Advertisement

ಮಳೆರಾಯನ ಅವಕೃಪೆಯಿಂದ ಕಂಗಾಲಾದ ದ್ರಾಕ್ಷಿ ಬೆಳೆಗಾರರು

03:09 PM Nov 23, 2021 | Shwetha M |

ಚಡಚಣ: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ ರೋಗಗಳು ತಗಲುತ್ತಿದ್ದು ಔಷಧ ಸಿಂಪಡಿಸಿದರೂ ಪ್ರಯೋಜನವಾಗದೇ ರೈತರು ಕಂಗಾಲಾಗಿದ್ದಾರೆ.

Advertisement

ಅಕಾಲಿಕ ಮಳೆಯಿಂದ ದ್ರಾಕ್ಷಿಗೆ ಬಂದಿರುವ ಬೂದಿ ಮತ್ತು ಬುರಿ ರೋಗಗಳಿಂದ ಬೆಳೆ ಕಾಪಾಡಲು ರೈತರು ಹರಸಾಹಸ ಪಡುತ್ತಿದ್ದಾರೆ. ಹಗಲಿರುಳು ಶ್ರಮಿಸಿದರೂ ಯಾವುದೇ ಪ್ರಯೋಜನಯಾಗುತ್ತಿಲ್ಲ. ಸಾಲ ಮಾಡಿಕೊಂಡು ಒಂದು ಅಥವಾ ಎರಡು ಎಕರೆ ದ್ರಾಕ್ಷಿ ಬೆಳೆದು ಈ ಬಾರಿ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಮುಖ ಈ ಮಳೆಯಿಂದ ಬಾಡುವಂತಾಗಿದೆ.

ಅಧಿಕಾರಿಗಳ ಭೇಟಿ

ತಾಲೂಕಿನ ಹಲವೆಡೆ ದ್ರಾಕ್ಷಿ ಬೆಳೆದ ರೈತರ ತೋಟಕ್ಕೆ ಸಸ್ಯರೋಗ ಶಾಸ್ತ್ರಜ್ಞರಾದ ಎಸ್‌.ಜಿ.ಗೊಳ್ಳಗಿ, ರಮೇಶ, ರಾಘವೇಂದ್ರ ಆಚಾರಿ, ಕೀಟಶಾಸ್ರಜ್ಞ ಸತ್ಯನಾರಾಯಣ, ತೋಟಗಾರಿಕಾ ಇಲಾಖೆ ಅಧಿಕಾರಿ ಸಂತೋಷ ಡೊಳ್ಳಿ ತಂಡ ಭೇಟಿ ನೀಡಿ ಪರಿಶೀಲಿಸಿದೆ. ದ್ರಾಕ್ಷಿ ಬೆಳೆ ಕಾಪಾಡುವ ನಿಟ್ಟಿನಲ್ಲಿ ತಜಜ್ಞರು ಸಲಹೆ ಸೂಚನೆ ನೀಡಿದ್ದಾರೆ. ಮೋಡು ಕವಿದ ವಾತವರಣ, ತುಂತುರು ಮಳೆಯಿಂದ ಕೊಳೆ ರೋಗ ಹರಡುತ್ತದೆ. ದ್ರಾಕ್ಷಿ ಕಾಳುಗಳು ಉದುರುವುದು ಹೆಚ್ಚಾಗಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಕೀಟನಾಶಕ ಬಳಸಬೇಕು. ಹೂ ಅರಳುವ ಪೂರ್ವದ ಹಂತ ಅಂದರೆ ಚಾಟ್ನಿ ನಂತರ 30ರಿಂದ 35 ದಿನಗಳವರೆಗೆ ದ್ರಾಕ್ಷಿ ಗೊಂಚಲಿನಲ್ಲಿ ನೀರು ನಿಲ್ಲುವುದರಿಂದ ಢೌನಿಮಿಲ್ಡವ್‌ ರೋಗ, ಗೊಂಚಲು ರೋಗ ಬರುವ ಸಾಧ್ಯತೆ ಇರುತ್ತದೆ.

ಇದಕ್ಕೆ ಕ್ಯಾಪ್ಟಾನ್‌ 2 ಗ್ರಾ/ಲೀ ಅಥವಾ ಜೈರಾಮ 2 ಮಿ.ಲೀ ಅಥವಾ ಕ್ಲೋರೋಥಲೊನಿಲ್‌ 2 ಗ್ರಾ/ ಲೀ, ಥಯೋಪೋನೈಟ್‌ ಮಿಥೈಲ್‌ 1 ಗ್ರಾ/ಲೀ ಸಿಂಪರಣೆಯನ್ನು 2ರಿಂದ 3 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು. ಮಳೆಯ ತೀವ್ರತೆ ಅನುಗುಣವಾಗಿ ಬ್ಲೋವರ್‌ನಿಂದ ಗಾಳಿಯನ್ನು ಕೊಡುವ ಮೂಲಕ ಎಲೆ/ಗೊಂಚಲಿನಲ್ಲಿರುವ ನೀರು ಒಣಗುವಂತೆ ಮಾಡುತ್ತದೆ. ನಂತರ ಕಾಳು ಕಟ್ಟುವ ಹಂತ 35ರಿಂದ 45 ದಿನಗಳವರೆಗೆ ಥ್ರಿಪ್ಸ್‌ ಬಾಧೆ ಕಾಯಿ ಕೊಳೆ ರೋಗ ಬಾಧಿಸುವ ಸಾಧ್ಯತೆ ಹೆಚ್ಚು. ಕಾಯಿಗಳು 3ರಿಂದ 4 ಮಿ.ಮೀ ಗಾತ್ರವಾಗುವವರೆಗೆ ಕಾಯಿ/ಗೊಂಚಲು ಕೊಳೆ ರೋಗದ ನಿರ್ವಹಣೆ ಬಹು ಮುಖ್ಯ ಎಂದಿದ್ದಾರೆ.

Advertisement

ನೀರು/ತೇವಾಂಶ ಬೇಗ ಒಣಗಲು ಅನುಕೂಲವಾಗುವಂತೆ ಕಡ್ಡಿಗಳನ್ನು ಕಟ್ಟುವುದು, ಮಳೆ ಬಿಡುವಿನ ಸಮಯದಲ್ಲಿ ಬ್ಲೋವರ್‌ನಿಂದ ಗಾಳಿಯನ್ನು ಕೊಡುವುದು, ಶಿಲೀಂಧ್ರ ನಾಶಕಗಳನ್ನು ಒಂದರಿಂದ ಎರಡು ದಿನದ ಅಂತರದಲ್ಲಿ ಸಿಂಪರಣೆ ಮಾಡಬೇಕು. ಅಝಾಕ್ಸಿಸ್ಟ್ರೋಬಿನ್‌ + ಟೆಬುಕೊನಜೋಲ್‌ 1ಮಿ. ಲೀ, ಅಝಾಕ್ಸಿಸ್ಟ್ರೋಬಿನ್‌ + ಡೈಪೆನ್ಕೊನಜೋಲ್‌ 1 ಮಿ.ಲೀ, ಪ್ಲಯೋಪೈರಾವನ್‌ + ಟೆಬುಕೊನಜೋಲೆ 0.50 ಮಿ.ಲೀ, ಟ್ರೈಫ್ಲಾಕ್ಸಿಸ್ಟ್ರೋಬಿನ್‌ + ಟೆಬುಕೊನಜೋಲ್‌ 0.50 ಗ್ರಾ/ಲೀ. ಯಾವುದಾದರೂ ಒಂದು ಶೀಲಿಂಧ್ರ ನಾಶಕ ಸಿಂಪಡಣೆ ಮಾಡಬೇಕು. ನಂತರದಲ್ಲಿ ಕೆಳಗಿನ ನಾಶಕವನ್ನು 1 ರಿಂದ 2 ದಿನದ ಅಂತರದಲ್ಲಿ ಸಿಂಪರಣೆ ಮಾಡುವುದು.

ಮೆಟಿರಾಮ್‌ 2.5 ಗ್ರಾ/ಲೀ, ಪ್ರೊಪಿನೆಬ್‌ 2.5 ಗ್ರಾ/ಲೀ, ಥಯೋಪ್ಲೊನೋಬ್‌ ಮಿಥೈಲ್‌ 1 ಗ್ರಾ/ ಲೀ, ಕ್ಯಾಪ್ಟಾನ್‌ 2 ಗ್ರಾ/ಲೀ, ಜೈರಾಮ್‌ 2 ಗ್ರಾ/ಲೀ ಈ ರೀತಿಯಾಗಿ ನಿರ್ವಹಿಸಬೇಕು. ಸಿಂಪಡಣೆ ಮಾಡಿದ ನಂತರ 4 ರಿಂದ 6 ಗಂಟೆಗಳ ಒಳಗಾಗಿ ಮಳೆ ಬಂದರೆ ಮತ್ತೆ ಸಿಂಪಡಣೆ ಮಾಡಬೇಕು. ನಿರಂತರ ಮಳೆಯಿದ್ದರೆ ಮ್ಯಾಂಕೋಜೆಬ್‌ 2 ರಿಂದ 2.5 ಕೆಜಿ ಹಾಗೂ ಸಮ ಪ್ರಮಾಣದಲ್ಲಿ ಟಾಕ್‌ ಪೌಡರ್‌ (ಪಿ.ಎಚ್‌-7.00) ನ್ನು ಬೆರಸಿ ಪ್ರತಿ ಎಕರೆಗೆ ಗಿಡದ ಮೇಲೆ ಸತತವಾಗಿ ನೀರು ಇರುವಾಗ ಮಾತ್ರ ಧೂಳಿಕರಿಸಬೇಕು.

ಕಾಳುಗಳು ಉದುರುವುದು ಶೇ. 10-20ಕ್ಕಿಂತ ಹೆಚ್ಚಾಗಿ ಕಂಡು ಬಂದಲ್ಲಿ 6 ಬಿ.ಎ ವನ್ನು 10 ಪಿ.ಪಿ.ಎಂ (1ಗ್ರಾಂ ಪ್ರತಿ 100 ಲೀ.ನೀರಿಗೆ) ಪ್ರಮಾಣದಲ್ಲಿ ನಾಜಲ್‌ ಸಿಂಪಡಣೆ ವೇಗವನ್ನು ಕಡಿಮೆ ಇರುವಂತೆಮಾಡಬೇಕು. ಮಳೆ ನಿಂತ ಮೇಲೆ ಟ್ರೈಕೊಡರ್ಮಾವನ್ನು 5 ಗ್ರಾಂ ಅಥವಾ 5 ಮಿ.ಲೀ. ಪ್ರಮಾಣದಲ್ಲಿ ಸಿಂಪಡಣೆ ಮಾಡುವುದು. ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಿದಾಗ ಲಘು ಪೋಷಕಾಂಶಗಳನ್ನು (ಸಿಎ, ಎಂಜಿ, ಎಂಎನ್‌, ಎಫ್‌ಇ, ಬಿ ಮತ್ತು ಝಡ್‌) ಸಿಂಪರಣೆ ಮೂಲಕ ಒದಗಿಸುವುದು. ಥ್ರಿಪ್ಸ್‌ ನುಸಿಯ ಹಿಟ್ಟು ತಿಗಣೆಯ ಬಾಧೆ ಕಂಡು ಬಂದಲ್ಲಿ 0.3 ಮಿ.ಲೀ ಇಮಿಡಾಕ್ಲೊಪ್ರಿಡ್‌ 17.8 ಎಸ್‌.ಎಲ್‌ ಅಥವಾ 0.3 ಗ್ರಾಂ ಅಸಿಟಾಮಿಪ್ರಿಡ್‌ 20 ಎಸ್‌.ಪಿ ಅಥವಾ 0.3 ಗ್ರಾಂ ಥೈಯಾಮಿಥೋಕ್ಸಾಮ್‌ 25 ಡಬ್ಲೂಜಿ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.

-ಶಿವಯ್ಯ ಮಠಪತಿ

Advertisement

Udayavani is now on Telegram. Click here to join our channel and stay updated with the latest news.

Next