Advertisement
ಒಂದು ಕಾಲದಲ್ಲಿ ಸ್ಕೂಟರ್, ಮಧ್ಯಮ ವರ್ಗದ “ಬೇಕು’ಗಳಲ್ಲೊಂದಾಗಿತ್ತು. ಆಗೆಲ್ಲಾ ಎಲ್ಲರದ್ದೂ ಆರಕ್ಕೇರದ, ಮೂರಕ್ಕಿಳಿಯದ ಸಂಸಾರವೇ. ತಿಂಗಳ ಶುರುವಿನಲ್ಲಿ ಎಲ್ಲವೂ ಇದೆಯೆಂಬ ಖುಷಿ, ತಿಂಗಳ ಅಂತ್ಯದಲ್ಲಿ ಎಲ್ಲವೂ ಕರಗಿತಲ್ಲ ಎಂಬ ದುಃಖ. ಕುಟುಂಬದ ಸುಖ-ದುಃಖದಲ್ಲಿ ಸದಾ ಸಾಥ್ ಕೊಡುತ್ತಿದ್ದುದು ಎರಡು ಚಕ್ರದ ಬಂಟ!
Related Articles
ನನ್ನ ಅಪ್ಪಯ್ಯನ ಹತ್ತಿರ ಲ್ಯಾಂಬ್ರೆಟಾ ಸ್ಕೂಟರ್ ಇತ್ತು. ನೀಲಿ, ಬಿಳಿ ಬಣ್ಣದ್ದು. ಯಾವಾಗ ಮನೆಗೆ ಬಂತೆಂದು ನೆನಪಾಗುತ್ತಿಲ್ಲ. ಆದರೆ, ತಮ್ಮ ಮುಂದೆ ನಿಲ್ಲಲು ಶುರು ಮಾಡಿದಾಗ ನನಗೆ ಹಿಂದಕ್ಕೆ ಕೂರಲು ಹಿಂಬಡ್ತಿ ಸಿಕ್ಕಿತು. ನಾನು, ಅಪ್ಪ-ಅಮ್ಮನ ಮಧ್ಯೆ ಕೂರುತ್ತಿ¨ªೆ ಎನ್ನುವುದಕ್ಕಿಂತ ನಿಲ್ಲುತ್ತಿ¨ªೆ ಎಂದರೇ ಸರಿ. ಮೈಗೆ ಅಂಟಿಕೊಂಡಂತೆ ಕೂತ ಅಪ್ಪ, ಅಮ್ಮನ ಸಾನ್ನಿಧ್ಯ ಸ್ಕೂಟರಿನ ಸವಾರಿಯಷ್ಟೇ ಪ್ರಿಯವಾಗಿತ್ತು.
Advertisement
ಸ್ಕೂಟರ್ ನಮ್ಮ ಮನೆಯ ಸದಸ್ಯರಲ್ಲೇ ಒಂದಾಗಿತ್ತು. ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿತ್ತು. ನಾನು ಮಾವಿನ ಮರದಿಂದ ಬಿದ್ದು ಕಾಲು ಪೆಟ್ಟು ಮಾಡಿಕೊಂಡಾಗ ಆಸ್ಪತ್ರೆಗೆ ಹೊದದ್ದು ಸ್ಕೂಟರಿನಲ್ಲೇ. ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿ, ಸ್ಕೂಟರಿನಲ್ಲಿ ಹೋಗಿಯೇ ಸಿಹಿ ಖೂದಿಸಿದ್ದು! ಹಬ್ಬಗಳು ಬಂತೆಂದರೆ ಅಜ್ಜಿ ಮನೆಗೆ, ದೇವಸ್ಥಾನಗಳಿಗೆ, ಅಕ್ಕಪಕ್ಕದ ಊರಿನಲ್ಲಿ ನಡೆಯುವ ಮದುವೆ, ಮುಂಜಿಗಳಿಗೆ ನಮ್ಮ ಕುಟುಂಬದ ಪ್ರಯಾಣ ಸ್ಕೂಟರಿನಲ್ಲೇ. “ಕುಟುಂಬ ಸಮೇತ’ ಅಂದರೆ, ಅದರಲ್ಲಿ ಸ್ಕೂಟರ್ ಕೂಡಾ ಬರುತ್ತಿತ್ತು.
ಕಾರು ಬಂತು, ಖುಷಿ ಹೋಯ್ತುಈಗ ಬಹುತೇಕ ಎಲ್ಲರ ಬಳಿಯೂ ಕಾರ್ ಇದೆ. ಮನೆ ಮಂದಿಯೆಲ್ಲ ಆರಾಮಾಗಿ ಕುಳಿತು, ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ, ಕಾರಿನಲ್ಲಿ ಹೋಗುವುದು ಸ್ಕೂಟರಿನಲ್ಲಿ ಪ್ರಯಾಣ ಮಾಡಿದಷ್ಟು ಚಂದ ಅಂತ ಅನ್ನಿಸುವುದೇ ಇಲ್ಲ. ಅಂಟಿಕೊಂಡು ಕೂರಬೇಕಾದ ಸ್ಕೂಟರ್ ಕೊಡುತ್ತಿದ್ದ ಅಪ್ಯಾಯಮಾನತೆ, ಬಿಡುಬೀಸಾಗಿ ಕೂರಬಲ್ಲ ಕಾರು ಕೊಡುವುದಿಲ್ಲ. ನನ್ನ ಮದುವೆ ನಿಶ್ಚಯವಾದಾಗ ಮನೆಗೆ ಹಸಿರು ಬಣ್ಣದ ಕಾರು ಬಂತು. ಆದರೂ, ಆಪತ್ಕಾಲಕ್ಕೆ ಸಹಾಯಕ್ಕೆ ಬಂದದ್ದು ಸ್ಕೂಟರೇ. ತುಂಬಿದ ಬಸುರಿಯಾದ ನನಗೆ ರಾತ್ರೋ ರಾತ್ರಿ ಹೊಟ್ಟೆ ನೋವು ಕಾಣಿಸಿದಾಗ, ಕಾರು ಗ್ಯಾರೇಜಿನಲ್ಲಿ ಮುನಿಸಿಕೊಂಡು ಕೂತಿತ್ತು. ಆಸ್ಪತ್ರೆಗೆ ಸ್ಕೂಟರಿನಲ್ಲೇ ಪ್ರಯಾಣ. ಹಾಗಾಗಿಯೇ ಇರಬೇಕು, ನನ್ನ ಮಗನಿಗೂ ಅಜ್ಜನ ಸ್ಕೂಟರೇ ಅಚ್ಚುಮೆಚ್ಚು. ರಜೆಯಲ್ಲಿ ಊರಿಗೆ ಬಂದಾಗಲೆಲ್ಲಾ ಅಜ್ಜ, ಮೊಮ್ಮಗ ಮೂರು ಹೊತ್ತೂ ಸ್ಕೂಟರಿನಲ್ಲಿ ಕೂತ್ತಿದ್ದರು. ಉರಿ ಬೇಸಿಗೆಯ ದಿನಗಳು, ಬೆಳಗ್ಗೆ ಅಪ್ಪಯ್ಯನ ಫೋನ್ ಬಂತು, “ಸ್ಕೂಟರ್ ಬಿಡಲು ಕಷ್ಟವಾಗುತ್ತಿದೆ. ಯಾರೋ ಕೆಲಸದವರಿಗೆ ಕೊಟ್ಟುಬಿಟ್ಟೆ’ ಅಂದಾಗ, ಮನಸ್ಸಿಗೆ ಕಸಿವಿಸಿ. ಪ್ರೀತಿಪಾತ್ರರನ್ನು ಕಳೆದುಕೊಂಡ ಅನುಭವ. ಸ್ಕೂಟರೂ ಬದಲಾಗಿದೆ
ಬದಲಾವಣೆ ಜಗದ ನಿಯಮ ಅನ್ನುವುದು ಸ್ಕೂಟರ್‌ಗೂ ಅನ್ವಯ. ಇತ್ತೀಚೆಗೆ, ಮಣಭಾರದ ಸ್ಕೂಟರ್ ಹಗುರವಾಗಿದೆ. ಆಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿದೆ. ಅದನ್ನು ಚಲಾಯಿಸುವವರೂ ಹೆಚ್ಚಾಗಿ ಮಹಿಳೆಯರೇ. ನಾವಿಬ್ಬರು, ನಮಗಿಬ್ಬರು ಎಂದು ಸಂದೇಶ ಸಾರುತ್ತಿದ್ದ ಸ್ಕೂಟರ್ ಈಗ “ನಾನು ಮತ್ತು ನನ್ನ ಸ್ವಾತಂತ್ರ್ಯ’ ಎನ್ನುತ್ತಿದೆ. ಮನೆಗೊಂದರಂತೆ ಕಾರು ಕೂಡಾ ಸಾಮಾನ್ಯ. ಸುಖ ಪ್ರಯಾಣಕ್ಕೆ ಸಹಕರಿಸುವ ಕಾರುಗಳು, ಸುಖ ಸಂಸಾರವನ್ನು ದೂರ ಸರಿಸುತ್ತಿವೆ ಅಂತ ನೋವೂ ಕಾಡುತ್ತದೆ. ನೀವೇನಂತೀರಾ? -ಗೀತಾ ಕುಂದಾಪುರ