Advertisement

ರೈತಸಂಘದ ಹಸಿರು ಟವೆಲ್‌ ಶೀಘ್ರ ಬದಲು

06:00 AM Dec 10, 2018 | |

ಬೆಳಗಾವಿ: ಹಸಿರು ಶಾಲು ಹಾಕಿಕೊಂಡು ರಾಜಕಾರಣಿಗಳು ತಮ್ಮ ಜೀವನೋಪಾಯಕ್ಕಾಗಿ ಬಳಸಿಕೊಂಡು ಇದನ್ನು ಮಲೀನ ಮಾಡುತ್ತಿದ್ದಾರೆ. ಹೀಗಾಗಿ ಶುಭ್ರ ಬಿಳಿ ವಸ್ತ್ರಕ್ಕೆ ಹಸಿರು ಅಂಚಿರುವ ಟವೆಲ್‌ ಚಿಹ್ನೆಯಾಗಿ ಮಾಡುವ ಚಿಂತನೆ ನಡೆದಿದೆ ಎಂದು ಕೇಂದ್ರದ ಮಾಜಿ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಕೆಲವರು ಹಸಿರು ಶಾಲನ್ನೇ ಛಾಪು ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ರಾಹುಲ್‌ ಗಾಂಧಿ ಶಾಲು ಹಾಕಿಕೊಂಡರೂ ರೈತರಿಗೆ ಇವರಿಂದ ಯಾವುದೇ ಲಾಭವಾಗುತ್ತಿಲ್ಲ. ರೈತರ ಪರ ಎಂದು ಹೇಳಿಕೊಂಡು ಮತಕ್ಕಾಗಿ ತಮ್ಮ ಜೀವನೋಪಾಯ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಮರಳು ಮಾಫಿಯಾ ಜತೆಗೂಡಿ ಕೆಲವರು ಹಸಿರು ಶಾಲು ಧರಿಸಿ ವಸೂಲಿ ದಂಧೆ ನಡೆಸಿದ್ದಾರೆ. ಬೌದ್ಧಿಕವಾಗಿ ಶೋಷಣೆ ಮಾಡುವ ಅಸ್ತ್ರವಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು, ಸಂಘಟನೆಯಲ್ಲಿ ಪರಿಶುದ್ಧತೆ ತರಲು ಇದರ ಚಿಹ್ನೆ ಬದಲಾಯಿಸಲಾಗುವುದು. ನಮಗೆ ಸಾಲ ಮನ್ನಾ ಮಾಡಬೇಕೆಂಬ ಹಪಾಹಪಿ ಇಲ್ಲ. ಸಾಲಮನ್ನಾ ಮಾಡಿದರೆ ಮತ್ತೆ ಸಾಲ ಮಾಡುವ ಅನಿವಾರ್ಯತೆ ರೈತರಿಗಿದೆ. ಸಾಲದಿಂದ ಮುಕ್ತರಾದರೂ ಮತ್ತೆ ಸಾಲದ ಬೆನ್ನು ಹತ್ತುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಸರ್ಕಾರ ಪರಿಹಾರ ಹುಡುಕಬೇಕು ಎಂದರು. 

ಸಕ್ಕರೆ ದರ ನೀಡಬೇಕು ಎಂದು ರೈತರ ಪರವಾಗಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಯ ಉಮೇಶ ಕತ್ತಿ, ಮುರುಗೇಶ ನಿರಾಣಿ, ಕಾಂಗ್ರೆಸ್‌ನ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ ಅವರ ಕಾರ್ಖಾನೆಗಳಿವೆ. ದರ ಕೊಡುವಂತೆ ಅವರಿಗೆ ಹೇಳದವರು ಇಲ್ಲಿ ಬಂದು ಪ್ರತಿಭಟನೆ ನಡೆಸುತ್ತಿರುವುದು ಏಕೆ? ವಿಷಯಾಧಾರಿತ ಬೆಂಬಲ ಕೊಡುತ್ತೇವೆ ಹೊರತು ರಾಜಕೀಯ ಸ್ವಾರ್ಥಕ್ಕಾಗಿ ಪ್ರತಿಭಟನೆ ನಡೆಸಿದರೆ ನಮ್ಮ ಬೆಂಬಲ ಇಲ್ಲ ಎಂದರು.

ಅಜಯ್‌ ನಾಗಭೂಷಣ ವರ್ಗಾವಣೆ ಮಾಡಿ
ಸಕ್ಕರೆ ಆಯುಕ್ತರಾಗಿರುವ ಅಜಯ್‌ ನಾಗಭೂಷಣ ಅವರು ಮಂಡ್ಯದಲ್ಲಿರುವ ಮೈಸೂರು ಶುಗರ್‌ ಕಂಪನಿ ಸಕ್ಕರೆ ಕಾರ್ಖಾನೆಯ ಚೇರಮನ್‌ರಾಗಿದ್ದು, ಇದರ ಕ್ರಷಿಂಗ್‌ ಸಾಮರ್ಥ್ಯ 5 ಸಾವಿರ ಟನ್‌ ಇದ್ದರೂ 2017-18ರಲ್ಲಿ ಕೇವಲ 71 ಸಾವಿರ ಚೀಲ ಸಕ್ಕರೆ ಮಾತ್ರ ಉತ್ಪಾದಿಸಲಾಗಿದೆ. ಇದನ್ನೆಲ್ಲ ಬಿಟ್ಟು ಬೇರೆ ಕಾರ್ಖಾನೆಗಳಿಗೆ ಬೀಗ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ?  ಇಂತಹ ಅಧಿಕಾರಿಗಳು ರೈತರ ಹಿತ ಕಾಪಾಡಲು ಸಾಧ್ಯವೇ ಇಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಅಧಿವೇಶನ ಮುಗಿಯುವುದರೊಳಗೆ ಅಜಯ ನಾಗಭೂಷಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಬಾಬಾಗೌಡ ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next