Advertisement

ವರನ ಸೋಗಿನಲ್ಲಿ ಗೂಢಚರ್ಯೆ

07:25 AM Oct 25, 2017 | Team Udayavani |

ನವದೆಹಲಿ: ಭಾರತದಲ್ಲಿ ಗೂಢಚಾರಿಕೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕಾಲಕಾಲಕ್ಕೆ ಹೊಸ ಹೊಸ ಅಡ್ಡದಾರಿಗಳನ್ನು ಹುಡುಕುತ್ತಲೇ ಇದೆ. ಈ ಹಿಂದೆ ಹನಿಟ್ರ್ಯಾಪ್‌ ವಿಧಾನದಲ್ಲಿ ಸುಂದರ ಮಹಿಳೆಯರನ್ನು ಬಳಸಿ ಯೋಧರನ್ನು ಬಲೆಗೆ ಬೀಳಿಸುತ್ತಿದ್ದ ಐಎಸ್‌ಐ ಈಗ ಹೊಸ ತಂತ್ರದ ಮೊರೆ ಹೋಗಿದೆ. ಎನ್‌ಆರ್‌ಐ ವರನ ಸೋಗಿನಲ್ಲಿ ಭಾರತಕ್ಕೆ ನುಸುಳುವ ಪಾಕ್‌ ಐಎಸ್‌ಐ ಏಜೆಂಟ್‌ಗಳು ಪಂಜಾಬ್‌ ಪ್ರಾಂತ್ಯದಲ್ಲಿ ಮಹಿಳೆಯರಿಗೆ ಫೇಸ್‌ಬುಕ್‌ನಲ್ಲಿ ಬಲೆ ಬೀಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

Advertisement

ಪಂಜಾಬ್‌ನಲ್ಲಿ ಉಗ್ರಗಾಮಿ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದ್ದು, ಇದನ್ನು ಸಕ್ರಿಯಗೊಳಿಸಲು ಐಎಸ್‌ಐ ತೀವ್ರ ಪ್ರಯತ್ನ ನಡೆಸಿದೆ. ಇದಕ್ಕಾಗಿ ಐಎಸ್‌ಐ ವಿಶೇಷ ತರಬೇತಿ ನೀಡಿದ್ದು, ಪಂಜಾಬ್‌ನ ಸಂಪ್ರದಾಯದ ಜತೆಗೆ ಅಲ್ಲಿನ ಜನರು ಮಾತನಾಡುವ ರೀತಿಯನ್ನೂ ತನ್ನ ಏಜೆಂಟ್‌ಗಳಿಗೆ ಕಲಿಸುತ್ತಿದೆ. ಸಾಮಾನ್ಯ ವಾಗಿ ಪಾಕ್‌ ಭಾಗದಲ್ಲಿರುವ ಖಲಿಸ್ತಾನಿ ಉಗ್ರರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೂಲಗಳ ಪ್ರಕಾರ ಈ ಏಜೆಂಟರು ನೇಪಾಳಕ್ಕೆ ಬಂದು ಅಲ್ಲಿಂದ ಉತ್ತರ ಪ್ರದೇಶದ ಮೂಲಕ ಪಂಜಾಬ್‌ಗ ಬರುತ್ತಾರೆ. 

ಓರ್ವ ಏಜೆಂಟ್‌ ಬಂಧನ: ಅ.12ರಂದು ಎಹಸಾನ್‌ ಉಲ್‌ ಹಕ್‌ ಎಂಬ ಏಜೆಂಟ್‌ ಬಂಧನವಾದಾಗ ಐಎಸ್‌ಐನ ಈ ತಂತ್ರ ಬಯಲಿಗೆ ಬಂದಿದೆ. ಎಹಸಾನ್‌ ವಿಚ್ಛೇದಿತನಾಗಿದ್ದು ಪಾಕ್‌ನಿಂದ ಸೌದಿ ಅರೇಬಿಯಾಗೆ ಹೋಗಿ, ಅಲ್ಲಿ ಆಸ್ಟ್ರಿಯಾದ ಮಹಿಳೆಯನ್ನು ವಿವಾಹವಾಗಿದ್ದ. ಆಸ್ಟ್ರಿಯಾ ಪಾಸ್‌ಪೋರ್ಟ್‌ ಪಡೆದ ಆತ, ಪತ್ನಿಗೆ ವಿಚ್ಛೇದನ ನೀಡಿದ.

2011ರಲ್ಲೇ ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಂಜಾಬ್‌ನ ಬಲ್ವಿಂದರ್‌ ಕೌರ್‌ಳನ್ನು 2012ರಲ್ಲಿ ವಿವಾಹವಾಗಿದ್ದಷ್ಟೇ ಅಲ್ಲ, ಈತ ಆಧಾರ್‌, ಪ್ಯಾನ್‌ ಕಾರ್ಡ್‌ ಮಾಡಿಸಿದ್ದಾನೆ. ನಕಲಿ ದಾಖಲೆ ನೀಡಿ ಜಲಂಧರ್‌ ಬಳಿ ಹಳ್ಳಿಯಲ್ಲಿ ಆಸ್ತಿಯನ್ನೂ ಖರೀದಿಸಿದ್ದಾನೆ. ಇದೇ ರೀತಿ 2010ರಲ್ಲಿ ಜಲಂಧರ್‌ ಹಾಗೂ ಫಿರೋಜ್‌ಪುರದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿತ್ತು. ಇವರೂ ಇದೇ ವಿಧಾನವನ್ನು ಅನುಸರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next