Advertisement

ದಾಸೋಹದ ಮಹಾಮನೆ

07:33 PM Feb 28, 2020 | Lakshmi GovindaRaj |

ಮಳೆ ಎಡೆಬಿಡದೆ ಸುರಿಯುತ್ತಿತ್ತು. ಹಾಗೆ ಸುರಿಯುತ್ತಾ ಸುಮಾರು ದಿನಗಳೇ ಆಗಿದ್ದವು. ಅಡುಗೆಮನೆಯಲ್ಲಿ ಒಲೆ ಉರಿಸಲೂ ಕಟ್ಟಿಗೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಮನೆಯ ಚಾವಣಿಯನ್ನು ಬೀಳಿಸಿ, ಕಟ್ಟಿಗೆಗಳನ್ನು ಒಲೆ ಉರಿಸಲು ಬಳಿಸಿ, ಹಸಿವು ನೀಗಿಸಿದ ಪುಣ್ಯಕ್ಷೇತ್ರ ಕಲಬುರಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ. 1746ರಿಂದ ಅಂದರೆ, ಶರಣಬಸವೇಶ್ವರರ ಜೀವಿತ ಕಾಲದಿಂದ ಇಂದಿನವರೆಗೆ ದಾಸೋಹ ನಡೆದುಬಂದಿದೆ.

Advertisement

ದೇಶವು ಪರಕೀಯರ ದಾಸ್ಯದಲ್ಲಿದ್ದಾಗಲೂ, ದಾಸೋಹ ಕಾಯಕ ಮಾಡಿಕೊಂಡು ಬಂದ ಶರಣಬಸವೇಶ್ವರರ ದಾಸೋಹ ಮಹಾಮನೆ ಇದು. ಸಾಲ ಮಾಡಿಯೂ ದಾಸೋಹ ಬಡಿಸಿದ ಕ್ಷೇತ್ರ ಇದು. ತಾವೇ ಕೃಷಿ ಕಾಯಕ ಮಾಡಿ, ದಾಸೋಹಕ್ಕೆ ದವಸಧಾನ್ಯಗಳನ್ನು ಸಂಗ್ರಹಿಸಿದ ಶರಣ ಬಸವೇಶ್ವರರ ಸಂಸ್ಥಾನದ ದಾಸೋಹದ ಕತೆಗಳು ಮುಗಿಯುವಂಥದ್ದೇ ಅಲ್ಲ.

ಭಕ್ತರು ಮಾತ್ರವಲ್ಲ. ಈ ದಾಸೋಹದಲ್ಲಿ ಊಟ ಮಾಡಿ, ವಿದ್ಯಾಭ್ಯಾಸ ಕಲಿತು, ಪದವಿ ಪಡೆದವರು ಇಂದು ದೇಶದ ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಲ್ಲಿನ ತ್ರಿವಿಧ ದಾಸೋಹ ಹಲವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ನಿವೃತ್ತ ಎಸ್‌.ಪಿ. ಎಸ್‌. ಬಸವರಾಜ ಅವರು ಇಲ್ಲಿಯೇ ದಾಸೋಹ ಸ್ವೀಕರಿಸಿ, ಬದುಕಿನಲ್ಲಿ ಸಾಧನೆಗೈದವರು.

ನಿತ್ಯ ದಾಸೋಹ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿದಿನ ದಾಸೋಹ ನೀಡುವ ಧಾರ್ಮಿಕ ಕೇಂದ್ರಗಳೇ ಕಡಿಮೆ. ಈ ನಿಟ್ಟಿನಲ್ಲಿ ನಿತ್ಯ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಕನಿಷ್ಠ 1200 ಸದ್ಭಕ್ತರು ಊಟಕ್ಕೆ ಸಾಕ್ಷಿಯಾಗುತ್ತಾರೆ. ಹೊಟ್ಟೆ ತುಂಬುವಷ್ಟು ಸಂತೃಪ್ತ ಭೋಜನ ನೀಡುವುದು ಇಲ್ಲಿನ ವಿಶೇಷ.

ಭಕ್ಷ್ಯ ಸಮಾಚಾರ: ಇಲ್ಲಿ ಅನ್ನ- ಸಾಂಬಾರ್‌ ಜತೆಗೆ ಕೆಲವೊಮ್ಮೆ ಜೋಳದ ರೊಟ್ಟಿಯನ್ನೂ ಬಡಿಸಲಾಗುತ್ತದೆ. ಇದರೊಂದಿಗೆ ಭಕ್ತರು ನೀಡಿದ ನೈವೇದ್ಯವೂ ಊಟದ ರುಚಿಯನ್ನು ಹೆಚ್ಚಿಸುತ್ತದೆ.

Advertisement

ಅಡುಗೆಮನೆ ಒಳಗೆ…: ಎರಡು ಬೃಹತ್‌ ಸ್ಟೀಮ್‌ಗಳನ್ನು ಬಳಸಿ ಅನ್ನ- ಸಾಂಬಾರು ತಯಾರಿಸುತ್ತಾರೆ. ಹಾಗೆಯೇ ಸಾಂಪ್ರದಾಯಿಕವಾಗಿ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆಯೂ ಇಲ್ಲಿದೆ. ಸಾವಿರಾರು ಮಂದಿಗೆ ಊಟ ತಯಾರಿಸುವಾಗ ಪಾಕಶಾಲೆಯ ಶುಚಿತ್ವ ಕಾಪಾಡುವುದೇ ದೊಡ್ಡ ಸಮಸ್ಯೆ. ಆದರೆ, ಇಲ್ಲಿನ ಅಡುಗೆಮನೆ ಸ್ವತ್ಛ, ಸುಂದರ.

ದಾಸೋಹದ ಹಿಂದಿನ ಶಕ್ತಿ: ಸುಸಜ್ಜಿತ ಅಡುಗೆಮನೆ ಜತೆಗೆ ನಿಪುಣ ಬಾಣಸಿಗರು ಇಲ್ಲಿನ ದಾಸೋಹದ ಹಿಂದಿನ ಶಕ್ತಿ ಅಂತಲೇ ಹೇಳಬಹುದು. 10 ಮಂದಿ ಬಾಣಸಿಗರು, ಜವಾರಿ ಶೈಲಿಯ ಅಡುಗೆಯನ್ನು ತಯಾರಿಸುತ್ತಾರೆ. ಇವರಿಗೆ ಸಹಾಯಕರಾಗಿ ನಾಲ್ಕೈದು ಸಿಬ್ಬಂದಿಗಳಿದ್ದಾರೆ.

ಊಟದ ಸಮಯ: ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ

ಸಂಖ್ಯಾಸೋಜಿಗ
5- ಸಹಾಯಕ ಸಿಬ್ಬಂದಿ
10- ಬಾಣಸಿಗರಿಂದ ಅಡುಗೆ ತಯಾರಿ
1200- ಭಕ್ತರಿಗೆ ನಿತ್ಯ ದಾಸೋಹ
30- ನಿಮಿಷಗಳಲ್ಲಿ ಅಡುಗೆ ತಯಾರಿ
50- ಕಿಲೋ ತರಕಾರಿ ಬಳಕೆ
4,50,000- ವಾರ್ಷಿಕ ಇಷ್ಟು ಮಂದಿಗೆ ದಾಸೋಹ (ಅಂದಾಜು)

* ಡಾ. ಸುರೇಶ ನಂದಗಾಂವ

Advertisement

Udayavani is now on Telegram. Click here to join our channel and stay updated with the latest news.

Next