Advertisement

ವೈದ್ಯರ ಪ್ರತಿಭಟನೆಯಲ್ಲಿ ಪಟ್ಟಭದ್ರರ ಕೈ

02:57 PM Jun 21, 2017 | |

ವಿಧಾನಸಭೆ: ವೈದ್ಯಕೀಯ ಸೇವೆಯನ್ನು ವ್ಯಾಪಾರವೆಂದು ಪರಿಗಣಿಸಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುತ್ತಿರುವವರನ್ನು ನಿಯಂತ್ರಿಸಲು ವಿಧೇಯಕದ ಮೂಲಕ ಮುಂದಾಗಿದ್ದೇವೆ. ಆದರೆ, ವೈದ್ಯರು, ನರ್ಸ್‌ ಗಳು, ಸಹಾಯಕ ಸಿಬ್ಬಂದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ವೈದ್ಯರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡುವಂತೆ ಮಾಡಿವೆ ಎಂದು ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯರ ವಿರುದ್ಧ ಆರೋಗ್ಯ ಸಚಿವ ರಮೇಶ್‌ಕುಮಾರ್‌ ಕಿಡಿ ಕಾರಿದ್ದಾರೆ.

Advertisement

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕದ ಕುರಿತು ವಿವರಣೆ ನೀಡುವ ಸಮಯವನ್ನು ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಲು ಬಳಸಿಕೊಂಡ ರಮೇಶ್‌ಕುಮಾರ್‌, ಒಂದು ಸ್ಟೆಂಟ್‌ ಅಳವಡಿಸಲು ಜಯದೇವ ಆಸ್ಪತ್ರೆಯಲ್ಲಿ 50ರಿಂದ 55 ಸಾವಿರ ರೂ. ಮಾತ್ರ ತೆಗೆದುಕೊಂಡರೆ ಖಾಸಗಿಯವರು 2 ಲಕ್ಷ ರೂ. ವಸೂಲಿ ಮಾಡುತ್ತಾರೆ. ಡಯಾಲಿಸಿಸ್‌ಗೆ 1200-1300 ರೂ. ವಸೂಲಿ ಮಾಡುತ್ತಾರೆ.

ಕರ್ನಾಟಕ ಕ್ಯಾನ್ಸರ್‌ ಆಸ್ಪತ್ರೆಯವರು ಮೃತಪಟ್ಟವರ ಹೆಸರಿನಲ್ಲಿ ನಕಲಿ ಬಿಲ್‌ ಮಾಡಿ ಸರ್ಕಾರದ ಹಣ ಲೂಟಿ ಹೊಡೆಯಲು ನೋಡಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನಿರಬೇಕೇ? ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ? ವಿವಿಧ ಆರೋಗ್ಯ ವಿಮೆ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 1000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುತ್ತದೆ.

ಇದರಲ್ಲಿ ಶೇ.80ರಷ್ಟು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತದೆ. ಹಿಂದೆ ಆರೋಗ್ಯ ವಿಮೆ ಮೊತ್ತ ಬಾಕಿ ಇದೆ ಎಂದು ಪ್ರತಿಭಟನೆ ಮಾಡಿಸಿದವರ ಪೈಕಿ ಕೆಲವರ ಸಂಸ್ಥೆಗಳನ್ನು ವಿಮಾ ಯೋಜನೆಯ ಪ್ಯಾನಲ್‌ನಿಂದ ಕೈಬಿಡಲಾಗಿತ್ತು. ಆದರೆ, ನಂತರದಲ್ಲಿ ಅವರು ತಮ್ಮ ಹೆಸರನ್ನು ಪ್ಯಾನಲ್‌ಗೆ ಸೇರಿಸುವಂತೆ ಒತ್ತಡ ತಂದಿದ್ದಾರೆ. ಲಾಭ ಇಲ್ಲದೇ ಇದ್ದರೆ ಅವರು ಹಾಗೆ ಮಾಡುತ್ತಿದ್ದರೇ? ಸರ್ಕಾರದ ಹಣ, ಸೌಲಭ್ಯ ಪಡೆದುಕೊಂಡು ಬಡವರಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಿದರೆ ಅದಕ್ಕೆ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ಪ್ರತಿಭಟನೆ ನಡೆಸಿ ಕಾಯ್ದೆ ಜಾರಿಗೊಳಿಸಲು ಅಡ್ಡಿಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಮಾಹಿತಿ ಇಲ್ಲದವರಿಂದ ಧರಣಿ: ಕುಡಿದು ವಾಹನ ಓಡಿಸಿದರೆ ದಂಡ ಹಾಕುತ್ತಾರೆ. ಹಾಗೆಂದು ಕುಡಿಯದೇ ವಾಹನ ಓಡಿಸಿದರೆ ಯಾರಾದರೂ ದಂಡ ಹಾಕುತ್ತಾರೆಯೇ? ಸರ್ಕಾರದ ನಿಯಮ ಉಲ್ಲಂ ಸಿ ಹೆಚ್ಚು ಶುಲ್ಕ ವಸೂಲಿ ಮಾಡಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ. ಇದು ಗೊತ್ತಿದ್ದೂ ವಿಧೇಯಕದ ಬಗ್ಗೆ ಮಾಹಿತಿ ಇಲ್ಲದ ವೈದ್ಯರನ್ನು ಕರೆಸಿ ಪ್ರತಿಭಟನೆ ಮಾಡಿಸಿದರು. ನನ್ನ ವಿರುದ್ಧ ಹೇಳಿಕೆಗಳನ್ನು ನೀಡಿದರು. ಆದರೂ ಅವರ ಮೇಲೆ ನನಗೇನೂ ಸಿಟ್ಟಿಲ್ಲ. ಅವರೆಲ್ಲರಿಗೂ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Advertisement

ನಾವು ಬಂಡವಾಳ ಹಾಕಿ ಆಸ್ಪತ್ರೆ ಕಟ್ಟಿ ಚಿಕಿತ್ಸೆ ನೀಡುತ್ತೇವೆ. ಅದರ ವೆಚ್ಚವನ್ನು ಬರುವ ರೋಗಿಗಳಿಂದ ತೆಗೆದುಕೊಳ್ಳುತ್ತೇವೆ. ಸರ್ಕಾರದಿಂದ ಹಣ ಪಡೆಯುವುದಿಲ್ಲ ಎಂದು ಈ ನೀತಿ ವಿರೋಧಿಸುವವರು ಹೇಳುತ್ತಾರೆ. ಹಾಗಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಹೆಲಿಕಾಫ್ಟರ್‌ನಿಂದ ನೇರವಾಗಿ ಬಂದು ಇಳಿಯುತ್ತಾರಾ? ರಸ್ತೆ ಸಂಪರ್ಕ ಕಲ್ಪಿಸಿದ್ದು ಯಾರು? ಅವರಿಗೆ ವಿದ್ಯುತ್‌, ಒಳಚರಂಡಿ, ನೀರು ವ್ಯವಸ್ಥೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಅಸಂಘಟಿತರ ಹಿತ ಕಾಯಲು ಬದ್ಧ: ಪೈಲ್ವಾನ್‌ ಒಬ್ಬ ಬಂದು ನಿಂತಾಗ ಆತನ ಗಟ್ಟಿಮುಟ್ಟಾದ ಕಾಲುಗಳನ್ನು ಕಂಡು ಎಲ್ಲರೂ ಆತನ ಕಾಲು ಹೇಗಿದೆ ನೋಡು? ಎಷ್ಟೊಂದು ಸದೃಢವಾಗಿದೆ ಎಂದು ಹೇಳುತ್ತಾರೆ. ಆದರೆ, ನಾವು ಆ ಕಾಲು ಗಮನಿಸುವುದಿಲ್ಲ. ಆ ಕಾಲಿನ ಕೆಳಗೆ ಸಿಲುಕಿರುವ ಇರುವೆಯನ್ನು ನೋಡಿ ಅದಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದನ ಕೆಲಸ ಮಾಡಬೇಕಾಗುತ್ತದೆ.

ಸಂಘಟಿತರು ಅಭಿಪ್ರಾಯಗಳನ್ನು ಸುಲಭವಾಗಿ ಹೇಳಬಹುದು. ಅಸಂಘಟಿತರು ನೋವು, ಸಂಕಷ್ಟ ಹೇಳಿಕೊಳ್ಳುವುದು ಕಷ್ಟ. ಸಂಘಟಿತರನ್ನು ಗಣನೆಗೆ ತೆಗೆದುಕೊಳ್ಳಬಾರದೆಂದು ಹೇಳುತ್ತಿಲ್ಲ. ಅಸಂಘಟಿತರು ನೋವನ್ನು ತೋಡಿಕೊಳ್ಳಲೆಂದೇ ನಮ್ಮನ್ನು (ಜನಪ್ರತಿನಿಧಿಗಳು) ನೇಮಿಸಿದ್ದಾರೆ. ಆದ್ದರಿಂದ ಅಸಂಘಟಿತರ ಹಿತ ಕಾಯಲು ತಾವು ಬದ್ಧ ಎಂದರು. 

ಕಾಯ್ದೆಯಲ್ಲಿ ಖಾಸಗಿ ಎನ್ನುವ ಪದ ತೆಗೆಯಿರಿ. ಸರ್ಕಾರಿ ಆಸ್ಪತ್ರೆಗಳನ್ನೂ ಸೇರಿಸಿ ಎಂದು ಖಾಸಗಿ ಆಸ್ಪತ್ರೆಯವರು ಒತ್ತಾಯಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ತಪ್ಪುಗಳಾದರೆ ತನಿಖೆ ನಡೆಸಲಾಗುವುದು, ವೈದ್ಯರ ಎಲ್ಲಾ ಸೇವಾ ವಿಚಾರವನ್ನು ಸರ್ಕಾರ ನಿಯಂತ್ರಿಸಲಿದೆ. ಇದನ್ನು ಸಮಾಜ ಚರ್ಚೆ ಮಾಡಲಿ, ಸದನ ಪರಾಮರ್ಶಿಸಲಿ ಎಂದು ಮನವಿ ಮಾಡಿದರು. 

ಕಪ್ಪುಪಟ್ಟಿಗೆ 349 ಖಾಸಗಿ ಆಸ್ಪತ್ರೆ: ದಿಲ್ಲಿಯ ಏಮ್ಸ್‌ನಲ್ಲಿ ಕ್ಯಾನ್ಸರ್‌ಗೆನೀಡುವ ಔಷಧಕ್ಕೆ 280 ರೂ. ಇದ್ದರೆ, ನಮ್ಮಲ್ಲಿ 1300 ರೂ. ತೆಗೆದುಕೊಳ್ಳುತ್ತಾರೆ. ಖಜಾನೆಯ ದುಡ್ಡಷ್ಟೇ ಅಲ್ಲ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವೂ ಇವರಿಗೆ ಸಾಲುವುದಿಲ್ಲ. ಸರ್ಕಾರಿ ಆಸ್ಪತ್ರೆಯ 200 ಮೀ. ವ್ಯಾಪ್ತಿಯಲ್ಲಿ ಖಾಸಗಿ ಡಯಾಗ್ನೊàಸ್ಟಿಕ್‌ ಸೆಂಟರ್‌ ಇರಬಾರದು ಎಂದು ಆದೇಶ ಹೊರಡಿಸಿದರೆ ಪ್ರತಿಭಟನೆ ಮಾಡುತ್ತಾರೆ. ಬೋಗಸ್‌, ಪೋರ್ಜರಿ ಬಿಲ್‌ ನೀಡಿದ್ದಕ್ಕಾಗಿ ವಿಮಾ ಸಂಸ್ಥೆಗಳು 349 ಖಾಸಗಿ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಿವೆ. ಸುವರ್ಣ ಆರೋಗ್ಯ ಸುರûಾ ಟ್ರಸ್ಟ್‌ಗೆ ಖಾಸಗಿ ಆಸ್ಪತ್ರೆಗಳ ವಿರುದ್ಧ 251 ದೂರು ಬಂದಿವೆ ಎಂದು ಖಾಸಗಿ ಆಸ್ಪತ್ರೆಗಳನ್ನು
ತರಾಟೆ ತೆಗೆದುಕೊಂಡರು.

ಪೂಜಾರಿ ವಿರುದ್ಧ
ಆಕ್ರೋಶ

ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಯಾವ ಸೌಲಭ್ಯ ಒದಗಿಸುತ್ತದೆ ಎಂದು ಪ್ರಶ್ನಿಸಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ವಿರುದ್ಧವೂ ಕಿಡಿ ಕಾರಿದ ರಮೇಶ್‌ಕುಮಾರ್‌, ಒಬ್ಬ ನಾಯಕರು ಈ ವಿಚಾರದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಅವರು ಇನ್ನು ಮುಂದಾದರೂ ಕಣ್ಣು ತೆರೆದು ವಾಸ್ತವ ನೋಡಬೇಕು. ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಾಗ ಅರಸು ವಿರುದ್ಧ ಮಣ್ಣು ತೂರಲಾಗಿತ್ತು. ಆದರೆ, ನಂತರದಲ್ಲಿ ಅದರಿಂದ ಆದ ಅನುಕೂಲ ಅವರು ನೆನಪು ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂಗೆ ನನ್ನ ಮೇಲೆ ಏನು ಸೇಡಿತ್ತೋ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಏನು ಸೇಡಿತ್ತೋ ಗೊತ್ತಿಲ್ಲ. ಮೂರು ವರ್ಷ ನನ್ನನ್ನು ಗಣನೆಗೇ ತೆಗೆದುಕೊಳ್ಳದೆ ಸುಮ್ಮನಿದ್ದು, ನಂತರ ಬಹಳ ಬಾಲ ಬಿಚ್ಚುತ್ತೀಯಾ ಎಂದು ಹೇಳಿ ಆರೋಗ್ಯ ಖಾತೆಯನ್ನು ನೀಡಿದರು. ಇದರಿಂದಾಗಿ ನಾನು ಏನೇನೋ ಮಾತುಗಳನ್ನು ಕೇಳಬೇಕಾಗಿ ಬಂತು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಹೇಳಿದರು.

ಸರ್ಕಾರಿ ವೈದ್ಯರಿಗೆ ಕಡಿಮೆ ಸಂಬಳ ಕೊಡುತ್ತಿಲ್ಲ. ಸಾಕಷ್ಟು ಸಂಬಳ ಕೊಟ್ಟರೂ ಹಳ್ಳಿಗಳಿಗೆ ಬರಲು ಪಾಪ ಅವರಿಗೇನೋ ತೊಂದರೆ. ಒಂದೊಮ್ಮೆ ವೈದ್ಯರು ಹಳ್ಳಿಗಳಿಗೆ ಬರುವುದಾದರೆ ಅವರಿಗೆ ಸಂಬಳ ಕೊಡುವುದರ ಜತೆಗೆ ತಳಿರು ತೋರಣ ಕಟ್ಟಿ, ಬ್ಯಾಂಡ್‌ ಬಾರಿಸಿ ಸ್ವಾಗತಿಸುತ್ತೇವೆ.
– ರಮೇಶ್‌ ಕುಮಾರ್‌, ಆರೋಗ್ಯ ಸಚಿವ

ಮೊದಲು ಸರ್ಕಾರಿ ಆಸ್ಪತ್ರೆಗಳನ್ನು
ನಿಭಾಯಿಸಿ: ಅಶ್ವತ್ಥನಾರಾಯಣ
ವಿಧಾನಸಭೆ:
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ವೇಳೆ ಸಚಿವ ರಮೇಶ್‌ಕುಮಾರ್‌ ಮತ್ತು ಬಿಜೆಪಿ ಸದಸ್ಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪರಸ್ಪರ ವಾಗ್ವಾದಕ್ಕಿಳಿದ ಘಟನೆ ನಡೆಯಿತು. ವಿಧೇಯಕದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಸರ್ಕಾರದ ಕ್ರಮಕ್ಕೆ ಆಕ್ರೋಶ
ವ್ಯಕ್ತಪಡಿಸಿದ ಅಶ್ವತ್ಥನಾರಾಯಣ, ಸರ್ಕಾರಿ ಆಸ್ಪತ್ರೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವುದು ಸರಿಯಲ್ಲ. ಈ ರೀತಿ ಕಾಯ್ದೆ ರೂಪಿಸಿದರೆ ಅದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದು ಸಚಿವ ರಮೇಶ್‌ಕುಮಾರ್‌ ಅವರನ್ನು ಕೆರಳಿಸಿತು. ಈ ಎಲ್ಲ ವಿಚಾರಗಳನ್ನು ಪರಿಗಣಿಸಿಯೇ ಸರ್ಕಾರ ವಿಧೇಯಕ ರೂಪಿಸಿದೆ. ಕೋರ್ಟ್‌ನಲ್ಲಿ ಏನು ಮಾಡಬೇಕೆಂಬುದು ಸರ್ಕಾರಕ್ಕೆ ಗೊತ್ತಿದೆ. ನೀವು ಖಾಸಗಿ ಆಸ್ಪತ್ರೆಗಳ ಪರ ಲಾಭಿ ನಡೆಸುವುದಾದರೆ ನಡೆಸಿ. ಯಾರು, ಯಾರ ಪರವಾಗಿದ್ದಾರೆ ಎಂಬುದು ಸದನದ ಮೂಲಕ ಜನರಿಗೆ ಗೊತ್ತಾಗಲಿ ಎಂದು ಸಚಿವರು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಉಡುಪಿ ಸರ್ಕಾರಿ ಆಸ್ಪತ್ರೆಯ ಜಾಗವನ್ನು ಉದ್ಯಮಿ ಬಿ.ಆರ್‌.ಶೆಟ್ಟಿ ಅವರಿಗೆ ನೀಡಿದ ಬಗ್ಗೆ ಪ್ರಸ್ತಾಪಿಸಿದ ಅಶ್ವತ್ಥನಾರಾಯಣ, ಈ ಆಸ್ಪತ್ರೆಯನ್ನು ನಿಭಾಯಿಸಲಾಗದವರು ಮತ್ತೇಕೆ ಬಿ.ಆರ್‌.ಶೆಟ್ಟಿ ಹೆಸರಿಗೆ
ಹಸ್ತಾಂತರಿಸಿದಿರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಆಸ್ಪತ್ರೆ ನಿರ್ಮಿಸಿಕೊಡುತ್ತಾರೆ. ಸರ್ಕಾರವೇ ಅದನ್ನು ನಡೆಸುತ್ತದೆ ಮತ್ತು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತದೆ. ಅಲ್ಲದೆ, ಪಕ್ಕದಲ್ಲೇ ಬಿ.ಆರ್‌.ಶೆಟ್ಟಿ
ನಿರ್ಮಿಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಈ ಆಸ್ಪತ್ರೆ ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿದರು. ಆದರೂ ಸಮಾಧಾನಗೊಳ್ಳದ ಅಶ್ವತ್ಥನಾರಾಯಣ ಸಚಿವರ ವಿರುದ್ಧ ಮಾತನಾಡಿದಾಗ ಸಚಿವ ರಮೇಶ್‌ಕುಮಾರ್‌ ಮತ್ತಷ್ಟು ಸಿಟ್ಟುಗೊಂಡರು. ಇಬ್ಬರ ಮಧ್ಯೆ ಜೋರು ದನಿಯಲ್ಲಿ ಮಾತಿನ ಚಕಮಕಿ ನಡೆಯಿತು .

Advertisement

Udayavani is now on Telegram. Click here to join our channel and stay updated with the latest news.

Next