ಮಳೆಗಾಲವನ್ನು ಈ ಕಾಲವನ್ನು ರೈತರ ಸಂತಸದ ಕಾಲ ಎಂದು ಸಹ ಕರೆಯಬಹುದು. ಯಾಕೆಂದರೆ ರೈತರು ಬೀಜವನ್ನು ಬಿತ್ತಿ ಭೂಮಿಯನ್ನು ಹಸುರಾಗಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಈ ಮಳೆಗಾಲದ ಸಂದರ್ಭವು ಕವಿಗಳ ಕಣ್ಣಿಗೆ ಪ್ರಕೃತಿಯ ಮಡಿಲಿಗೆ ಅಮೃತದ ಬಿಂದುಗಳು ಸಿಂಚನವಾಗುವಂತೆ ಮಳೆಯ ಹನಿಗಳು ಕಾಣುತ್ತದೆ. ಈ ಮುಂಗಾರಿನ ಮಳೆಯ ಸಂದರ್ಭದಲ್ಲಿ ಹಲವು ನದಿ ಹಾಗೂ ಹೊಳೆಗಳು ಮೈತುಂಬಿ ಹರಿಯುವ ಸಮಯ ಕೂಡ ಹೌದು.
ಮಳೆಯಿಂದ ಕೆಲವೊಂದು ನದಿಗಳಿಗೆ ಮರುಜೀವ ನೀಡಿದಂತಿರುತ್ತದೆ. ಮಳೆ ನೀರು ಗುಡ್ಡ ಬೆಟ್ಟಗಳಿಂದ ಹರಿದು ಬರುವುದನ್ನು ನೋಡಲು ಒಂದು ಸಣ್ಣ ಜಲಪಾತದ ಚಿತ್ರಣದಂತೆ ಕಾಣುತ್ತದೆ. ಅವುಗಳನ್ನು ನೋಡಿದಾಗ ರಮಣೀಯ ದೃಶ್ಯದಂತೆ ಗೋಚರವಾಗುತ್ತದೆ. ಕೇವಲ ಜಲಪಾತ ದೃಶ್ಯಗಳು ಮಾತ್ರವಲ್ಲದೆ ಈ ಸಂದರ್ಭದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇಂತಹ ಪ್ರಕೃತಿಯನ್ನು ನೋಡಲು ಹಲವು ಕಡೆಗಳಿಂದ ಜನರು ಆಗಮಿಸುವುದು ಸರ್ವೇ ಸಾಮಾನ್ಯ ಎನ್ನಬಹುದು.
ಆದರೆ ಕೆಲವೊಂದು ವರ್ಷಗಳಿಂದ ಅಂತಹ ಪ್ರಕೃತಿ ವೀಕ್ಷಕರ ಸಂಖ್ಯೆಯು ಸಹ ಹೆಚ್ಚಾಗಿದೆ. ಕೆಲವೊಂದು ಕಡೆಗಳಲ್ಲಿ ಅಂತಹ ವೀಕ್ಷಣೆಯ ಸಂದರ್ಭದಲ್ಲಿ ಹಲವಾರು ಜನರು ತಮ್ಮ ಪ್ರಾಣವನ್ನು ಸಹ ಕಳೆದು ಕೊಂಡಿದ್ದಾರೆ. ಯಾಕೆಂದರೆ ಜನಸಾಮಾನ್ಯರಿಗೆ ಪ್ರವೇಶವನ್ನು ನಿಷೇಧಗೊಳಿಸಿದ ಅಪಾಯದ ಸ್ಥಳಗಳಲ್ಲಿ ಫೋಟೋ ಅಥವಾ ವಿಡಿಯೋ ತುಣುಕುಗಳನ್ನು ತೆಗೆಯುವ ಸಂದರ್ಭದಲ್ಲಿ ನಡೆದ ದುರ್ಘಟನೆಗಳನ್ನು ಕಾಣಬಹುದಾಗಿದೆ. ಕೆಲವೊಂದು ಜನರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆಯಬೇಕು ಎಂಬ ಕಾರಣಕ್ಕೆ ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ.
ಇನ್ನೂ ಕೆಲವೊಂದು ಕಡೆಗಳಲ್ಲಿ ಯುವಕರ ಬೈಕ್ ಹಾಗೂ ಜೀಪ್ ಚಾರಣಗಾರರಿಂದ ಹಲವು ತೊಂದರೆಗಳನ್ನು ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಯಾಕೆಂದರೆ ಮಳೆಗಾಲ ಸಮಯದಲ್ಲಿ ಮಣ್ಣಿನ ರಸ್ತೆಗಳು ಹೆಚ್ಚಿನ ಮಳೆಯ ಕಾರಣದಿಂದ ಮಣ್ಣು ಕೊಚ್ಚಿ ಹೋಗಿ ಅಲ್ಪ ಸ್ವಲ್ಪ ಮಟ್ಟಿಗೆ ಉಳಿದಿರುತ್ತದೆ. ಆದರೆ ಈ ಚಾರಣಗಾರರಿಂದ ಮೊದಲೇ ಹದಗೆಟ್ಟಿರುವ ರಸ್ತೆಯನ್ನು ಇನ್ನೂ ಹದಗೆಡಿಸುವಂತೆ ಮಾಡುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಕೃಷಿಯ ನಾಶವೂ ಸಹ ನಡೆಯುತ್ತಿದೆ. ಕೃಷಿ ಭೂಮಿಯ ಮೇಲೆ ಕಾರು ಮತ್ತು ಬೈಕ್ ಗಳನ್ನು ಚಲಾಯಿಸುವ ಮೂಲಕ ಕೃಷಿ ನಾಶಕ್ಕೆ ಕೂಡ ಕಾರಣರಾಗುತ್ತಿದ್ದಾರೆ.
ಇದು ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬ ಗಾದೆ ಮಾತಿನಂತೆ ಈ ಹುಚ್ಚಾಟವು ನಗರ ಪ್ರದೇಶದ ಜನರಿಗೆ ಮೋಜು ಮಸ್ತಿಯಾದರೆ, ಅಲ್ಲಿನ ಗ್ರಾಮಸ್ಥರಿಗೆ ದಿನ ನಿತ್ಯದ ಕೆಲಸಗಳಿಗೆ ಓಡಾಡಲು ಸಹ ಕಷ್ಟಕರ ಪರಿಸ್ಥಿತಿಯನ್ನು ತಂದೋಡ್ಡುವಂತೆ ಮಾಡುತ್ತಿದ್ದಾರೆ. ಪ್ರವಾಸಿ ಕೇಂದ್ರಕ್ಕೆ ಭೇಟಿಯನ್ನು ನೀಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ನಂತಹ ವಿಷಕಾರಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುವವರನ್ನು ಕಾಣಬಹುದು. ಪ್ರಕೃತಿಯ ಮಡಿಲನ್ನು ಕಲುಷಿತಗೊಳಿಸುವುದು ವೀಕ್ಷಕರು ಹಾಗೂ ಪ್ರವಾಸಿಗರಿಂದ ನಡೆಯುವುದನ್ನು ದಿನನಿತ್ಯ ಗಮನಿಸುತ್ತಿದ್ದೇವೆ.
ಯುವಜನತೆಯೆ ಇನ್ನಾದರೂ ಎಚ್ಚೆತ್ತುಕೊಳ್ಳಿ ನಮ್ಮ ಪ್ರಕೃತಿಯನ್ನು ನೋಡಿ ಕಣ್ತುಂಬಿ ಖುಷಿಯನ್ನು ಪಡೋಣ. ನಿರ್ಬಂಧಿತ ಸ್ಥಳಗಳಿಗೆ ಭೇಟಿಯನ್ನು ನೀಡುವವರಿಗೆ ಕಾನೂನು ರೀತಿಯ ಕ್ರಮಗಳನ್ನು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸಾಮಾಜಿಕ ಜಾಲತಾಣದ ಸುತ್ತಿಗೆ ನಿಮ್ಮ ಪ್ರಾಣವನ್ನು ಕಳೆದುಕೊಳ್ಳಬೇಡಿ. ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ಬೇರೆ ವಿಷಯಗಳಿಂದ ಬೇಕಾದರೆ ಪಡೆಯಬಹುದು ಆದರೆ ಹೋದ ಪ್ರಾಣವನ್ನು ಆ ಮೆಚ್ಚುಗೆ ಚಿನ್ಹೆಯಿಂದ ಮರುಕಳಿಸಲು ಸಾದ್ಯವಿಲ್ಲ. ಜತೆಗೆ ನಮ್ಮ ಪ್ರಕೃತಿಯನ್ನು ರಕ್ಷಿಸಿ ಮತ್ತು ಬೆಳೆವ ಕೆಲಸ ನಮ್ಮಿಂದಾಗಬೇಕು. ಜತೆಗೆ ಮುಂದಿನ ಪೀಳಿಗೆಗೆ ಪ್ರಕೃತಿಯ ಸೌದರ್ಯವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು.
ಅಜಿತ್ ನೆಲ್ಯಾಡಿ