Advertisement

ಹನಗೋಡು ಅಣೆಕಟ್ಟೆ ನಾಲೆಗೆ ಕಾಯಕಲ್ಪ ಅಗತ್ಯ

09:37 PM Sep 15, 2019 | Lakshmi GovindaRaju |

ಹುಣಸೂರು: ಕಳೆದ ತಿಂಗಳು ಲಕ್ಷ್ಮಣತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಇತ್ತೀಚೆಗಷ್ಟೆ ಆಧುನೀಕರಣಗೊಳಿಸಿದ್ದ ತಾಲೂಕಿನ ಹನಗೋಡು ಅಣೆಕಟ್ಟೆ ಮುಖ್ಯನಾಲಾ ಏರಿ ಹಾಗೂ ಕಾಂಕ್ರೀಟ್‌ ತಡೆಗೋಡೆ ಬಹುತೇಕ ಕಡೆ ಹಾನಿಯಾಗಿದ್ದು, ಅಪಾಯ ಆಹ್ವಾನಿಸುತ್ತಿದೆ.

Advertisement

ಮತ್ತೂಮ್ಮೆ ಪ್ರವಾಹ ಎದುರಾದರೆ ಸುತ್ತಮುತ್ತಲ ಗ್ರಾಮಗಳ ಲಕ್ಷಾಂತರ ಜಮೀನುಗಳು, ಸಹಸ್ರಾರು ಮನೆಗಳು ಜಲಾವೃತವಾಗುವ ಸಾಧ್ಯತೆಯಿದೆ. ಹೀಗಾಗಲೇ ರೈತರು ಸಹಸ್ರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತ, ತಂಬಾಕು, ಶುಂಟಿ, ಬಾಳೆ, ಜೋಳದ ಬೆಳೆಗಳು ಕೊಚ್ಚಿ ಹೋಗಿದೆ. ಹೀಗಾಗಿ ತ್ವರಿತವಾಗಿ ನಾಲೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮುಂದೆ ಎದುರಾಗುವ ತೊಂದರೆಯನ್ನು ತಪ್ಪಿಸಬೇಕಾಗಿದೆ.

ಸಂಪರ್ಕ ಕಾಲುವೆಗಳಿಗೂ ಹಾನಿ: ನಾಲೆ ಹಾನಿಯಾಗಿ ಸಮರ್ಪಕ ನೀರಿನ ಹರಿವಿಗೆ ಹಾಗೂ ಏರಿ ಮೇಲಿನ ರಸ್ತೆಗಳಲ್ಲಿ ಓಡಾಡಲು ರೈತರು ಮತ್ತು ಸಾರ್ವಜನಿಕರಿಗೆ ತೊಡಕುಂಟಾಗಿದೆ. ಹನಗೋಡು ಅಣೆಕಟ್ಟೆಯ ಆಧುನೀಕರಣದೊಂದಿಗೆ ಮುಖ್ಯ ಕಾಲುವೆ ಹಾಗೂ ಕಿರುಗಾಲುವೆಗಳನ್ನು ಸಹ ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಕೊಡಗಿನ ಕುಟ್ಟ, ಇರ್ಪು ಆಸುಪಾಸಿನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಭಾರೀ ಪ್ರವಾಹದಿಂದ ನೀರು ಹನಗೋಡು ಮುಖ್ಯ ಕಾಲುವೆ ಸೇರಿದಂತೆ ಸಂಪರ್ಕ ಕಾಲುವೆಗಳು ಸಹ ಹಾನಿಯಾಗಿವೆ. ಇದೀಗ ತಕ್ಷಣಕ್ಕೆ ಮುಖ್ಯ ಕಾಲುವೆಯ ಹಾನಿಗೊಳಗಾಗಿರುವ ನಾಲೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದ್ದು, ಕಾಲುವೆಯಲ್ಲಿ ನೀರಿನ ಹರಿವನ್ನು ಕಡಿತಗೊಳಿಸಲಾಗಿದೆ.

ಅಣೆಕಟ್ಟೆ ಮೇಲೆ 50 ಸಾವಿರ ಕ್ಯೂಸೆಕ್‌ ನೀರು: ಹನಗೋಡು ಅಣೆಕಟ್ಟೆ ಮೇಲೆ 1961ರಲ್ಲಿ 31 ಸಾವಿರ ಕ್ಯೂಸೆಕ್‌ ನೀರು ಹರಿದು ಅಣೆಕಟ್ಟೆಯ ಏರಿಯೇ ಒಡೆದು ಹೋಗಿ ಸಾಕಷ್ಟು ಹಾನಿ ಉಂಟು ಮಾಡಿತ್ತು. ಈ ಬಾರಿ 49 ಸಾವಿರ ಕ್ಯೂಸೆಕ್‌ ನೀರು ಹರಿದಿದ್ದು, ಭಾರೀ ಪ್ರಮಾಣದ ಅನಾಹುತ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ನದಿ ಹಾಗೂ ಮುಖ್ಯ ಕಾಲುವೆಯ ನೀರು ಒಂದಾಗಿ ಹರಿದಿದ್ದರಿಂದ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ಭಾಗದಲ್ಲಿ 10ಕ್ಕೂ ಹೆಚ್ಚು ಸೇತುವೆ ಹಾಗೂ 70-80 ಕಿ.ಮೀ. ರಸ್ತೆ ಹಾನಿಯಾಗಿದೆ.

ನಾಲೆಯ ತಡೆಗೋಡೆ-ಏರಿಗೆ ಹಾನಿ: ಪ್ರವಾಹ ಹೊಸದಾಗಿ ನಿರ್ಮಾಗೊಂಡಿದ್ದ ಏರಿಯ ಮಣ್ಣನ್ನೇ ಹೊತ್ತೂಯ್ದಿದ್ದರೆ, ಕಾಲುವೆಯ ಸಿಮೆಂಟ್‌ ತಡೆಗೋಡೆಯನ್ನು ಕಿತ್ತು ಹಾಕಿದೆ. ಇನ್ನು ಏರಿ ಮೇಲಿನ ಮಣ್ಣು ಕೊಚ್ಚಿ ಹೋಗಿದ್ದರಿಂದ ಅಲ್ಲಲ್ಲಿ ಹಳ್ಳಗಳು ಸೃಷ್ಟಿಯಾಗಿವೆ. ಇನ್ನೂ ಕೆಸರು ಇದ್ದು, ಏರಿ ಮೇಲೆ ಸಂಚರಿಸಲಾಗುತ್ತಿಲ್ಲ. ಇನ್ನು ಹನುಮಂತಪುರ, ಉದ್ದೂರು ನಾಲೆಯೂ ಸಹ ಅಲ್ಲಲ್ಲಿ ಹಾನಿಗೊಳಗಾಗಿದ್ದು, ರೈತರು ತಮ್ಮ ಜಮೀನಿಗೆ ತೆರಳಲು ಆಗದೆ ಪರಿತಪಿಸುತ್ತಿದ್ದಾರೆ.

Advertisement

156 ಕೋಟಿ ವೆಚ್ಚದ ಆಧುನೀಕರಣ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಚ್‌.ಪಿ.ಮಂಜುನಾಥ್‌ ಶಾಸಕರಾಗಿದ್ದ ವೇಳೆ ಹನಗೋಡು ಅಣೆಕಟ್ಟೆ ಹಾಗೂ ಮುಖ್ಯ ನಾಲೆ ಸೇರಿದಂತೆ ಎಲ್ಲಾ ನಾಲೆಗಳ ಆಧುನೀಕರಣಕ್ಕೆ 156 ಕೋಟಿ ರೂ. ಮಂಜೂರಾಗಿತ್ತು. ಶೇ.90ರಷ್ಟ ಕಾಮಗಾರಿ ಪೂರ್ಣಗೊಂಡಿದೆ. ಎಲ್ಲಾ ಕಾಮಗಾರಿಗಳು ಉತ್ತಮವಾಗಿ ನಡೆದಿತ್ತಾದರೂ ಪ್ರವಾಹದ ಬೀಕರತೆಗೆ ಏರಿ ಹಾಗೂ ನಾಲೆಗೆ ಹಾಕಿದ್ದ ಕಾಂಕ್ರೀಟ್‌ ತಡೆಗೋಡೆ ಕಿತ್ತು ಹೋಗಿದೆ. ಇದೀಗ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿದ್ದು, ನಾಲೆ ಆಧುನೀಕರಣಗೊಂಡಿದ್ದರೂ ಪ್ರವಾಹದ ಹಾನಿ, ಮತ್ತೆ ಬೀಳಬಹುದಾದ ಮಳೆಗೆ ಮತ್ತೆ ಹಾನಿಯಾಗುವುದೆಂಬ ಆತಂಕ ಎದುರಾಗಿದೆ.

42 ಕೆರೆಗಳು ಪೂರ್ಣ ಭರ್ತಿ: ಹನಗೋಡು ಅಣೆಕಟ್ಟೆ ವ್ಯಾಪ್ತಿಯ 42 ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಇನ್ನು ಹಾರಂಗಿ ಬಲದಂಡೆ ನಾಲೆಯಿಂದ 20ಕ್ಕೂ ಹೆಚ್ಚು ಕೆರೆಗಳಿಗೆ ಶೇ.70 ಹಾಗೂ ಹೈರಿಗೆ ಕೆರೆಗೆ ಶೇ.80 (19 ಅಡಿ) ನೀರು ತುಂಬಿಸಲಾಗಿದೆ.

ಮತ್ತೆ ಪ್ರವಾಹ ಬಂದ್ರೆ ಭತ್ತ ಮುಳುಗಡೆ: ಹನಗೋಡು ಅಣೆಕಟ್ಟೆ ಮುಖ್ಯ ನಾಲೆ ಒಡೆದರೆ ಈ ಭಾಗದ ಗ್ರಾಮಗಳು ನೆರೆಗೆ ಸಿಲುಕಲಿವೆ. ಹೆಗ್ಗಂದೂರು, ಕಾಮಗೌಡನಹಳ್ಳಿ, ಬೀರನಹಳ್ಳಿ, ಒಡ್ಡಂಬಾಳು, ಹರಳಹಳ್ಳಿ, ಹಳೇಪೆಂಜಹಳ್ಳಿ, ಹೊಸ ಪೆಂಜಹಳ್ಳಿ ಗ್ರಾಮಗಳವರು ಈಗಷ್ಟೆ ಭತ್ತ ನಾಟಿ ಮಾಡಿದ್ದು, ಎಲ್ಲವೂ ಕೊಚ್ಚಿ ಹೋಗಲಿದೆ. ಪ್ರವಾಹದಿಂದ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಇದೀಗ ಹೊಸದಾಗಿ ನಾಟಿ ಮಾಡಿರುವುದು ನಾಲೆ ನೀರಿನಲ್ಲಿ ಕೊಚ್ಚಿ ಹೋದರೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಜತೆಗೆ ನೂರಾರು ಮನೆಗಳ ಜಲಾವೃತವಾಗಲಿವೆ.

ಗುಣಮಟ್ಟದಲ್ಲಿ ನಿರ್ಮಿಸಿದ್ದ ನಾಲೆಯ ತಡೆಗೋಡೆ, ಏರಿ ಮಣ್ಣನ್ನೇ ಕೊಚ್ಚಿಹಾಕಿ ಏರಿ ಮೇಲೆ ಓಡಾಡದಂತಾಗಿದೆ. ಜಮೀನು ಬೆಳೆ ಸಮೇತ ಕೊಚ್ಚಿಹೋಗಿದೆ. ಹಿನ್ನೀರಿನಿಂದ ಅಣೆಕಟ್ಟೆ ಪಾತ್ರದ ರೈತರಿಗೂ ಅಪಾಯ ಜೊತೆಗೆ ಅಣೆಕಟ್ಟೆ ಏರಿಯೂ ಅಪಾಯದಲ್ಲಿದೆ. ಸರ್ಕಾರ ತ್ವರಿತಗತಿಯಲ್ಲಿ ನಾಲೆ ದುರಸ್ತಿ ಮಾಡಬೇಕಿದೆ.
-ದಾ.ರಾ.ಮಹೇಶ್‌, ರೈತ, ದಾಸನಪುರ

ಪ್ರವಾಹದಿಂದಾಗಿ ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆಗೆ ಅನೇಕ ಕಡೆ ಹಾನಿಯಾಗಿದೆ. ಅಣೆಕಟ್ಟೆ ಏರಿಯೂ ಅಪಾಯದಲ್ಲಿದೆ. ಈಗಾಗಲೇ ಹಾರಂಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಶಂಕರೇಗೌಡ, ಸೂಪರಿಡೆಂಟ್‌ ಎಂಜಿನಿಯರ್‌ ಮಂಜುನಾಥ್‌ ಸ್ಥಳ ಪರಿಶೀಲನೆ ನಡೆಸಿದ್ದು, ಹಾನಿ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ವರದಿ ನೀಡಲಾಗಿದೆ.
-ಶಶಿಕುಮಾರ್‌, ಕಾರ್ಯಪಾಲಕ ಅಭಿಯಂತರ, ಹಾರಂಗಿ

Advertisement

Udayavani is now on Telegram. Click here to join our channel and stay updated with the latest news.

Next