Advertisement

ರಾಹುಲ್‌ ಬಗ್ಗೆ ಕೈ ನಾಯಕರಿಗೇ ವಿಶ್ವಾಸವಿಲ್ಲ

11:02 AM Apr 05, 2019 | pallavi |

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಭಾವಚಿತ್ರ ಮುದ್ರಿಸಲು
ಪ್ರಣಾಳಿಕೆ ಸಮಿತಿ ಸದಸ್ಯರು ಹಿಂದೇಟು ಹಾಕಿದ್ದು, ರಾಹುಲ್‌ ಗಾಂಧಿಯವರ ನಾಯಕತ್ವದ ಬಗ್ಗೆ ಪಕ್ಷದಲ್ಲೇ
ವಿಶ್ವಾಸವಿಲ್ಲದಿರುವುದನ್ನು ತೋರಿಸುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರೇ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿನ ಆಂತರಿಕ ಗೊಂದಲ ಬಹಿರಂಗವಾಗಿದೆ. ರಾಹುಲ್‌ಗಾಂಧಿಯವರು ತಮ್ಮ ಭಾವಚಿತ್ರವನ್ನು ಪ್ರಣಾಳಿಕೆಯಲ್ಲಿ ಹಾಕುವಂತೆ ತಮ್ಮ ತಾಯಿ ನೆರವು ಪಡೆಯಬೇಕಿರುವುದು ಶೋಚನೀಯ. ರಾಹುಲ್‌ ಗಾಂಧಿಯವರ ಬಗ್ಗೆ ನಮಗೆ ಸಹಾನುಭೂತಿ ಇದೆ ಎಂದು ವ್ಯಂಗ್ಯವಾಡಿದರು.

ಅಮೇಥಿಯಲ್ಲಿ ಸೋಲುವ ಭೀತಿ: ಅಮೇಥಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ಜನಪ್ರಿಯತೆ ಕಂಡ ರಾಹುಲ್‌ ಗಾಂಧಿ, ಅಲ್ಲಿ ಸೋಲುವ ಭೀತಿಯಿಂದ ಕೇರಳದ ವಯನಾಡು ಕ್ಷೇತ್ರದತ್ತ ಪಲಾಯನ ಮಾಡಿದ್ದಾರೆ. ಎಡ ಪಕ್ಷಗಳ ಹಿಡಿತದಲ್ಲಿರುವ ಕೇರಳದಲ್ಲಿ ಸುರಕ್ಷಿತ ಸ್ಥಾನ ಅರಸಿಕೊಳ್ಳುವ ಮೂಲಕ ರಾಹುಲ್‌ ಗಾಂಧಿ ವಾಮಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಹುಲ್‌ ಗಾಂಧಿಯವರಿಗೆ ರಾಜಕೀಯ ವ್ಯೂಹ ರಚಿಸುವುದರಲ್ಲಿ ಪ್ರಬುದ್ಧತೆ ಇಲ್ಲದಿರುವುದು ಮತ್ತೆ ಸಾಬೀತಾಗಿದೆ ಎಂದು ಹೇಳಿದರು.

ದೇಶ ಒಡೆಯುವ ಯತ್ನ: ದೇಶದ್ರೋಹಿಗಳನ್ನು ಬೆಂಬಲಿಸುವ, ಪಾಕಿಸ್ತಾನಕ್ಕೆ ಜೈಕಾರ ಹಾಕುವವರ ಓಲೈಕೆಗಾಗಿ
ದೇಶದ್ರೋಹಿ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕಾಶ್ಮೀರದಲ್ಲಿನ ಇಂದಿನ ಸ್ಥಿತಿಗೆ
ಕಾರಣವಾಗಿರುವ ಕಾಂಗ್ರೆಸ್‌, ಇದೀಗ ಸಶಸ್ತ್ರ ವಿಶೇಷಾಧಿಕಾರ ವಾಪಸ್‌ ಪಡೆಯುವುದಾಗಿ ಹೇಳುವ ಮೂಲಕ ದೇಶ
ಒಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ವಕ್ತಾರ ಗೋ. ಮಧುಸೂದನ್‌, ರಾಜ್ಯ ಬಿಜೆಪಿ ವಕ್ತಾರ ಪ್ರಮೋದ್‌ ಹೆಗಡೆ, ಸಹ ವಕ್ತಾರ ಎ.ಎಚ್‌.ಆನಂದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next