Advertisement

ಹುಡುಗರೂ ಅಡುಗೆ ಮಾಡಬಹುದಲ್ಲ !

09:35 PM Apr 11, 2019 | mahesh |

ಪ್ರತಿ ದಿವಸ ಪ್ರಯೋಗಶೀಲತೆಗೆ ಒಳಗಾಗುವಂಥ ಸೃಜನಶೀಲ ಕಲೆಯಾದ ಅಡುಗೆಯನ್ನು ನಾವು ಕಲೆಯೆಂದು ಗೌರವಿಸದೆ ಅದನ್ನು ಕೀಳರಿಮೆಗೊಳಪಡಿಸುತ್ತೇವೆ. ಹುಡುಗಿಗೆ ಅಡುಗೆ ಕಲಿಸಬೇಕು, ಯಾಕೆಂದರೆ, ಅವಳಿಗೆ ಮದುವೆ ಮಾಡಬೇಕು. ಇಂದಿನ ಹುಡುಗಿಯರಿಗೆ ಅಡುಗೆ ಮಾಡಲು ಬರುವು ದಿಲ್ಲ ಎಂದು ಅದೊಂದು ಅನರ್ಹತೆ ಎಂಬಂತೆ ಹೇಳುತ್ತೇವೆ. ಯಾರೊಬ್ಬರೂ ಹುಡುಗರಿಗೆ ಅಡುಗೆ ಮಾಡಲು ಯಾಕೆ ಬರುವುದಿಲ್ಲ ಎಂದು ಕೇಳುವುದಿಲ್ಲ…

Advertisement

ನನ್ನೊಬ್ಬ ಇಟಾಲಿಯನ್‌ ಗೆಳೆಯ, “ನಿಮ್ಮಲ್ಲಿ ಮಕ್ಕಳಿಗೆ ಮೊದಲ ಬಾರಿಗೆ ಅನ್ನಪ್ರಾಶನ ಮಾಡುವ ಸಂಪ್ರದಾಯವಿದೆಯಲ್ಲವೆ? ಹಾಗಿದ್ದರೆ, ನಿಮ್ಮ ಮಗಳಿಗೆ ಮೊದಲ ಅನ್ನವನ್ನು ನಾನು ತಯಾರು ಮಾಡಿಕೊಡಲೇ?’ ಎಂದು ಕೇಳಿದರು. ಹಾಗೆ ಕೇಳಿದ ಆ ನನ್ನ ಹಿರಿಯ ಸ್ನೇಹಿತರ ವಯಸ್ಸು 78. ಇಲ್ಲಿ ನಮ್ಮ ಸಂಪ್ರದಾಯದ ಅಡುಗೆಯ ಹಾಗೆ, ಅಲ್ಲಿ ಪಾಸ್ತಾ ಅವರ ಸಂಪ್ರದಾಯದ ಅಡುಗೆಯಲ್ಲೊಂದು. ಅಂದು ಅವರು ಬೆಳಗ್ಗೆ 6 ಗಂಟೆಗೇ ಅಡುಗೆ ಮಾಡಲು ಪ್ರಾರಂಭಿಸಿದರು. ಪಾಸ್ತಾವನ್ನು ಅವರ ಸಂಪ್ರದಾಯದಂತೆ ತಯಾರಿಸಿದರು. ಹಾಗೆ ತುಂಬಾ ಶ್ರದ್ಧೆಯಿಂದ ತಯಾರಿಸಿದ ಆ ಅಡುಗೆಯನ್ನು ಅವರು ಸಂಜೆ 6 ಗಂಟೆಯ ಹೊತ್ತಿಗೆ ಬೆಳ್ಳಿ ಚಮಚದಲ್ಲಿ ಮೊದಲ ಬಾರಿಗೆ ನನ್ನ ಮಗಳ ಬಾಯಿಗೆ ಹಾಕಿದರು. ನನ್ನ ಇಬ್ಬರು ಮಕ್ಕಳಿಗೂ ತಾವೇ ಅಡುಗೆ ಮಾಡಿ ಮೊದಲ ಬಾರಿಗೆ ಬಾಯಿಗೆ ಹಾಕಿದವರು ಅವರೇ.

ಅವರು ಹಾರ್ವರ್ಡ್‌ ವಿವಿಯ ನಿವೃತ್ತ ಪ್ರೊಫೆಸರ್‌. 65 ದೇಶಗಳನ್ನು ಸುತ್ತಿದವರು. ನಮಗೆ ಶಕ್ತಿ ಕೊಡುವಂಥ ಆಹಾರದ ವಿಷಯದಲ್ಲಿ ನಾವ್ಯಾಕೆ ಲಿಂಗ ತಾರತಮ್ಯ ಮಾಡಬೇಕು ಎಂದು ಅವರು ಕೇಳುತ್ತಾರೆ. ನಮ್ಮ ಮನೆಯಲ್ಲಿ ನಾವು ಒಟ್ಟು ಏಳು ಹೆಣ್ಣುಮಕ್ಕಳು ಮತ್ತು ನಾನೊಬ್ಬನೇ ಹುಡುಗ. ನಮ್ಮ ಅಜ್ಜಿ ಮೊದಲು ನನಗೆ ಅಡುಗೆ ಕಲಿಸಿದರು. ಅವರು ಹೇಳುತ್ತಾರೆ- “ಅಡುಗೆ ಎಂಬ ಸಂಪ್ರದಾಯ ಉಳಿಯಬೇಕಾದರೆ ಅದನ್ನು ಗಂಡು ಮಕ್ಕಳಿಗೆ ಕಲಿಸಬೇಕು’ ಎಂದು. ಹಾಗೆ ಕಲಿತ ಅವರು ಮನೆಯಲ್ಲೇ ಇದ್ದರೆ ವಾರದಲ್ಲಿ ಮೂರು ದಿನ ಅಡುಗೆಯನ್ನು ಅವರೇ ಮಾಡುತ್ತಾರೆ. ನಮ್ಮ ದೇಶದಲ್ಲಿ ಅಡುಗೆಯನ್ನು ಲಿಂಗಾಧಾರಿತ ಸಮಸ್ಯೆಯನ್ನಾಗಿ ಮಾಡುವುದರ ಕುರಿತು ಅವರಿಗೆ ಆಶ್ಚರ್ಯವಿದೆ. ಅವರು ನನ್ನ ಮಗನಿಗೆ ಅಡುಗೆ ಕಲಿಸಿದ್ದಲ್ಲದೆ, ಪಾಸ್ತಾ ಮತ್ತು ಬೇಳೆಯ ತೊವ್ವೆ , ನಮ್ಮ ಭಾರತೀಯ ಅಡುಗೆಯ ಮಹತ್ವವನ್ನೂ ತಿಳಿಸಿಕೊಟ್ಟಿದ್ದಾರೆ. ಅಂದರೆ, ನಾನಿಲ್ಲಿ ಹೇಳಹೊರಟಿರುವುದು ಅಡುಗೆಯೆಂಬುದು ಅವಜ್ಞೆಗೆ ಕಾರಣವಾಗಿರುವುದು ಈ ಮೂಲಕ, ಅಡುಗೆ ಮಾಡುವುದು ಮಹಿಳೆ ಮಾತ್ರ ಎಂದು ಮಹಿಳೆಯನ್ನೂ ಕೀಳಾಗಿ ಕಾಣುತ್ತಿರುವುದರ ಬಗ್ಗೆ. ಅಡುಗೆ ಒಂದು ಸೃಜನಶೀಲ ಕಲೆ. ನಾವು ಇತರ ಕಲಾ ಪ್ರಕಾರವನ್ನು ಮೆಚ್ಚುತ್ತೇವೆ. ಕ್ರಿಕೆಟ್‌ ಆಟಗಾರರಿಗೆ, ಗಾಯಕರು, ನೃತ್ಯ ಕಲಾವಿದರು ಮುಂತಾದ ಕಲಾಕಾರರಿಗೆ ಪ್ರಶಸ್ತಿ ಕೊಟ್ಟು ಗೌರವಿಸುತ್ತೇವೆ. ಆದರೆ, ಪ್ರತಿದಿವಸ ರುಚಿಕರವಾದ ಅಡುಗೆ ಮಾಡುವವರಿಗೆ ಯಾವುದಾದರೂ ಪ್ರಶಸ್ತಿ ಇದೆಯಾ? ಉಳಿದೆಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಭಾರತರತ್ನ, ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಹಾಗೆಯೇ ಅಡುಗೆ ಮಾಡುವ ಮಹಿಳೆಯರಿಗೂ ಯಾಕೆ ಪ್ರಶಸ್ತಿ ಕೊಡುವುದಿಲ್ಲ?

ಅಡುಗೆ, ಅರ್ಹತೆಯೇ?
ಪ್ರತಿದಿವಸ ಪ್ರಯೋಗಶೀಲತೆಗೆ ಒಳಗಾಗುವಂಥ ಸೃಜನಶೀಲ ಕಲೆಯಾದ ಅಡುಗೆಯನ್ನು ನಾವು ಕಲೆಯೆಂದು ಗೌರವಿಸದೆ ಅದನ್ನು ಕೀಳರಿಮೆಗೊಳಪಡಿಸುತ್ತೇವೆ. ನಿಜಕ್ಕೂ ಇದೊಂದು ಲಿಂಗಾಧಾರಿತ ಸಮಸ್ಯೆ. ಅದು ಎರಡು ವಿಚಾರದಲ್ಲಿ ಹುಡುಗಿಗೆ ಅಡುಗೆ ಕಲಿಸಬೇಕು, ಯಾಕೆಂದರೆ ಅವಳಿಗೆ ಮದುವೆ ಮಾಡಬೇಕು. ಇಂದಿನ ಹುಡುಗಿಯರಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಅದೊಂದು ಅನರ್ಹತೆ ಎಂಬಂತೆ ಹೇಳುತ್ತೇವೆ. ಯಾರೊಬ್ಬರೂ ಹುಡುಗರಿಗೆ ಅಡುಗೆ ಮಾಡಲು ಯಾಕೆ ಬರುವುದಿಲ್ಲ ಎಂದು ಹೇಳುವುದಿಲ್ಲ. ಅದಕ್ಕೇ ಮದುವೆ ಮಾಡುವಾಗ ಗಂಡಿನ ಕಡೆಯವರು, ಹುಡುಗಿಗೆ ಅಡುಗೆ ಮಾಡಲು ಬರುತ್ತದೆಯಾ? ಎಂದು ಕೇಳುತ್ತಾರೆ. ಅದೇ ಹುಡುಗನಿಗೆ ಯಾವ ಉದ್ಯೋಗ, ಸಂಬಳ ಇತ್ಯಾದಿಗಳ ಕುರಿತು ವಿಚಾರಿಸಲಾಗುತ್ತದೆ. ಅಂದರೆ, ತಾರತಮ್ಯದ ಧ್ವನಿಯ ಕುರಿತೇ ನನ್ನ ತಕರಾರಿದೆ.

ಅದೂ ಒಂದು ಆರ್ಟ್‌
ಅಡುಗೆ ಮನೆಯೆಂದರೆ ಮಹಿಳೆಯರ ಸ್ಥಾನ ಎಂಬಂತೆ ನೋಡು ತ್ತೇವೆ. ಅಂದರೆ ಮಹಿಳೆ ಮತ್ತು ಅಡುಗೆ ಎರಡನ್ನೂ ನಾವು ಕೇವಲವಾಗಿ ನೋಡುತ್ತೇವೆ. ಸ್ವಲ್ಪ ಯೋಚಿಸಿ, ಅಡುಗೆ ಮನೆಯೆಂಬುದು ಒಂದು ಶಕ್ತಿಯ ಕೇಂದ್ರ. ನಮ್ಮೆಲ್ಲರ ಶಕ್ತಿಯನ್ನು ತುಂಬಬೇಕಾದ ಆಹಾರ ತಯಾರಿಕಾ ಕೇಂದ್ರ. ಅಂದ ಮೇಲೆ ಅದು ಎಲ್ಲರ ಜವಾಬ್ದಾರಿ ಮತ್ತು ಎಲ್ಲರಿಗೂ ಸೇರಿದ್ದಾಗಬೇಕಿತ್ತಲ್ಲವೇ? ಅದನ್ನು ಮಹಿಳೆಗೆ ಮಾತ್ರ ಎಂದು ವರ್ಗೀಕರಿಸಿದ್ದು ಒಂದು ಕ್ರೌರ್ಯ. ಇಂತಿಷ್ಟು ಅವಧಿಯೊಳಗೆ ಅಡುಗೆ ಮಾಡಿ ಪೂರೈಸಬೇಕು ಎಂತಾದರೆ ಒಂದು ಅವಧಿಯೊಳಗೆ ಅದನ್ನು ರುಚಿಕಟ್ಟಾಗಿ ಪೂರೈಸಲು ಏನೆಲ್ಲ ಹಾಕಬೇಕೆಂದು ಯೋಚಿಸುತ್ತೇವೆ. ಒಬ್ಬ ಪೇಂಟರ್‌ ಹಾಗೆ ಪೇಂಟ್‌ ಮಾಡಲು ಒಂದು ಪೂರ್ವ ತಯಾರಿ ಬೇಕು, ಅದೇ ರೀತಿ ಅಡುಗೆಗೂ ಪೂರ್ವ ತಯಾರಿ ಬೇಕು. ಕತ್ತರಿಸುವುದು, ಬೇಯಿಸುವುದು, ರುಬ್ಬುವುದು ಇತ್ಯಾದಿ ಇತ್ಯಾದಿ. ಅಚ್ಚರಿಯೆನಿಸುವುದೆಂದರೆ, ಅಷ್ಟು ದೊಡ್ಡ ವಿಷಯವನ್ನು ಕೀಳರಿಮೆ ಎಂಬಂತೆ ನೋಡುವುದು; ಎಂಥ ವಿಪರ್ಯಾಸ!

Advertisement

ಚಿಕ್ಕಂದಿನಿಂದಲೂ ಹುಡುಗಿಯರಿಗೆ ಅಡುಗೆ, ಮನೆಗೆಲಸ ಕಲಿಸಿದ ಹಾಗೆ ಹುಡುಗರಿಗೂ ಕಲಿಸಬೇಕು. ಆಗ ಅವರಿಗೆ ಅಡುಗೆ ಕುರಿತು ಮತ್ತು ಸ್ತ್ರೀಯರ ಕುರಿತು ಗೌರವ ಮೂಡುತ್ತದೆ. ಮೊದಲೆಲ್ಲ ಅವಿಭಕ್ತ ಕುಟುಂಬ ಇತ್ತು. ಅಜ್ಜಿಯಿಂದ ಮಗಳಿಗೆ, ಮೊಮ್ಮಗಳಿಗೆ ಹೀಗೆ ಕಲಿಕೆ ಒಂದು ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತಿತ್ತು. ಆದರೆ, ಈಗ ಕಲಿಕೆಯ ರೀತಿ ಬದಲಾಗಿದೆ. ಹಾಗಾಗಿ, ಇಂದು ಅದನ್ನು ಉಳಿಸುವುದು ಎಂಬುದಕ್ಕಿಂತ ಅದನ್ನು ಪ್ರಚುರಪಡಿಸಿ ಎಂಬುದು ಸರಿಯಾದದ್ದು. ಆಗ ಹುಡುಗರೂ ಕಲಿಯುತ್ತಾರೆ. ಒಗ್ಗರಣೆಯ ಪರಿಮಳವನ್ನು ಅವರು ಹಾಕಿಯೇ ತಿಳಿಯುವಂತಾಗಬೇಕು. ಕೂತು ಪರಿಮಳ ಹೀರುವುದಲ್ಲ. ಹಾಗಾಗಿ, ಅಡುಗೆಯೆಂಬ ಸಂಸ್ಕೃತಿಯನ್ನು ಉಳಿಸುವ, ಪ್ರಚುರಪಡಿಸುವ ಜವಾಬ್ದಾರಿ ಎಲ್ಲರದ್ದೂ.

ಪುರುಷ ಅಡುಗೆ ಮಾಡಿದ್ರೆ, “ವ್ಹಾ’!
ಇನ್ನೊಂದು ಮಹತ್ವದ ವಿಷಯವೆಂದರೆ ಆಹಾರ ಸಂರಕ್ಷಣೆ, ಈ ಕುರಿತ ಸಂಪ್ರದಾಯ ಸಂರಕ್ಷಣೆ ಹಾಗೂ ಜವಾಬ್ದಾರಿಯನ್ನು ಮಹಿಳೆಯರ ಮೇಲೆ
ಹೊರಿಸಲಾಗಿದೆ. ಆಹಾರವನ್ನು ಉಳಿಸುವ, ಸಂಗ್ರಹಿಸುವ ಜವಾಬ್ದಾರಿಯನ್ನು ಪುರುಷರು ಯಾಕೆ ತೆಗೆದುಕೊಳ್ಳುವುದಿಲ್ಲ ಎಂಬುದು ಪ್ರಶ್ನೆ. ಅಂದರೆ ಅಡುಗೆ ವಿಷಯದಲ್ಲಿ ಸಮಾನತೆ ಇಲ್ಲ. ಮೊದಲು ಅಡುಗೆ ಮನೆಯಲ್ಲಿ ಸಮಾನತೆ ಬರಬೇಕು. ಇವತ್ತು ಪರಿಸ್ಥಿತಿ ಹೇಗಿದೆ ಎಂದರೆ, ಮಹಿಳೆ ಪ್ರತಿನಿತ್ಯ ಅಡುಗೆ ಮಾಡುತ್ತಾಳೆ. ಮನೆಯವರೆಲ್ಲರ ಆರೋಗ್ಯ ಕಾಪಾಡುವ ಈ ಅಡುಗೆಯನ್ನು ನಾವು ಕೀಳಾಗಿ ನೋಡುತ್ತೇವೆ. ಅದೇ ಪುರುಷನೊಬ್ಬ ಅಡುಗೆ ಮಾಡಿದರೆ ಇನ್ನಿಲ್ಲದಂತೆ ಗೌರವ ಕೊಡುತ್ತೇವೆ. ಅವರು ಅಡುಗೆ ಭಟ್ಟರು ಎಂದು ಗೌರವದಿಂದ ಹೇಳುತ್ತೇವೆ. ಎಲ್ಲಿಯವರೆಗೆ ಅಡುಗೆಯನ್ನು ನಾವು ಗೌರವಿಸುವುದಿಲ್ಲವೋ, ಅದೊಂದು ಕಲೆ ಎಂದು ಅರಿಯುವುದಿಲ್ಲವೋ, ಅಲ್ಲಿಯವರೆಗೆ ಅಡುಗೆಯನ್ನೂ , ಮಹಿಳೆಯನ್ನೂ ಗೌರವಿಸಿದಂತೆ ಆಗುವುದಿಲ್ಲ.

ಆ ದೇಶದಲ್ಲಿ ಗಂಡಸರೂ ಸೌಟು ಹಿಡೀತಾರೆ…
ರುವಾಂಡಾ, ಆಫ್ರಿಕಾದ ಒಂದು ಸಣ್ಣ ದೇಶ. ಅತಿ ಬಡದೇಶ. ಅಲ್ಲಿ ಅಡುಗೆ ಮಾಡುವಲ್ಲಿ ಗಂಡು-ಹೆಣ್ಣು ಇಬ್ಬರೂ ಸಮಾನರು. ಅಲ್ಲಿ ಅಡುಗೆ ಮಾಡುವುದು ಹುಡುಗರಿಗೆ ನಾಚಿಕೆ ವಿಷಯ ಅಲ್ಲ. ಹುಡುಗ ಯಾಕೆ ಶಾಲೆಗೆ ಹೋಗುತ್ತಾನೆ, ಹುಡುಗಿ ಅಡುಗೆ ಯಾಕೆ ಮಾಡಲ್ಲ? ಎನ್ನುವುದೆಲ್ಲ ಅಲ್ಲೊಂದು ಪ್ರಶ್ನೆಯೇ ಅಲ್ಲ. ಯಾರಿಗೆ ಸಮಯ ಇರುತ್ತದೋ ಅವರು ಅಡುಗೆ ಮಾಡುತ್ತಾರೆ. ಅಡುಗೆಗೆ ಒಂದು ಸೌಂದರ್ಯವಿದೆ. ಅದಕ್ಕೊಂದು ವೈವಿಧ್ಯವಿದೆ. ಅದಕ್ಕೊಂದು ಸಮಾನತೆ ತಂದು ಹೊರಗೆ ಹೋಗಲು ಬಿಡಬೇಕು. ಆಗ ಅದಕ್ಕೊಂದು ಮಾನ್ಯತೆ ಬರುತ್ತದೆ.

ಹರೀಶ ಹಂದೆ

Advertisement

Udayavani is now on Telegram. Click here to join our channel and stay updated with the latest news.

Next