ರಾಮಾಯಣ, ಮಹಾಭಾರತ, ಮಾಲ್ಗುಡಿ ಡೇಸ್, ಶಕ್ತಿಮಾನ್ ಧಾರವಾಹಿ ನಂತರ “ರಾಧಾ ಕೃಷ್ಣ” ಧಾರವಾಹಿ ತುಂಬಾ ಜನಪ್ರಿಯಗೊಂಡಿದೆ. ಅದರಲ್ಲಿಯೂ ಕೃಷ್ಣ ಮತ್ತು ರಾಧೆ ಪಾತ್ರಧಾರಿಗಳ ಬಗ್ಗೆ ಪ್ರೇಕ್ಷಕರು ಹೆಚ್ಚು ಮನಸೋತಿರುವುದು ಸುಳ್ಳಲ್ಲ. ಕೃಷ್ಣನ ಪಾತ್ರಧಾರಿ ಸುಮೇಧ್ ಮುದ್ಗಲ್ಕರ್ ಹಾಗೂ ರಾಧೆಯ ಪಾತ್ರದ ಮಲ್ಲಿಕಾ ಸಿಂಗ್ ಅಭಿನಯ ಹಾಗೂ ನಿಜಜೀವನದಲ್ಲಿಯೂ ಇಬ್ಬರು ರಾಧಾಕೃಷ್ಣರಂತೆ ಇದ್ದಿರುವ ಬಗ್ಗೆ ಸಾಕಷ್ಟು ಗಾಸಿಫ್ ಹಬ್ಬುತ್ತಲೇ ಇದೆ. ಹೀಗೆ ತೆರೆಮೇಲೆ ಅಪಾರ ಮೆಚ್ಚುಗೆ ಗಳಿಸಿರುವ ಕೃಷ್ಣನ ಪಾತ್ರಧಾರಿ ನಿಜಜೀವನದ ಪಯಣದ ಕುರಿತ ಒಂದು ನೋಟ ಇಲ್ಲಿದೆ.
ಸುಮೇಧ್ ಮುದ್ಗಲ್ಕರ್ 2013ರ “ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 4” ರಿಯಾಲಿಟಿ ಶೋ ಮೂಲಕ ಹೆಚ್ಚು ಗಮನ ಸೆಳೆದಿದ್ದ. ಸುಮೇಧ್ ಈ ಶೋನ ಕೊನೆಯಲ್ಲಿ “ಬೀಟ್ ಕಿಂಗ್ ಸುಮೇಧ್” ಎಂಬ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಹೀಗೆ ಆರಂಭವಾದ ಸುಮೇಧ್ ಪಯಣ ಇಂದು ಸಿನಿಮಾ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಡ್ಯಾನ್ಸ್ ತರಬೇತಿ ಹೋಗದೆ ಯಶಸ್ಸು ಪಡೆದಿದ್ದ ಸುಮೇಧ್!
ಸುಮೇಧ್ ಮುದ್ಗಾಲ್ಕರ್ ಯಾವತ್ತೂ ಡ್ಯಾನ್ಸ್ ತರಬೇತಿ ತರಗತಿಗೆ ಹೋಗಿರಲಿಲ್ಲವಾಗಿತ್ತು. ಕೇವಲ ಇಂಟರ್ನೆಟ್ ನೋಡಿಕೊಂಡು ಸುಮೇಧ್ ಡ್ಯಾನ್ಸ್ ಕಲಿತಿದ್ದ. 2012ರಲ್ಲಿ ಡ್ಯಾನ್ಸ್ ಮಹಾರಾಷ್ಟ್ರ ಡ್ಯಾನ್ಸ್ ಮರಾಠಿ ರಿಯಾಲಿಟಿ ಶೋನದಲ್ಲಿ ಸುಮೇಧ್ ಮೊದಲು ಭಾಗವಹಿಸುವ ಮೂಲಕ ತನ್ನ ಡ್ಯಾನ್ಸ್ ಪ್ರತಿಭೆಯನ್ನು ಹೊರಹಾಕಿದ್ದ. ಸುಮೇಧ್ ಮೊದಲು ತನ್ನ ನಟನಾ ಪ್ರತಿಭೆಯನ್ನು ತೋರ್ಪಡಿಸಿದ್ದು 2011ರಲ್ಲಿ, “V” ಚಾನೆಲ್ ನ ದಿಲ್ ದೋಸ್ತಿ ಡ್ಯಾನ್ಸ್ ಶೋನಲ್ಲಿ. ಇದೊಂದು ನೃತ್ಯಾಧಾರಿತ ಯುವ ಪ್ರತಿಭೆ ಅನಾವರಣದ ಶೋ ಆಗಿತ್ತು. ಅಂದು ರಾಘವ್ ಅಲಿಯಾಸ್ ರಾಘವೇಂದ್ರ ಪ್ರತಾಪ್ ಎಂಬ ಪಾತ್ರಾಭಿನಯ ಮಾಡಿದ್ದ. ಇದು ಸುಮೇಧ್ ಬದುಕಿಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಆಗಿತ್ತು.
ಕಿರಿಯ ವಯಸ್ಸಿನಲ್ಲಿಯೇ ಎಲ್ಲರ ಮನಗೆಲ್ಲುತ್ತಾ ಬಂದಿದ್ದ ಪುಣೆಯ ಈ ಯುವಕ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಬಣ್ಣ ಹಚ್ಚಿದ್ದು 15ನೇ ವಯಸ್ಸಿಗೆ. ಅದು “ಚಕ್ರವರ್ತಿ ಅಶೋಕ್ ಸಾಮ್ರಾಟ್” ಐತಿಹಾಸಿಕ ಟಿವಿ ಸೀರಿಯಲ್ ನಲ್ಲಿ ಯುವರಾಜ್ ಸುಶೀಂ ಪಾತ್ರಕ್ಕೆ ಬಣ್ಣ ಹಚ್ಚಿದ್ದ! ಇದೊಂದು ನೆಗೆಟಿವ್ ಪಾತ್ರವಾಗಿತ್ತು. ನಂತರ ಮುದ್ಗಾಲ್ಕರ್ ಮರಾಠಿ ಚಿತ್ರರಂಗದತ್ತ ಹೊರಳಿದ್ದರು. 2016ರಲ್ಲಿ ತೆರಕಂಡಿದ್ದ ಬಾಲಿವುಡ್ ಚೆಲುವೆ ಪ್ರಿಯಾಂಕಾ ಚೋಪ್ರಾ ನಿರ್ಮಾಣದ “ವೆಂಟಿಲೇಟರ್” ಸಿನಿಮಾದಲ್ಲಿ ಕರಣ್ ಆಗಿ ಪ್ರೇಕ್ಷಕರ ಮನ ಸೆಳೆದಿದ್ದರು. 2017ರ ಜುಲೈ 17ರಂದು ಬಿಡುಗಡೆಯಾಗಿದ್ದ ಮಾಂಝಾ ಚಿತ್ರದಲ್ಲಿ ಮುಖ್ಯಭೂಮಿಕೆಯ ಪಾತ್ರದ ಮೂಲಕ ನಟಿಸಿ ಜಾಗತಿಕವಾಗಿ ತಮ್ಮ ಅದ್ಭುತ ಪ್ರತಿಭೆಯನ್ನು ತಿಳಿಯುವಂತೆ ಮಾಡಿದ್ದರು. ಈ ಸಿನಿಮಾದಲ್ಲಿ ಸುಮೇಧ್ ವಿಕಿ ಹೆಸರಿನ ಸೈಕೋಪಾಥ್ ಪಾತ್ರ ನಿರ್ವಹಿಸಿದ್ದರು. 2018ರಲ್ಲಿ ಬಿಡುಗಡೆಯಾದ ಮರಾಠಿ ಸಿನಿಮಾ “ಬಕೆಟ್ ಲಿಸ್ಟ್” ನಲ್ಲಿ ಅವಳಿ ಸಹೋದರರ ಪಾತ್ರದಲ್ಲಿ ಸುಮೇಧ್ ನಟಿಸಿದ್ದ, ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಸೇರಿದಂತೆ ಬಾಲಿವುಡ್ ನ ಹೆಸರಾಂತ ನಟರು ನಟಿಸಿದ್ದರು. ಅಷ್ಟೇ ಅಲ್ಲ “ಜಗ್ ಜನನಿ ಮಾ ವೈಷ್ಣೋ ದೇವಿ” ಧಾರಾವಾಹಿಗೆ ಮುದ್ಗಲ್ಕರ್ ಧ್ವನಿ ನೀಡಿದ್ದಾರೆ.
ರಾಧೆ…ರಾಧೆ ಮುಗ್ದ ನಗುವಿನ, ಮೆಲುಧ್ವನಿಯ ಕೃಷ್ಣ!
2018ರಿಂದ ಸುಮೇಧ್ ಮುದ್ಗಲ್ಕರ್ “ರಾಧಾಕೃಷ್ಣ” ಧಾರಾವಾಹಿಯಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸ್ಟಾರ್ ಭಾರತ್ ನಲ್ಲಿ ಕಳೆದ ವರ್ಷ ಅಕ್ಟೋಬರ್ 1ರಿಂದ ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಡಬ್ಬಿಂಗ್ ಪ್ರಸಾರವಾಗುತ್ತಿದೆ. ಸುಮೇಧ್ ಹಾಗೂ ಮಲ್ಲಿಕಾ ಸಿಂಗ್ ಜೋಡಿ ರಾಧಾಕೃಷ್ಣರಾಗಿ ಎಲ್ಲರ ಮನಗೆದ್ದಿದ್ದಾರೆ. ಕಳೆದ ಐದು ವರ್ಷಗಳಿಂದ ಪರಿಚಿತವಾಗಿರುವ ಜೋಡಿಯ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ. ಆದರೆ ತಾನು ಇಂತಹ ಗಾಸಿಫ್ ಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಸುಮೇಧ್ ಪ್ರತಿಕ್ರಿಯೆ.
ಮಲ್ಲಿಕಾ ನನ್ನ ಜೀವನದ ತುಂಬಾ ಅಮೂಲ್ಯವಾದ ವ್ಯಕ್ತಿ ಅಲ್ಲದೇ ಆಕೆ ತುಂಬಾ ಹೃದಯವಂತ ಹೆಣ್ಣು. ಇಂತಹ ಊಹಾಪೋಹಗಳಿಂದ ನನಗೇನೂ ತೊಂದರೆಯಾಗುವುದಿಲ್ಲ. ನಿಜ ಹೇಳಬೇಕೆಂದರೆ ಬಸಂತ್ ಭಟ್ (ರಾಧಾಕೃಷ್ಣ ಧಾರವಾಹಿಯ ಬಲರಾಮ ಪಾತ್ರಧಾರಿ) ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವ್ಯಕ್ತಿ ಎಂಬುದು ಸುಮೇಧ್ ಮನದಾಳದ ಮಾತು.
ರಾಧಾ ಕೃಷ್ಣ ಧಾರಾವಾಹಿಯಲ್ಲಿನ ಅತ್ಯುತ್ತಮ ನಟನೆಗಾಗಿ 2019ರಲ್ಲಿ ಸುಮೇಧ್ ಗೋಲ್ಡ್ ಅವಾರ್ಡ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಏಷಿಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ ಹಾಗೂ ಅತೀ ಜನಪ್ರಿಯ ಜೋಡಿ (ಸುಮೇಧ್, ಮಲ್ಲಿಕಾ) ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈ ಇಬ್ಬರ ಪ್ರತಿಭೆ ಇನ್ನಷ್ಟು ಬೆಳಗಲಿ…
ನಾಗೇಂದ್ರ ತ್ರಾಸಿ