Advertisement

ಹಂಪಿ ಉತ್ಸವ ಇನ್ನಷ್ಟು ವೈಭವಯುತ ಆಚರಣೆ

09:35 AM Nov 04, 2017 | Team Udayavani |

ಬಸವಣ್ಣ ವೇದಿಕೆ (ಎಂ.ಪಿ.ಪ್ರಕಾಶ), ಹಂಪಿ: “ಹಂಪಿಯನ್ನು ಮಹತ್ವದ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಗೊಳಿಸಲು ಹಾಗೂ ಹಂಪಿ ಉತ್ಸವವನ್ನು ಇನ್ನಷ್ಟು ವೈಭವಯುತವಾಗಿ ಆಚರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಹಂಪಿ ಉತ್ಸವ-2017ಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, “ಪ್ರವಾಸೋದ್ಯಮ ಬೆಳವಣಿಗೆಗಾಗಿ ಪೂರಕ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಹಂಪಿ ಈಗಾಗಲೇ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. ದೇಶ-ವಿದೇಶಗಳಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಪೂರಕ ಕ್ರಮ ಕೈಗೊಳ್ಳಲಾಗುವುದು’ ಎಂದರು. ಯಾವುದೇ ಉತ್ಸವ ಯಶಸ್ವಿಯಾಗಲು ಅದರಲ್ಲಿಜನರ ಪಾಲ್ಗೊಳ್ಳುವಿಕೆ ಅತಿ ಅವಶ್ಯ. ಹಂಪಿ ಉತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ. ನೂರಾರು ಕಲಾವಿದರು ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಗತಕಾಲದ ಸಿರಿವಂತ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆಯನ್ನು
ಉಳಿಸಿಕೊಳ್ಳುವುದು ಮುಖ್ಯ ಎಂದರು.

ಎಂ.ಪಿ. ಪ್ರಕಾಶ್‌ ಕಾರಣ: ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತಿ ಗಳಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಎಂ.ಪಿ.ಪ್ರಕಾಶ್‌ ಮುಖ್ಯಮಂತ್ರಿಗೆ ಒತ್ತಾಯಿಸಿ ಅನುದಾನ ಪಡೆದು ಆರಂಭಿಸಿದ ಉತ್ಸವ ಪ್ರಸ್ತುತ ಮಹೋತ್ಸವವಾಗಿ ಬೆಳೆದಿದೆ. ಹಂಪಿ ಉತ್ಸವ ಈ ಮಟ್ಟಕ್ಕೆ ಬೆಳೆಯಲು ಎಂ.ಪಿ.ಪ್ರಕಾಶ್‌ ಅವರೇ ಕಾರಣ. ಮೈಸೂರು ದಸರಾ ಆಚರಣೆ ವಿಜಯನಗರ ಅರಸರ ಬಳುವಳಿ. ವಿಜಯನಗರ ಅರಸರ ಆಡಳಿತ ಪತನಗೊಂಡ ನಂತರ ಮೈಸೂರು ಸಂಸ್ಥಾನದ ಅರಸರು ಮೈಸೂರಿನಲ್ಲಿ ದಸರಾ ಉತ್ಸವ ಆಚರಣೆ ಆರಂಭಿಸಿದರು. ಮೈಸೂರಿನಲ್ಲಿ ದಸರಾ ಆಚರಣೆ ಆರಂಭಗೊಂಡು 407 ವರ್ಷಗಳು ಗತಿಸಿವೆ. ರಾಜ್ಯವನ್ನು ಆಳಿದ ಚಾಲುಕ್ಯರು, ಗಂಗರು, ಕದಂಬರು, ಹೊಯ್ಸಳರು, ಚಾಲುಕ್ಯರಿಗಿಂತ ವಿಜಯ ನಗರ ಸಂಸ್ಥಾನ ಮೇಲುಸ್ತರದಲ್ಲಿ ನಿಲ್ಲು ತ್ತದೆ. ವಿಜಯನಗರ ಸಂಸ್ಥಾನವನ್ನು ಆರಂಭಿಸಿದ ಹಕ್ಕ-ಬುಕ್ಕರು ಹಾಗೂ ಅವರಿಗೆ ಮಾರ್ಗದರ್ಶನ
ಮಾಡಿದ ವಿದ್ಯಾರಣ್ಯರನ್ನು ಸ್ಮರಿಸಬೇಕೆಂದರು.

ಮತಗಳಿಕೆಗೆ ಇತಿಹಾಸ ತಿರುಚಬೇಡಿ: ಇತಿಹಾಸವನ್ನು ತಿರುಚುವುದು ಮಹಾಪರಾಧ. ಯಾರೇ ಆಗಿರಲಿ  ಇತಿಹಾಸವನ್ನು ತಿರುಚುವ ನೀಚ ಕೆಲಸ ಮಾಡಬಾರದು. ಕೆಲವರು ಮತ ಗಳಿಕೆಗಾಗಿ ಇತಿಹಾಸ ತಿರುಚುತ್ತಾರೆ. ಇದು ಇತಿಹಾಸಕ್ಕೆ ಮಾಡಿದ ದ್ರೋಹ. ಇತಿಹಾಸ ಗೊತ್ತಿದ್ದವರು ಮಾತ್ರ ಭವಿಷ್ಯ ರೂಪಿಸಬಲ್ಲರು ಎಂಬುದನ್ನು ಅರಿತುಕೊಳ್ಳಬೇಕು. ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅವರಿಗೆ ಇತಿಹಾಸದ ಭವ್ಯ ಪರಂಪರೆಯನ್ನು ಹೇಳಿಕೊಡಬೇಕು ಎಂದರು.

ವಿಜಯನಗರದ ಅರಸರಂತೆ ಟಿಪ್ಪು ಕೂಡ ಮಾನವೀಯತೆ ಮೆರೆದ ಮಹಾನ್‌ ವ್ಯಕ್ತಿ. ಕೆಲವರು ಅನಗತ್ಯವಾಗಿ ಟಿಪ್ಪು ಸುಲ್ತಾನ್‌ನನ್ನು ವಿರೋಧಿಸುತ್ತಾರೆ, ಟಿಪ್ಪು ಜಯಂತಿ ಅಚರಣೆಗೆ ಅಪಸ್ವರ ಎತ್ತುತ್ತಾರೆ. 3ನೇ ಮೈಸೂರು ಯುದ್ಧದಲ್ಲಿ ತನ್ನ ಇಬ್ಬರು ಮಕ್ಕಳನ್ನು ಅಡ ಇಟ್ಟ ವ್ಯಕ್ತಿ ಟಿಪ್ಪು. ದೇಶದ ಇತಿಹಾಸದಲ್ಲಿ ಮಕ್ಕಳನ್ನು ಅಡ ಇಟ್ಟ ಇನ್ನೊಬ್ಬ ರಾಜರು ಸಿಗೋದಿಲ್ಲ. ನಮ್ಮ ಜನರು ಕೈ ಕೊಡದಿದ್ದರೆ ಟಿಪ್ಪುನನ್ನು ಸೋಲಿಸಲು ಬ್ರಿಟಿಷರಿಗೆ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತೆ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿದರು ಎಂಬುದನ್ನು ಅರಿಯಬೇಕು. ಟಿಪ್ಪು ಮೈಸೂರು ಸಂಸ್ಥಾನ ಉಳಿಸಲು ಹೋರಾಡಿದರು. ಕೃಷ್ಣದೇವರಾಯ, ಟಿಪ್ಪು ಸುಲ್ತಾನ್‌ರಂಥ ಧರ್ಮ ಸಹಿಷ್ಣು, ಮಾನವತಾವಾದಿ ರಾಜರನ್ನು ಹೊಂದಿದ ಸಿರಿವಂತ ಪರಂಪರೆಯ ನಾಡಿನ ಮಕ್ಕಳು ಎಂಬುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು ಎಂದರು.

Advertisement

ಸಚಿವರಾದ ಸಂತೋಷ ಲಾಡ್‌, ಉಮಾಶ್ರೀ, ರಮಾನಾಥ ರೈ, ಶಾಸಕರಾದ ಆನಂದ ಸಿಂಗ್‌, ಈ.ತುಕಾರಾಂ, ಎನ್‌.ವೈ.ಗೋಪಾಲಕೃಷ್ಣ, ಬಿ.ಎಂ. ನಾಗರಾಜ, ಬಿ.ಎಂ.ನಾಗರಾಜ, ಅಲ್ಲಂ ವೀರಭದ್ರಪ್ಪ ಇದ್ದರು. 

ನಾನು ಅಹಿಂದ ಪರವಾಗಿದ್ದೇನೆ. ಅಷ್ಟೇ ಅಲ್ಲ, ನಾನು ಎಲ್ಲ ಸಮಾಜದ ಬಡವರ ಅಭಿವೃದ್ಧಿಗೂ ಶ್ರಮಿಸುತ್ತಿದ್ದೇನೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ 6.5 ಕೋಟಿ ಕನ್ನಡಿಗರಲ್ಲಿ ಶೇ.90ರಷ್ಟು ಜನರು ಒಂದಿಲ್ಲೊಂದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿದ್ದಾರೆ. ನಾವು ಯಾವುದೇ ಪಕ್ಷ ಮುಕ್ತ ಕರ್ನಾಟಕ ಮಾಡುವುದಿಲ್ಲ. ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ. ಅಪೌಷ್ಟಿಕತೆ ಮುಕ್ತ ಕರ್ನಾಟಕ ಮಾಡುತ್ತೇವೆ. ಋಣ ಮುಕ್ತ ಕರ್ನಾಟಕ ಮಾಡುತ್ತೇವೆ.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next