ ನಿರ್ಮಾಣಕ್ಕಾಗಿ 12 ಕೋ.ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಇನ್ನು ಈ ಹಿಂದೆ ಮಾಡಿದ್ದ ಕಳಪೆ ಕಾಮಗಾರಿಯ ಕುರಿತಂತೆ ಸಂಬಂಧಪಟ್ಟ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಮಳೆಗಾಲದೊಳಗೆ ಪೂರ್ಣ
ನಾನು ಹಾಗೂ ಸಂಸದರು ಬಂದರಿನ ಪುನರ್ ನಿರ್ಮಾಣಕ್ಕೆ 12 ಕೋ.ರೂ. ಗೆ ಬೇಡಿಕೆಯ ಪ್ರಸ್ತಾವನೆ ಕಳುಹಿಸಿದ್ದೆವು. ಅದಕ್ಕೀಗ ಅನುಮೋದನೆಯೂ ಸಿಕ್ಕಿದೆ. ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸಲು ಎಲ್ಲ ರೀತಿಯಕ್ರಮ ಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು ಬೇರೆ ಬಂದರು ಆಶ್ರಯಿಸುವ ಸ್ಥಿತಿಯಿದೆ
ನಾವು ಅನೇಕ ಸಮಯಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಹೋರಾಟಕ್ಕೆ ಬೆಲೆ ಇಲ್ಲ. ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಎಲ್ಲರೂ ಭೇಟಿ ಕೊಟ್ಟರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ನಮಗೆ ಇಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಜಾಗದ ಕೊರತೆಯಾಗುವುದರಿಂದ ಮುಂದಿನ ದಿನಗಳಲ್ಲಿ ಬೇರೆ ಬಂದರುಗಳನ್ನು ಆಶ್ರಯಿಸುವ ಸ್ಥಿತಿಯೂ ಬರಬಹುದು.
-ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸಹಕಾರಿ ಸೇವಾ ಸಂಘ, ಗಂಗೊಳ್ಳಿ ಪ್ರಶಾಂತ್ ಪಾದೆ