Advertisement

ಇನ್ನು ಗ್ಯಾರಂಟಿ ಕಮಲ ಸರ್ಕಾರ

01:51 AM Jul 29, 2019 | Sriram |

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತ ಯಾಚನೆ: ಸರಳ ಬಹುಮತಕ್ಕೆ ಅಡ್ಡಿ ಇಲ್ಲ

Advertisement

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ವಿಶ್ವಾಸಮತ ಯಾಚಿ ಸುವ ಮುನ್ನಾ ದಿನವೇ, ಸ್ಪೀಕರ್‌ ರಮೇಶ್‌ ಕುಮಾರ್‌ 14 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಾಪ್ತವಾಗುವ ಸಾಧ್ಯತೆ ದಟ್ಟವಾಗಿದೆ.

ರಜಾದಿನವಾದ ಭಾನುವಾರ ಅನಿರೀಕ್ಷಿತ ವಾಗಿ ದಿಢೀರ್‌ ತೀರ್ಪು ಪ್ರಕಟಿಸಿದ ಸ್ಪೀಕರ್‌, 11 ಕಾಂಗ್ರೆಸ್‌ ಹಾಗೂ ಮೂವರು ಜೆಡಿಎಸ್‌ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದರು. ಇದರೊಂದಿಗೆ ಅನರ್ಹ ಗೊಂಡ ಶಾಸಕರ ಸಂಖ್ಯೆ 17ಕ್ಕೆ ಏರಿದೆ.

ಈ ಲೆಕ್ಕಾಚಾರದ ಪ್ರಕಾರ, 225 (ನಾಮ ನಿರ್ದೇಶಿತ ಸದಸ್ಯ ಸೇರಿ) ಸದಸ್ಯಬಲದ ವಿಧಾನಸಭೆಯ ಸದಸ್ಯರ ಸಂಖ್ಯೆ ಈಗ 208ಕ್ಕೆ ಕುಸಿದಿದೆ. ಹೀಗಾಗಿ, ಸರ್ಕಾರ ರಚಿಸಲು 105 ಸದಸ್ಯರ ಬೆಂಬಲ ಸಾಕಾಗುತ್ತದೆ. ಬಿಜೆಪಿ ಈಗಾಗಲೇ 106 (ಪಕ್ಷೇತರ ಸೇರಿ) ಸದಸ್ಯ ಬಲ ಹೊಂದಿರುವುದರಿಂದ ಸೋಮವಾರ ವಿಶ್ವಾಸ ಮತ ಪಡೆಯುವುದು ಖಚಿತ ಮಾತ್ರವಲ್ಲದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕನಿಷ್ಠ ಆರು ತಿಂಗಳು ರಾಜಕೀಯ ಅನಿಶ್ಚಿತತೆಯಿಂದ ನಿರಾಳವಾಗಿ ಅಧಿಕಾರ ಚಲಾಯಿಸಬಹುದು.

ಜೆಡಿಎಸ್‌ನ ಎಚ್.ವಿಶ್ವನಾಥ್‌, ಕೆ.ಸಿ. ನಾರಾಯಣಗೌಡ, ಕೆ. ಗೋಪಾಲಯ್ಯ ಹಾಗೂ ಕಾಂಗ್ರೆಸ್‌ನ ಪ್ರತಾಪ್‌ ಗೌಡ ಪಾಟೀಲ್, ಬಿ. ಸಿ ಪಾಟೀಲ್, ಅರಬೈಲ್ ಶಿವರಾಮ್ ಹೆಬ್ಟಾರ್‌, ಎಸ್‌. ಟಿ. ಸೋಮಶೇಖರ್‌, ಬೈರತಿ ಬಸವರಾಜ್. ಆನಂದ್‌ ಸಿಂಗ್‌, ಆರ್‌. ರೋಷನ್‌ ಬೇಗ್‌, ಮುನಿರತ್ನ, ಡಾ. ಕೆ.ಸುಧಾಕರ್‌, ಎಂ.ಟಿ.ಬಿ ನಾಗರಾಜ್ ಸೇರಿ ಹದಿಮೂರು ಜನ ರಾಜೀನಾಮೆ ಸಲ್ಲಿಸಿರುವ ಶಾಸಕರು ಹಾಗೂ ರಾಜೀನಾಮೆ ಸಲ್ಲಿಸದೇ ವಿಪ್‌ ಉಲ್ಲಂಘಿಸಿ ವಿಶ್ವಾಸ ಮತ ಯಾಚನೆಯಿಂದ ದೂರ ಉಳಿದಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನೂ ಅನರ್ಹಗೊಳಿಸಿರುವುದಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

ಹದಿನಾಲ್ಕು ಸದಸ್ಯರು ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಅನರ್ಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ 15ನೇ ವಿಧಾನಸಭೆಯ ಅವಧಿಗೆ ಅವರು ಶಾಸಕರಾಗಿ ಆಯ್ಕೆಯಾಗಲು ಅವಕಾಶ ಇರುವುದಿಲ್ಲ. ಹಾಗೂ ಸಚಿವರಾಗಿಯೂ ಅಧಿಕಾರ ವಹಿಸಿಕೊಳ್ಳುವಂತಿಲ್ಲ ಎಂದು ಸ್ಪೀಕರ್‌ ಸ್ಪಷ್ಟಪಡಿಸಿದ್ದಾರೆ.

ಬೇಸರದಿಂದಲೇ ತೀರ್ಪು: ತಮ್ಮ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಇಂದು ಅತ್ಯಂತ ಕೆಟ್ಟ ದಿನ ಎಂದು ಬೇಸರದಿಂದಲೇ ತೀರ್ಪು ಪ್ರಕಟಿಸಿದರು. ಜುಲೈ 10 ಪಕ್ಷ ವಿರೋಧಿ ಚಟುವಟಿಕೆ ಹಾಗೂ ವಿಪ್‌ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಜೆಡಿಎಲ್ಪಿ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡಿದ ದೂರು ಆಧರಿಸಿ ಈ ತೀರ್ಪು ಪ್ರಕಟಿಸಿರುವುದಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ಭಾನುವಾರವೇ ಏಕೆ?: ಈ ತಿಂಗಳಾರಂಭದಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಸಂದರ್ಭ ಭಾನುವಾರದಂದು ರಜಾ ದಿನ ಎಂಬ ಕಾರಣಕ್ಕಾಗಿ ಕಚೇರಿಗೆ ಆಗಮಿಸದೆ ಇದ್ದ ಸ್ಪೀಕರ್‌ ಅನರ್ಹಗೊಳಿಸಲು ಮಾತ್ರ ಭಾನುವಾರವೂ ಬಂದಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟೀಕೆಗೆ ಒಳಗಾಗಿದ್ದಾರೆ. ತಮ್ಮ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಈ ತೀರ್ಪು ನೀಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಆದರೆ, ಸ್ಪೀಕರ್‌ ನೀಡುವ ಕಾರಣ ಇದು- ಯಡಿಯೂರಪ್ಪ ಅವರು ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಬಹುಮತ ಸಾಬೀತು ಪಡಿಸಲು ನಿರ್ಧರಿಸಿರುವುದರಿಂದ ಭಾನುವಾರವೂ ಕೆಲಸ ನಿರ್ವಹಿಸುವ ಅನಿವಾರ್ಯತೆ ಬಂದಿದೆ. ಸೋಮವಾರ ನಡೆಯುವ ಕಲಾಪಕ್ಕೆ ಎಲ್ಲ ಶಾಸಕರು ಹಾಜರಾಗುವಂತೆ ಈಗಾಗಲೇ ನೊಟೀಸ್‌ ನೀಡಲಾಗಿದೆ. ಜುಲೈ 31 ರೊಳಗೆ ಧನ ವಿನಿಯೋಗ ವಿಧೇಯಕ ಅಂಗೀಕಾರವಾಗದೇ ಇದ್ದರೆ, ರಾಜ್ಯ ಸರ್ಕಾರದ ಎಲ್ಲ ವ್ಯವಹಾರಗಳು ಸ್ಥಗಿತವಾಗುವುದರಿಂದ ಹಣಕಾಸು ವಿಧೇಯಕ ಅಂಗೀಕಾರಗೊಳ್ಳಬೇಕಿದೆ.

ಸಚಿವ ಸ್ಥಾನದ ಕುರಿತು ಯಾವುದೇ ಅಶರೀರವಾಣಿ ನನಗೆ ಬಂದಿಲ್ಲ. ನಾನೂ ಹುದ್ದೆ ಕೊಡಿ ಎಂದು ಕೇಳಿಲ್ಲ. ಪಕ್ಷೇತರನಾಗಿ ಇದ್ದಾಗಲೂ, ಪಕ್ಷದಲ್ಲಿ ಇದ್ದಾಗಲೂ ಬಿಜೆಪಿಗೆ
ದ್ರೋಹ ಬಗೆದಿಲ್ಲ. ಪಕ್ಷದ ಬೆಳವಣಿಗೆಗಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಅಷ್ಟೆ.ಬಿಜೆಪಿ ಸರಕಾರದಿಂದ ರಾಜ್ಯಕ್ಕೆ ಒಳ್ಳೆಯದಾಗಲಿ,ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಆಶಿಸುತ್ತೇನೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ.

ಸೋಮವಾರ ನಡೆಯುವ ಅಧಿವೇಶನದಲ್ಲಿ ಬಿಜೆಪಿ
ಶಾಸಕರೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮತ ಹಾಕಬಹುದು. ಆದರೆ, ಈ ಬಗ್ಗೆ
ನನಗೆ ಮಾಹಿತಿ ಇಲ್ಲ, ನಿರೀಕ್ಷೆಯೂ ಇಲ್ಲ. ನನ್ನ ಪ್ರಕಾರ ಯಡಿಯೂರಪ್ಪಗೆ ಬೆಂಬಲವಿಲ್ಲ.
-ಸಿದ್ದರಾಮಯ್ಯ,
ಮಾಜಿ ಮುಖ್ಯಮಂತ್ರಿ

ಸ್ಪೀಕರ್‌ರದ್ದು “ಅವಸರದ ತೀರ್ಮಾನ’. ರಾಜೀನಾಮೆ ವಿಚಾರವನ್ನು ಅವರು ಗಮನಿಸಿಲ್ಲ. ಕೇವಲ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿಯವರ ದೂರನ್ನು ಮಾತ್ರ ಪರಿಗಣಿಸಿದ್ದಾರೆ.ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.
– ಎಚ್‌.ವಿಶ್ವನಾಥ್‌,
ಅನರ್ಹಗೊಂಡ ಜೆಡಿಎಸ್‌ ಶಾಸಕ.

ನನ್ನ ಅಭಿಪ್ರಾಯದಲ್ಲಿ ಕೆಲವು ಕಾರಣಗಳಿಗೆ ಸ್ಪೀಕರ್‌ಕೈಗೊಂಡ ತೀರ್ಮಾನ ಕಾನೂನುಬಾಹಿರ. ಏಕೆಂದರೆ, ಇಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ. ಸಹಜ ನ್ಯಾಯ ತತ್ವ ಪಾಲನೆ ಆಗಿಲ್ಲ.
– ಬಿ.ವಿ.ಆಚಾರ್ಯ,
ಮಾಜಿ ಅಡ್ವೊಕೇಟ್‌ ಜನರಲ್‌

ವಾದ ಮಂಡಿಸಲು ಶಾಸಕರಿಗೆ ಅವಕಾಶ ಕೊಡದೆ ಅನರ್ಹಗೊಳಿಸಿದರೆ, ಅದನ್ನು ನಿಷ್ಪಕ್ಷಪಾತ ವಿಚಾರಣೆ ಎಂದು ಹೇಗೆ ಹೇಳುವುದು? ಅದಕ್ಕೆ ತಡೆಯಾಜ್ಞೆ ಸಿಕ್ಕರೆ, ಉಪಚುನಾವಣೆ ನಡೆಯುವುದಿಲ್ಲ.
– ಅಶೋಕ್‌ ಹಾರನಹಳ್ಳಿ,
ಮಾಜಿ ಅಡ್ವೊಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next