Advertisement

ಹರಿಹರದಲ್ಲಿ ಶೀಘ್ರ ಮಹಾ ರುದ್ರಯಾಗ: ಆನಂದ ಗುರೂಜಿ

05:20 AM Feb 02, 2019 | Team Udayavani |

ಹರಿಹರ: ರಾಜ್ಯದ ಕೇಂದ್ರಸ್ಥಾನವಾದ ಹರಿಹರ ಸೇರಿದಂತೆ ಮಧ್ಯ ಕರ್ನಾಟಕದ ಸಮಸ್ತ ಜನರ ಅಭಿವೃದ್ಧಿ, ಏಳ್ಗೆಗಾಗಿ ಶೀಘ್ರದಲ್ಲೇ ಮಹಾ ರುದ್ರಯಾಗ ಹಮ್ಮಿಕೊಳ್ಳಲಾಗುವುದು ಎಂದು ಡಾ|ಮಹರ್ಷಿ ಆನಂದ ಗುರೂಜಿ ಹೇಳಿದರು.

Advertisement

ನಗರದ ಗಾಂಧಿ ಮೈದಾನದಲ್ಲಿ ಕರುನಾಡ ಕದಂಬ ರಕ್ಷಣಾ ವೇದಿಕೆ 63ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದಕ್ಷಿಣ ಕಾಶಿ ಎಂದೇ ಖ್ಯಾತಿ ಗಳಿಸಿರುವ ಐತಿಹಾಸಿಕ, ಸಾಂಸ್ಕೃತಿಕ ನಗರ ಹರಿಹರದಲ್ಲಿ ಯಾಗ ಹಮ್ಮಿಕೊಳ್ಳಲಾಗುವುದು ಎಂದರು.

ವೇದಿಕೆ ರಾಜ್ಯೋತ್ಸವ ನಿಮಿತ್ತ ಬಡವರಿಗೆ ವರದಾನವಾಗುವ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಪ್ರತಿ ವರ್ಷ ವೇದಿಕೆ ಇಂತಹ ಸಮಾಜಮುಖೀ ಕಾರ್ಯಕ್ರಮಗಳನ್ನು ಏರ್ಪಡಿಸುವಂತಾಗಲಿ ಎಂದು ಆಶಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌ ಮಾತನಾಡಿ, ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಮಹಿಳೆಯರು ಆನಂದ ಗುರೂಜಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದ್ದಾರೆ. ಗುರೂಜಿ ಮಹಿಳೆಯರಿಗೆ ಹೇಳುವ ಸಾಂತ್ವನದ ಮಾತುಗಳು ಮಹತ್ವ ಪಡೆದಿವೆ. ಇಂತಹ ಮಹರ್ಷಿಗಳ ಸಮ್ಮುಖದಲ್ಲಿ ನವದಂಪತಿಗಳು ಹಸೆಮಣೆ ಏರುತ್ತಿದ್ದು, ಅವರ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ವೇದಿಕೆಯ ಅಧ್ಯಕ್ಷ ಎಚ್.ಸುಧಾಕರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ವೇದಿಕೆ ಸಮಾಜಮುಖೀ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ ಹಲವು ಸಾಧಕರನ್ನು ವೇದಿಕೆ ಸನ್ಮಾನಿಸಿದ್ದು, ಈ ಬಾರಿ ಸಾಮೂಹಿಕ ವಿವಾಹ ಏರ್ಪಡಿಸಿದ್ದೇವೆ ಎಂದರು.

Advertisement

ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಜಗದೀಶ್ವರ ಶ್ರೀ, ಕವಲೆತ್ತು ಬಸವ ಕೇಂದ್ರದ ಮುಕ್ತಾ ಶರಣೆ, ಗುತ್ತೂರು ನೇಕಾರ ಪೀಠದ ಪ್ರಭುಲಿಂಗ ಶ್ರೀ, ಬಾಗಲಕೋಟೆ ದಸ್ತಗಿರಿ ಬಾಬಾ, ಚಿತ್ರದುರ್ಗ ಬಂಜಾರ ಗುರುಪೀಠದ ಸೇವಾಲಾಲ್‌ ಸರ್ದಾರ್‌ ಶ್ರೀ, ಸಿದ್ದರಾಮಯ್ಯ ಶಾಸ್ತ್ರಿ, ಮಹಂತೇಶ್‌ ಶಾಸ್ತ್ರಿ, ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಬಸವಲಿಂಗಮ್ಮ, ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಿಸಿದ್ದಪ್ಪ, ಸದಸ್ಯರಾದ ಶಂಕರ್‌ ಖಟಾವಕರ್‌, ಬಿ. ರೇವಣಸಿದ್ದಪ್ಪ, ಮುಖಂಡರಾದ ಚಂದ್ರಶೇಖರ ಪೂಜಾರ್‌, ಎಚ್.ಕೆ. ಕೊಟ್ರಪ್ಪ, ವೇದಿಕೆಯ ಕವಿತಾ ಎಸ್‌.ಪೇಟೆಮಠ, ಎಪಿಎಂಸಿ ಸದಸ್ಯ ಮಂಜುನಾಥ್‌ ಪಾಟೀಲ್‌, ರುದ್ರಾಚಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next