ತೀರ್ಥಹಳ್ಳಿ: ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಪ್ರಮುಖ ಆಜಾದ್ ರಸ್ತೆಯ ಕೊಪ್ಪ ಸರ್ಕಲ್ ನಿಂದ ಎಪಿಎಂಸಿ ತನಕ 16 ಕೋಟಿ ವೆಚ್ಚದಲ್ಲಿ ಕಳೆದ 5 ವರ್ಷಗಳ ಹಿಂದೆ ಸುಸಜ್ಜಿತ ರಸ್ತೆ ನಿರ್ಮಾಣಗೊಂಡು ಪಟ್ಟಣದ ಅಂದ ಹೆಚ್ಚಾಗಿದೆ. ಆದರೆ ನಿರ್ವಹಣೆ ಮಾಡಬೇಕಾದ ಇಲಾಖೆಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಆಸ್ತಿ ಯಾರಿಗೂ ಬೇಡವಾದಂತಹ ಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಇಲ್ಲಿನ ಆಜಾದ್ ರಸ್ತೆಯ ಎರಡು ಕಡೆಗಳಲ್ಲೂ ಸುಸಜ್ಜಿತವಾದಂತಹ ಫುಟ್‌ಪಾತ್ ನಿರ್ಮಿಸಿ ಪಾದಚಾರಿಗಳಿಗೆ ಸುಗಮವಾಗಿ ಓಡಾಡಲು ಎರಡು ಕಡೆಗಳಲ್ಲೂ ಗ್ರಿಲ್‌ಗಳನ್ನು ಆಳವಡಿಸಲಾಗಿತ್ತು. ಆದರೆ ಮುಖ್ಯ ರಸ್ತೆಯ ಕೆಲವು ವರ್ತಕರು ತಮ್ಮ ಅಂಗಡಿಗಳಿಗೆ ಗ್ರಾಹಕರು ಬರಲು ಸುಲಭವಾಗಲಿ ಎಂಬ ದುರುದ್ದೇಶದಿಂದ ವೀಲ್‌ಗಳನ್ನು ಕತ್ತರಿಸಿದ್ದಾರೆ. ಆದರೆ ಇದನ್ನು ಗಮನಿಸಬೇಕಾದ ಹೆದ್ದಾರಿ ಇಲಾಖೆಯ ಇಂಜಿನಿಯರ್ ಯಾವುದೇ ಸಂಬಂಧವಿಲ್ಲದಂತೆ ಕುಳಿತಿದ್ದು, ರಸ್ತೆಯ ನಿರ್ವಹಣೆ ಮರೆತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಫುಟ್‌ಪಾತ್ ಪಕ್ಕದಲ್ಲಿ ಹಲವು ಅಂಗಡಿಗಳ ಮುಂಭಾಗದಲ್ಲಿ ಗ್ರಿಲ್‌ಗಳನ್ನು ರಾತ್ರೋ ರಾತ್ರಿ ಕತ್ತರಿಸಿದ ವರ್ತಕರ ಮನಃಸ್ಥಿತಿಯ ಬಗ್ಗೆ ಸಾರ್ವಜನಿಕರು ಯಾರಲ್ಲಿ ಪ್ರಶ್ನಿಸಬೇಕು ಎಂಬುದು ಗೊಂದಲದ ಗೂಡಾಗಿದೆ.
ರಸ್ತೆಯ ಫುಟ್‌ಪಾತ್‌ಗಳನ್ನು ಅಂಗಡಿಯವರು ಕಟ್ಟಡ ಕಟ್ಟುವವರು ಆಕ್ರಮಿಸಿದ್ದು, ಇದರಿಂದ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವಂತಾಗಿದೆ. ಇನ್ನೊಂದೆಡೆ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಯ ವಿಚಾರದಲ್ಲಿಯೂ ಸಾರ್ವಜನಿಕರು ತಮ್ಮ ಕಾಳಜಿ ಮರೆತಂತಿದೆ. ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮುಖ್ಯ ರಸ್ತೆಯಲ್ಲಿ ನಿಲುಗಡೆಗೆ ಜಾಗ ಸೂಚಿಸಿದರು ಕೆಲವು ಸಾರ್ವಜನಿಕರು ಬೇಕಾಬಿಟ್ಟಿಯಾಗಿ ತಮ್ಮ ವಾಹನವನ್ನು ನಿಲ್ಲಿಸಿ ಪೊಲೀಸ್ ಇಲಾಖೆಯೊಂದಿಗೆ ಸ್ಪಂ ದಿಸದೆ ವಾಗ್ವಾದ ನಡೆಸುತ್ತಾರೆ. ಒಟ್ಟಾರೆ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಕೆಲವು ವಿಚಾರಗಳ ಬಗ್ಗೆ ವರ್ತಕರು, ಸಾರ್ವಜನಿಕರು ತಮ್ಮ ಸ್ವಾರ್ಥವನ್ನು ಬದಿಗೊತ್ತಿ ಸಾರ್ವಜನಿಕರ ಆಸ್ತಿ ನಮ್ಮೆಲ್ಲರದು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ.
-ರಾಮಚಂದ್ರಪ್ಪ ಕೊಪ್ಪಲು