Advertisement

ತನಿಖಾ ದೋಷದಿಂದಾಗಿ ತಪ್ಪಿತಸ್ಥರು ಬಚಾವ್‌

03:22 PM Apr 26, 2017 | Team Udayavani |

ದಾವಣಗೆರೆ: ಅನ್ಯಾಯಕ್ಕೆ ಒಳಗಾದವರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ನಿವೃತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಣಿಗಲ್‌ ಶ್ರೀಕಂಠ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಲಾಖೆ ವಿಚಾರಣೆ ನಡೆಸುವ ವಿಧಾನ ಮತ್ತು ತನಿಖೆಯಲ್ಲಿನ ಲೋಪದೋಷಗಳು… ವಿಷಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ತಾಂತ್ರಿಕ ಮತ್ತಿತರ ಕಾರಣದಿಂದ ತನಿಖೆಯಲ್ಲಿನ ಲೋಪದೋಷಗಳಿಂದ ತಪ್ಪಿತಸ್ಥರು ಬಿಡುಗಡೆಯಾಗುವ ಸಾಧ್ಯತೆ ಇರಲಿದೆ. ಹಾಗಾಗಿ ತನಿಖಾ ಅಧಿಕಾರಿಗಳು ಪ್ರತಿ ಅಂಶದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು. ಈಚೆಗೆ ಅನೇಕ ಹೊಸ ಕಾನೂನು, ತಿದ್ದುಪಡಿ ಜಾರಿಗೆ ಬರುತ್ತಿವೆ. ಅನೇಕ ಅಧಿಕಾರಿಗಳಿಗೆ ಆ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಅರಿವಿನ ಕೊರತೆಯಿಂದಾಗಿ ತನಿಖೆಯಲ್ಲಿ ಲೋಪದೋಷಗಳು ಉಂಟಾಗುತ್ತವೆ. 

ಅಧಿಕಾರಿಗಳು ಲೋಪದ ಕಾರಣಕ್ಕೆ ಇಲಾಖೆಗೆ ತನಿಖೆಗೆ ಒಳಪಟ್ಟ ಸಂದರ್ಭದಲ್ಲೂ ಸಂಬಂಧಿತ ಅಧಿಕಾರಿಗಳು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸಬೇಕು. ತನಿಖೆಯಲ್ಲಿ ಲೋಪ ಉಂಟಾದಲ್ಲಿ ತಪ್ಪು ಮಾಡಿದವರೇ ನ್ಯಾಯಾಲಯಕ್ಕೆ ಹೋಗಿ, ಮತ್ತೆ ಕೆಲಸಕ್ಕೆ ಮರಳಿ ಬಂದಿರುವ ಅನೇಕ ಉದಾಹರಣೆ ಇವೆ ಎಂದು ತಿಳಿಸಿದರು. 

ಪ್ರತಿದಿನ ನ್ಯಾಯಾಲಯಗಳು ತೀರ್ಪನ್ನು ನೀಡುವಾಗ ತನಿಖೆಯಲ್ಲಿನ ಲೋಪದೋಷ, ತನಿಖಾಧಿಕಾರಿಗಳ ತಪ್ಪಿನ ಬಗ್ಗೆ ಪ್ರಸ್ತಾಪಿಸುತ್ತವೆ. ತನಿಖೆಯಲ್ಲಿ ಲೋಪದೋಷದಿಂದಾಗಿಯೇ 100 ಮಂದಿ ತಪ್ಪಿತಸ್ಥರಲ್ಲಿ 5 ರಿಂದ 6 ಜನರು ಶಿಕ್ಷೆಗೆ ಒಳಗಾಗುವಂತಾಗಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು. 

ಪ್ರಾಸ್ತಾವಿಕ ಮಾತುಗಳಾಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮಾತನಾಡಿ, ಇಲಾಖೆ ತನಿಖೆಯಲ್ಲಿನ ಲೋಪದೋಷದ ಪರಿಣಾಮ ಸಾಕಷ್ಟು ಪ್ರಕರಣ ಹಿಂದುಳಿದಿವೆ. ಅನೇಕ ತನಿಖಾಧಿಕಾರಿಗಳಿಗೆ ಕಾನೂನು, ಇಲಾಖೆ ನೀತಿ, ನಿಯಮಗಳ ಅರಿವಿನ ಕೊರತೆಯಿಂದ ತನಿಖೆ ಲೋಪದೋಷ ಉಂಟಾಗಿ ಇಲಾಖಾ ತನಿಖೆಯ ಮೂಲ ಉದ್ದೇಶವೇ ಈಡೇರುವುದಿಲ್ಲ.

Advertisement

ಆಪಾದಿತ ಸಿಬ್ಬಂದಿ, ಅಧಿಕಾರಿಗಳಿಗೆ ವಿಚಾರಣೆಗೆ ಸಂದರ್ಭನುಸಾರ ಒಂದು ವಾರ ಮಾತ್ರ ಕಾಲಾವಕಾಶ ನೀಡಬೇಕು. ಆದರೆ, ಅದು ಆಗುತ್ತಿಲ್ಲ. ಒಂದು ವಾರದಲ್ಲಿ ಸಂಬಂಧಿತ ಸಿಬ್ಬಂದಿ, ಅಧಿಕಾರಿ ವಿಚಾರಣೆಗೆ ಒಳಗಾಗದಿದ್ದಲ್ಲಿ ಮುಂದಿನ ತನಿಖೆ ನಡೆಸುವ ಅವಕಾಶ ಇದೆ ಎಂದು ತಿಳಿಸಿದರು. 

ಈಚೆಗೆ ಜಾರಿಗೆ ಬರುತ್ತಿರುವ ನೂತನ ಕಾನೂನು, ನೀತಿ, ನಿಯಮಗಳ ಬಗ್ಗೆ ತನಿಖಾ ಅಧಿಕಾರಿಗಳು ಚೆನ್ನಾಗಿ ತಿಳಿದುಕೊಳ್ಳಬೇಕು. ತನಿಖಾ ವಿಧಾನದಲ್ಲಿನ ಅರಿವಿನ ಕೊರತೆಯಿಂದ ಸಾಕಷ್ಟು ಪ್ರಕರಣ ಖುಲಾಸೆ ಗೊಳ್ಳುವುದು ಕಂಡು ಬರುತ್ತದೆ. ಲೋಪದೋಷ ತನಿಖೆ ನಡೆಸಿದ ಅಧಿಕಾರಿಗಳು ಮಾತ್ರವಲ್ಲ ಮೇಲಾಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಂಡ ಉದಾಹರಣೆ ಇವೆ.

ಯಾಕೆ, ಯಾವ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಒಳ್ಳೆಯ ತನಿಖೆ ನಡೆಸಬೇಕು. ಉತ್ತಮ ತನಿಖಾಧಿಕಾರಿಗಳಾಗಿ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಯಶೋಧಾ ಎಸ್‌. ವಂಟಿಗೋಡಿ ಇದ್ದರು. ಗ್ರಾಮಾಂತರ ಉಪಾಧೀಕ್ಷಕ ಬಿ.ಎಸ್‌. ನೇಮಗೌಡ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next