ಶಿವಮೊಗ್ಗ: ಪೊಲೀಸ್ ಕಾನ್ಸ್‌ಟೇಬಲ್‌ಗಳ ಬಳಿ ಲಾಠಿ, ಬಂದೂಕು ಇರೋದು ಸಾಮಾನ್ಯ. ಆದರೆ ಶಿವಮೊಗ್ಗದ ಕೆಲ ಕಾನ್ಸ್‌ಟೇಬಲ್‌ಗಳ ಕೈಗೆ ಬಂದೂಕಿನ ಬದಲಿಗೆ ಗನ್ ಬಂದಿದೆ. ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಪಿಐಗಳ ಬಳಿ ಇರುವಂತೆ ಪೇದೆಗಳ ಬಳಿಯೂ ಗನ್ ಇರಲಿದೆ.
ನಗರದಲ್ಲಿ ಹೆಚ್ಚಿರುವ ರೌಡಿಗಳ ಅಟ್ಟಹಾಸ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸ್, ಈ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸಮಾಜದ ಶಾಂತಿ ಕದಡುತ್ತಿರುವ ರೌಡಿಗಳನ್ನು ಎದುರಿಸಲು ಹಾಗೂ ಸ್ವಯಂ ರಕ್ಷಣೆಗಾಗಿ ಪೇದೆಗಳ ಕೈಗೆ ರಿವಾಲ್ವರ್ ನೀಡಿದೆ.
ರೌಡಿಗಳ ಸಾಮ್ರಾಜ್ಯ: ಶಿವಮೊಗ್ಗ ನಗರದಲ್ಲೇ ಸಾವಿರಕ್ಕೂ ಹೆಚ್ಚು ರೌಡಿಗಳಿದ್ದು ಇವರನ್ನು ನಿಯಂತ್ರಿಸೋದು ಪೊಲೀಸರಿಗೆ ಸಾಹಸದ ಕೆಲಸವಾಗಿದೆ. ಕಳೆದ ಎರಡು ತಿಂಗಳಲ್ಲಿ ಉದ್ಯಮಿಯೊಬ್ಬರ ಅಪಹರಣ ಯತ್ನ, ಇದೇ ಪ್ರಕರಣದಲ್ಲಿ ಒಬ್ಬ ಆರೋಪಿ ಮೇಲೆ ಫೈರ್ ಕೂಡ ಆಗಿತ್ತು. ಅಲ್ಲದೇ ಚುನಾವಣೆ ವೇಳೆ ಬೆದರಿಕೆ, ಹಲ್ಲೆ, ಕೊಲೆ ಬೆದರಿಕೆ ಆರೋಪಗಳು ಸಾಕಷ್ಟು ಕೇಳಿ ಬಂದಿದ್ದವು. ಪ್ರತಿಷ್ಠಿತ ಏರಿಯಾಗಳಲ್ಲಿ ಕಳ್ಳತನ ಕೂಡ ಹೆಚ್ಚಾಗಿತ್ತು. ಇದನ್ನೆಲ್ಲ ಮಟ್ಟ ಹಾಕಲು ಯೋಜನೆ ರೂಪಿಸಿದ ಎಸ್‌ಪಿ ಅಭಿನವ್ ಖರೆ, ಆ್ಯಂಟಿ ರೌಡಿ ಸ್ಕ್ವಾಡ್ ಆರಂಭಿಸಿದ್ದರು.
ಗಣೇಶ ಚತುರ್ಥಿ, ಮೊಹರಂ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿತ್ತು. ಜತೆಗೆ 30ಕ್ಕೂ ಹೆಚ್ಚು ಮಂದಿಯನ್ನು ಬಂ ಧಿಸಲಾಗಿತ್ತು. ಎರಡು ತಿಂಗಳಲ್ಲಿ ಏಳೆಂಟು ಮಂದಿಯನ್ನು ಗಡಿಪಾರು ಕೂಡ ಮಾಡಲಾಗಿದೆ. ಆದರೂ ಗಣೇಶ ಹಬ್ಬದ ಹಿಂದಿನ ದಿನ ನಡೆದ ಕೊಲೆ ಪ್ರಕರಣ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಮಾಜಿ ರೌಡಿಶೀಟರ್ ಮಾರ್ಕೆಟ್ ಗಿರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮತ್ತೆ ರೌಡಿಗಳ ಅಟ್ಟಹಾಸ ಮುಂದುವರಿಯಬಹುದೆಂಬ ಶಂಕೆಯಿಂದ ರೌಡಿಗಳ ಮನೆ ಕದ ಬಡಿಯಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ವೇಳೆ ಸೂಕ್ತ ಭದ್ರತೆ ಅಗತ್ಯವಾಗಿರುವುದರಿಂದ ರಿವಾಲ್ವರ್ ನೀಡಿದೆ.
ಹೇಗೆ ಕೆಲಸ ಮಾಡುತ್ತೆ ವಿಶೇಷ ಪಡೆ: ಇಲ್ಲಿನ ಪೊಲೀಸ್ ಠಾಣೆಗಳಲ್ಲಿರುವ ಆಯ್ದ ಕಾನ್ಸ್‌ಟೇಬಲ್‌ಗಳನ್ನು ಸೇರಿಸಿ ಆ್ಯಂಟಿ ರೌಡಿ ಸ್ಕ್ವಾಡ್ ರಚಿಸಲಾಗಿದ್ದು, ಈ ತಂಡವು ರೌಡಿಗಳ ಮೇಲೆ ನಿಗಾ ಇಟ್ಟಿದೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಮನೆಗೆ ರಾತ್ರೋರಾತ್ರಿ ನುಗ್ಗಿ ಬಂಧಿಸುವ ಕೆಲಸ ಮಾಡುತ್ತಿದೆ. ಈ ತಂಡದಲ್ಲಿ ಯಾರ್ಯಾರು ಇದ್ದಾರೆ ಎಂಬುದು ಸಹ ಯಾರಿಗೂ ತಿಳಿದಿರುವುದಿಲ್ಲ. ಇಲಾಖೆ ನಡೆಸುವ ಪರೇಡ್‌ನಲ್ಲಿ ಭಾಗವಹಿಸಿದೇ ಎಸ್ಕೇಪ್ ಆದ ರೌಡಿಗಳನ್ನು ಹುಡುಕಿ ಹೆಡೆಮುರಿ ಕಟ್ಟಲಾಗುತ್ತದೆ. ಜತೆಗೆ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ರಿವಾಲ್ವರ್ ಬಳಸುವುದು ಹೇಗೆ ಎಂಬ ಬಗ್ಗೆ ರೌಡಿ ನಿಗ್ರಹ ದಳದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ಅನಿವಾರ್ಯ ಹಾಗೂ ಆತ್ಮರಕ್ಷಣೆಗಾಗಿ ಇದನ್ನು ಬಳಸುವಂತೆಯೂ ಸೂಚಿಸಲಾಗಿದೆ. ಒಟ್ಟಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಶಸ್ತ್ರ ಹಿಡಿದು ಸನ್ನದಟಛಿವಾಗಿದೆ.
ರಿವಾಲ್ವರ್ ನೀಡಿರುವುದು ಸಿಬ್ಬಂದಿ ಆತ್ಮರಕ್ಷಣೆಗೆ. ಎಷ್ಟೋ ಸಾರಿ ಒಬ್ಬರೇ ರೌಡಿಗಳ ಮನೆಗಳಿಗೆ ನುಗ್ಗುತ್ತಾರೆ. ಈ ವೇಳೆ ಅವರ ಮೇಲೆ ಹಲ್ಲೆಯಾಗುವ ಸಾಧ್ಯತೆಯಿದೆ. ಈ ವೇಳೆ ಅವರ ಸ್ವರಕ್ಷಣೆಗೆ ರಿವಾಲ್ವರ್ ಬಳಸಬಹುದು.
ಅಭಿನವ್ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಶರತ್ ಭದ್ರಾವತಿ