ಚಿತ್ತಾಪುರ: ಅಫಜಲಪುರ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿ ಮಾಲಿಕಯ್ಯ ಅವರನ್ನು ಸೋಲಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಇಲ್ಲಿಗೆ ಬಂದು ಉರುಳು ಸೇವೆ ಮಾಡಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಮಾಲೀಕಯ್ನಾ ಗುತ್ತೇದಾರ ಅವರಿಗೆ ಸನ್ಮಾನ, ಬಿಜೆಪಿ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲವೇ, ಮುಖ್ಯಮಂತ್ರಿ ಹಾಗೂ ಅವರ ಮಗ, ಸಚಿವರು ಮತ್ತು ಅವರ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ದೃತರಾಷ್ಟ್ರ ಪುತ್ರ ವ್ಯಾಮೋಹ ಇದೆ. ಇದು ಕೌರವರಂತೆ ನಾಶವಾಗಲಿದೆ. ಬಿಜೆಪಿ ಪಾಂಡವರಂತಿದೆ. ಇಲ್ಲಿ ನ್ಯಾಯಯುತವಾದ ಬತ್ತಳಿಕೆ ಇದೆ. ಸ್ವಾಭಿಮಾನ, ರಾಷ್ಟ್ರಾಭಿಮಾನ ಇದೆ. ಆದ್ದರಿಂದ ಪಾಂಡವರಾದ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಅಫಜಲಪುರ ಮತಕ್ಷೇತ್ರದ ಅಭಿವೃದ್ಧಿಯಲ್ಲಿ ಗೋಲ್ ಮಾಲ್ ಆಗಿದೆ. ನಾನು ಅಧಿಕಾರಿಗಳ ಜತೆ ಸೇರಿ ಕಮಿಷನ್ ತಿಂದಿದ್ದೇನೆ ಅಂತೆ. ಆದ್ದರಿಂದ ನನ್ನ ಮೇಲೆ ಸಿಬಿಐ ತನಿಖೆ ಮಾಡಿಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ನೀವು ಚಿತ್ತಾಪುರ ಮತಕ್ಷೇತ್ರಕ್ಕೆ 2700 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳುತ್ತಿರಲ್ಲ. ಇದರಲ್ಲಿ ನೀವು ಎಷ್ಟು ಗೋಲ್ ಮಾಲ್ ಮಾಡಿ ಕಾಗದದಲ್ಲಿ ಮಾತ್ರ ಅಭಿವೃದ್ಧಿ ಪಡಿಸಿದ್ದಿರಿ ಎನ್ನುವುದು ನನ್ನ ಹತ್ತಿರ ದಾಖಲೆಗಳಿವೆ. ಬಿಜೆಪಿ ಅಧಿಕಾರಕ್ಕೆ ಬರಲಿ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಸಿಬಿಐ ತನಿಖೆ ಮಾಡಿಸುತ್ತೇನೆ ಎಂದು ಸವಾಲು ಹಾಕಿದರು.
ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್ ಮುಖಂಡರಾದ ಶಾಮರಾವ ಪ್ಯಾಟಿ, ಶ್ರೀನಿವಾಸ ಸಗರ್, ನಾಗರಾಜ ಭಂಕಲಗಿ, ಶಿವಯ್ಯ ಗುತ್ತೇದಾರ್ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಯ್ಯ ಗುತ್ತೇದಾರ ನೇತೃತ್ವದಲ್ಲಿ ಪೇಠಶಿರೂರ, ಬೆಣ್ಣೂರ, ಹದನೂರ್ ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಮಾಜಿ ಸಚಿವ ಬಾಬುರಾವ ಚವ್ಹಾಣ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಸದಸ್ಯ ಅಶೋಕ ಸಗರ್ ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ಸೋಮಶೇಖರ ಪಾಟೀಲ ಬೆಳಗುಂಪಾ, ಚಂದ್ರಶೇಖರ ಆವಂಟಿ, ಬಸವರಾಜ ಇಂಗಿನ್, ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ತಮ್ಮಣ್ಣ ಡಿಗ್ಗಿ ಮತ್ತಿತರರು ಇದ್ದರು. ಶರಣು ಜ್ಯೋತಿ ರಾವೂರ ನಿರೂಪಿಸಿದರು. ನಾಗರಾಜ ಹೂಗಾರ ವಂದಿಸಿದರು.