Advertisement

ಜಿಟಿಡಿ ಪಕ್ಷ ಬಿಟ್ಟರೆ ತಲೆ ಕೆಡಿಸಿಕೊಳ್ಳಲ್ಲ

11:17 PM Mar 01, 2020 | Lakshmi GovindaRaj |

ಹಾಸನ: ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷ ಬಿಟ್ಟು ಹೋದರೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿ, ಯಾರೋ ಒಬ್ಬರು ಹೋಗುತ್ತಾರೆ ಎಂದ ಮಾತ್ರಕ್ಕೆ ಪಕ್ಷ ಮುಳುಗುವುದಿಲ್ಲ. ಈ ಹಿಂದೆಯೂ ಜಿ.ಟಿ. ದೇವೇಗೌಡ ಅವರು ಬಿಜೆಪಿಗೆ ಹೋಗಿ ಅಲ್ಲಿ ಅಧಿಕಾರ ಅನುಭವಿಸಿದ್ದರು. ಆ ಪಕ್ಷ ಬಿಟ್ಟು ಜೆಡಿಎಸ್‌ಗೆ ಮತ್ತೆ ವಾಪಸ್‌ ಬಂದರು.

Advertisement

ಮತ್ತೆ ಹೋಗಬಹುದು. ಅದಕ್ಕೆ ಹೆದರುವುದಿಲ್ಲ. ನನಗೆ 87 ವರ್ಷವಾಗಿದ್ದರೂ ಉತ್ಸಾಹ ಕಡಿಮೆ ಆಗಿಲ್ಲ. ಎದುರಾಳಿಗಳು ಅಪಹಾಸ್ಯ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಕೆಲಸಕ್ಕಾಗಿ ಹೋರಾಟ ಮಾಡುವೆ ಎಂದು ಹೇಳಿದರು. ಜೆಡಿಎಸ್‌ ಪುನಶ್ಚೇತನ ಕುರಿತು ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಜತೆ ಎಚ್‌.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಪಕ್ಷ ವನ್ನು ಮತ್ತೆ ಕಟ್ಟುವ ಸಲುವಾಗಿ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ.

1989ರಲ್ಲಿ ಎಲ್ಲರೂ ನನ್ನನ್ನು ಒದ್ದು ಹೊರ ಹೋಗಿದ್ದರು. ನನ್ನ ಜತೆ ಬಿ.ಎಲ್‌.ಶಂಕರ್‌, ವೈಎಸ್‌ವಿ ದತ್ತ, ಉಗ್ರಪ್ಪ ಇದ್ದರು. ಮತ್ತೆ ಪಕ್ಷ ಕಟ್ಟಲಿಲ್ಲವೇ? ಈಗಲೂ ಎ.ಟಿ.ರಾಮಸ್ವಾಮಿ, ಬಸವರಾಜ ಹೊರಟ್ಟಿ, ಎಚ್‌.ಕೆ. ಕುಮಾರಸ್ವಾಮಿ ಅವರಂತಹ ನಾಯ ಕರು ಇದ್ದಾರೆ. ಪಕ್ಷ ಕಟ್ಟುತ್ತೇವೆ ಎಂದರು.

ಹಾಸನ -ಬೆಂಗಳೂರು ರೈಲು ಮಾರ್ಗದಲ್ಲಿ ಸಂಚಾರ: ತಮ್ಮ ಕನಸಿನ ರೈಲು ಮಾರ್ಗ ನಿರ್ಮಾಣಕ್ಕೆ ಎರಡು ದಶಕಗಳ ಕಾಲ ಹೋರಾಡಿದ್ದ ದೇವೇಗೌಡರು, ಭಾನುವಾರ ಅದೇ ಮಾರ್ಗದಲ್ಲಿ ಮೊದಲ ಬಾರಿಗೆ ಬೆಂಗ ಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಬಂದಿಳಿದರು.

ಯಶವಂತಪುರ-ಮಂಗಳೂರು ಜಂಕ್ಷನ್‌ ನಡುವೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ನಲ್ಲಿ ಬೆಳಗ್ಗೆ 10.30ಕ್ಕೆ ಹಾಸನ ರೈಲು ನಿಲ್ದಾಣಕ್ಕೆ ತಮ್ಮ ಸಹಾಯಕರು ಮತ್ತು ಅಂಗರಕ್ಷಕರೊಂದಿಗೆ ಬಂದಿಳಿದ ದೇವೇಗೌಡರಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹೂ ಮಳೆಗರೆದು ಜೈಕಾರ ಕೂಗಿದರು.

Advertisement

1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಅಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರ ಒತ್ತಡದಿಂದಾಗಿ ಹಾಸನ – ಬೆಂಗಳೂರು ನಡುವೆ ಶ್ರವಣಬೆಳಗೊಳ, ಕುಣಿಗಲ್‌ ಮಾರ್ಗದಲ್ಲಿ ನೇರ ರೈಲು ಮಾರ್ಗ ನಿರ್ಮಾ ಣಕ್ಕೆ ಮಂಜೂರಾತಿ ನೀಡಿದ್ದರು.

ಆಡಳಿತಾಧಿಕಾರಿ ಪದಚ್ಯುತಿಗೆ ವಿರೋಧ: ಇದೇ ವೇಳೆ, ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿದ್ದ ಆಶೋಕ್‌ ಆನಂದ್‌ ಅವರನ್ನು ಕಿತ್ತು ಹಾಕಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡ, ಅವರ ಪದಚ್ಯುತಿಯ ಕಾರಣಗಳನ್ನು ಬಹಿರಂಗ ಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷರು ಮೂರು ತಿಂಗಳಿಗೊಬ್ಬರು ಬದಲಾವಣೆಯಾಗಿ ಸಂಘವು ಅಧೋಗತಿಗೆ ಇಳಿದ ಸಂದರ್ಭದಲ್ಲಿ ಸಂಘವನ್ನು ಸರಿದಾರಿಗೆ ತರುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರ ಸ್ವಾಮಿ ಅವರು ಅಶೋಕ್‌ ಆನಂದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದರು. ಈಗ ಅವರ ಮೇಲೆ ಅಪಾದನೆಗಳಿವೆ ಎಂದು ಹೇಳಿ ಅವರನ್ನು ಕಿತ್ತು ಹಾಕಿ ಶಂಕರಲಿಂಗೇಗೌಡ ಅವರನ್ನು ನೇಮಕ ಮಾಡಲಾಗಿದೆ. ಇದಕ್ಕೆಲ್ಲಾ ಯಾರು ಕಾರಣ ಎಂಬುದು ಗೊತ್ತಿದೆ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next