Advertisement

ಜಗದೊಡೆಯ ಶ್ರೀಕೃಷ್ಣನಿಗೆ ಅಷ್ಟೋತ್ತರಶತ ವೀಣಾವಂದನ

09:23 PM Aug 15, 2019 | Team Udayavani |

ಒಂದೆರಡು ವೀಣಾವಾದನ ಕಲಾವಿದರನ್ನು ಕಲೆ ಹಾಕುವುದೇ ದುಸ್ತರವಾದ ಈ ಕಾಲಘಟ್ಟದಲ್ಲಿ 108 (ಅಷ್ಟೋತ್ತರಶತ) ವೀಣಾವಾದಕರನ್ನು ಕಲೆ ಹಾಕಿ ಮೈಸೂರು ಬಾನಿ, ತಂಜಾವೂರು ಬಾನಿ, ತ್ರಿಶೂರು ಬಾನಿ ಹೀಗೆ ನಾನಾ ಶೈಲಿಗಳ ಕಲಾವಿದರ ವೀಣಾ ಝೇಂಕಾರವನ್ನು ಏಕಕಾಲದಲ್ಲಿ ಉಣ ಬಡಿಸುವ ಪ್ರಯತ್ನ ಮಣಿಪಾಲದ ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ನಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಜರುಗಿತು.

Advertisement

ವೀಣೆಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದೇ ಒಂದು ಸಮಸ್ಯೆ. ವೀಣಾ ಕಲಾವಿದರೂ ಬೇರೆ ಸಂಗೀತೋಪಕರಣಗಳಿಗೆ ಇರುವಷ್ಟು ಲಭ್ಯರಿಲ್ಲ. ಆದರೂ ಕಾಸರಗೋಡು, ಕಾರ್ಕಳ, ಮಂಗಳೂರು, ಉಡುಪಿ, ಮಣಿಪಾಲ, ಪುತ್ತೂರು ಮೊದಲಾದ ಪ್ರದೇಶಗಳಿಂದಲ್ಲದೆ, ಚಿಕ್ಕಮಗಳೂರು, ಬೆಂಗಳೂರಿನಿಂದಲೂ ವೀಣಾವಾದಕರನ್ನು ಕಲೆ ಹಾಕಲಾಯಿತು. ಲಂಡನ್‌ನಲ್ಲಿರುವ ವಂದನಾ ಶೆಣೈ, ಜರ್ಮನಿಯಲ್ಲಿರುವ ಸಹನಾ, ಬ್ರುನೋಯಿಯಲ್ಲಿರುವ ಕವಿತಾ ರವೀಂದ್ರ, ಅಮೆರಿಕದಲ್ಲಿರುವ ಚೇತನಾ ಬಡೇಕರ್‌ ಅವರು ಶತೋತ್ತರದ ಈ ವೀಣಾಮೇಳದಲ್ಲಿ ಪಾಲ್ಗೊಂಡದ್ದು ದೊಡ್ಡ ಅಚ್ಚರಿ.

ಹೋದ ವರ್ಷ 90 ವೀಣಾವಾದಕರು ತುಳಸಿ ಅರ್ಚನೆಯ ಸಂಕೇತವಾಗಿ ಸೀರೆಯ ಸಮವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದರೆ ಈ ಬಾರಿ “ವೀಣಾ ವಂದನ’ ಕಲ್ಪನೆಯಡಿ ಸಮೃದ್ಧಿಯ ಸಂಕೇತವಾಗಿ ಹಸಿರು, ತ್ಯಾಗದ ಸಂಕೇತವಾಗಿ ಕೇಸರಿ ಹೊದಿಕೆಯ ಸಮವಸ್ತ್ರವನ್ನು ಧರಿಸಿದ್ದರು.

ಕೇವಲ ವಿದ್ಯಾರ್ಥಿಗಳಲ್ಲದೆ ವೈದ್ಯರು, ಎಂಜಿನಿಯರ್‌, ಲೆಕ್ಕಪರಿಶೋಧಕರು, ಬ್ಯಾಂಕರ್‌ ಕೂಡ ಪಾಲ್ಗೊಂಡಿದ್ದರು. ಬೆಂಗಳೂರಿನಿಂದ ಆಗಮಿಸಿದ ಡಾ|ರಾಮಕೃಷ್ಣನ್‌ ವೈದ್ಯಕೀಯ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವವರು. ಅರ್ಜುನ್‌ ಮುದ್ಲಾಪುರ್‌ ಬೆಂಗಳೂರು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು. ಇಬ್ಬರು ಮೃದಂಗ ವಾದಕರು, ವಿಶೇಷ ವಾದ್ಯವಾಗಿ ಆಫ್ರಿಕನ್‌ ಬುಡಕಟ್ಟು ಜನಾಂಗದವರು ಉಪಯೋಗಿಸುವ ರೇನ್‌ಸ್ಟಿಕ್‌ ಕಲಾವಿದರು ವೀಣಾವಾದಕರಿಗೆ ಸಾಥ್‌ ನೀಡಿದರು.

“ಪ್ರೀಣಯಾಮೋ ವಾಸುದೇವಂ…’, “ವಂದೇವಂದ್ಯಂ ಸದಾನಂದಂ…’, “ಪಾಲಯಾಚ್ಯುತ…’, “ತಾರಕ್ಕ ಬಿಂದಿಗೆ…’, “ಊರಿಗೆ ಬಂದರೆ ದಾಸಯ್ಯ…’ ಇತ್ಯಾದಿ ದಾಸವರೇಣ್ಯರ 11 ಹಾಡುಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ನುಡಿಸಲಾಯಿತು. ಶಿವರಾಜ್‌ ಅವರ ಮಂತ್ರಪುಷ್ಪದ ವೇದ ಮಂತ್ರ, ಅಲೆವೂರು ರಾಮದಾಸ ಆಚಾರ್ಯರ ಸಾಮಗಾನವನ್ನೂ ವೀಣಾವಾದನಕ್ಕೆ ಬಗ್ಗಿಸಿದವರು ಸಂಘಟಕಿ ಪವನಕುಮಾರಿ ಮತ್ತು ಅರುಣಕುಮಾರಿಯವರು.

Advertisement

ಕೌಂಟುಂಬಿಕ ಜುಗಲ್ಬಂದಿ…
ಕಾರ್ಕಳದ ವಾಣಿಶ್ರೀ ಅವರು ಪುತ್ರ ಅಭಿನವನೊಂದಿಗೆ, ಸಾಣೂರಿನ ಜಯಲಕ್ಷ್ಮೀಯವರು ಮೊಮ್ಮಗ ಸಮೃದ್ಧನೊಂದಿಗೆ, ಕಾರ್ಕಳದ ಶಂಕರನಾರಾಯಣ ಭಟ್‌, ದಿವ್ಯಾ ದಂಪತಿ ಪುತ್ರಿ ಶ್ರಾವಣಿಯೊಂದಿಗೆ ವೀಣಾವಾದನ ನಡೆಸಿಕೊಟ್ಟರು. ತನಗಿಂತ ದೊಡ್ಡ ಗಾತ್ರದ ವೀಣೆಯನ್ನು ನುಡಿಸಿದವರು ಶ್ರಾವಣಿ. ಡಾ|ಬಾಲಚಂದ್ರ ಆಚಾರ್ಯ ಮೃದಂಗ, ಪತ್ನಿ ಪವನಕುಮಾರಿ ವೀಣೆ, ಪುತ್ರರಾದ ಶ್ರೇಯಸ್‌ ತಾಳ, ವೇಧಸ್‌ ರೇನ್‌ಸ್ಟಿಕ್‌ ನುಡಿಸಿದರು.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next