ಕೊಪ್ಪಳ: ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಪಂಪಾವನಕ್ಕೆ ನುಗ್ಗಿ ಜಲಾವೃತಗೊಂಡಿದ್ದ ವೇಳೆ ಹಾನಿಗೀಡಾದ ಕಟ್ಟಡಗಳು, ವಿದ್ಯುತ್ ಲೈನ್ ಸೇರಿ ಸೇತುವೆಗಳ ಪುನರ್ ನಿರ್ಮಾಣಕ್ಕೆ ಈ ವರೆಗೂ ಯಾವುದೇ ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. ಅನುದಾನ ಕೊಡುವುದೇ ಡೌಟು ಎನ್ನುವ ಮಾತು ಸಹ ಇಲಾಖೆಯಿಂದಲೇ ಕೇಳಿ ಬಂದಿದೆ.
ತೋಟಗಾರಿಕೆ ಇಲಾಖೆಯು ಇದರ ಬಗ್ಗೆ ಚಿಂತೆ ಮಾಡಲಾರಂಭಿಸಿದೆ. ಕರ್ನಾಟ ನೀರಾವರಿ ನಿಗಮವೇ ಅನುದಾನ ಕೊಡುವ ನಿರೀಕ್ಷೆಯಲ್ಲೇ ಕಾಲ ದೂಡುತ್ತಿದೆ. ಆದರೆ ನಿಗಮವು ಇನ್ನೂ ಪಂಪಾವನದಲ್ಲಿ ಜಲಾವೃತದಿಂದ ಹಾನಿಯಾದ ಬಗ್ಗೆ ಪರಿಪೂರ್ಣ ಸರ್ವೆಯನ್ನೇ ಮಾಡಿಲ್ಲ. ಗೇಟ್ ಮುರಿದು ತಿಂಗಳುಗಟ್ಟಲೆ ಕಳೆದರೂ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.
ಪಂಪಾವನ ತುಂಗಭದ್ರಾ ತಟದಲ್ಲಿಯೇ ಇದೆ. ಸುಮಾರು 70 ಎಕರೆಯಷ್ಟು ವಿಸ್ತಾರವನ್ನು ಒಳಗೊಂಡಿದೆ. ಇಲ್ಲಿ ಈ ಮೊದಲು ಸಾವಿರಾರು ಸಸಿಗಳನ್ನು ಬೆಳೆಸಲಾಗಿತ್ತು. ವಿವಿಧ ಬಗೆಯ ಹೂವಿನ ಗಿಡಗಳಿದ್ದವು. ವಿಶೇಷ ಗಮನ ಸೆಳೆಯುವ ಸಸ್ಯ ಮಾದರಿಯನ್ನು ತಯಾರಿಸಲಾಗಿತ್ತು ಆದರೆ ಗೇಟ್ ಮುರಿದು ನೀರು ನುಗ್ಗಿದ ಪರಿಣಾಮ ಎಲ್ಲವೂ ಹಾನಿಯಾಗಿದೆ.
ಎನ್‌ಡಿಆರ್‌ಎಫ್ ನಿಯಮಾವಳಿಯಡಿಪಂಪಾವನಕ್ಕೆ ಅನುದಾನ ಬರಲಿದೆ ಎಂಬ ನಿರೀಕ್ಷೆ ಇಟ್ಟಿದ್ದರೆ ಅದೂ ಹುಸಿಯಾಗುತ್ತಿದೆ. ಏಕೆಂದರೆ ಪಂಪಾವನಕ್ಕೆ ಪ್ರಕೃತಿ ವಿಕೋಪದಿಂದ ನೀರು ನುಗ್ಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಗೇಟ್ ಮುರಿದು ಅಪಾರ ಪ್ರಮಾಣದಲ್ಲಿ ನೀರು ಉದ್ಯಾನವನಕ್ಕೆ ನುಗ್ಗಿ 70 ಎಕರೆಯಷ್ಟು ಆವರಿಸಿ ವಾರಗಟ್ಟಲೆ ನೀರು ಸಂಗ್ರಹವಾಗಿತ್ತು. ಇದರಿಂದ ಉದ್ಯಾನವನದಲ್ಲಿದ್ದ ಹಲವಾರು ಕಟ್ಟಡಗಳು, ಸೇತುವೆಗಳು, ವಿದ್ಯುತ್ ಲೈನ್‌ಗಳು ರಸ್ತೆಗಳು ಬಹುಪಾಲು ಹಾನಿಗೀಡಾಗಿವೆ.
ಇರೊಟ್ಟಿಗೆ ಸೇತುವೆ ನಿರ್ಮಾಣದ ಅವ ಯಲ್ಲಿಯೇ ನಿರ್ಮಿಸಿದ್ದ ಟವರ್‌ಗಳು ಹಾನಿಗೀಡಾಗಿವೆ. ಅಲ್ಲದೇ, ವಿವಿಧ ತಳಿಯ ಸಸ್ಯಗಳು, ಹೂವಿನ ಕುಂಡಗಳು ನೀರಿನಲ್ಲಿ ಕೊಳೆತು ಹೋಗಿವೆ. 15 ಲಕ್ಷ ರೂ.ನಷ್ಟು ಸಸ್ಯಗಳೇ ಕೊಳೆತು ಹೋಗಿವೆ. ಹಾಗಾಗಿ ಎನ್‌ಡಿಆರ್‌ಎಫ್ ನಿಯಮಾವಳಿ ಉದ್ಯಾನವನಕ್ಕೆ ಹಣ ಬರುವುದಿಲ್ಲ ಎನ್ನುವುದು ಅಧಿಕಾರಿಗಳ ವೇದನೆ. ಈ ಹಿಂದೆ ಸಚಿವ ಸಿ.ಸಿ. ಪಾಟೀಲ್ ಅವರು ಪಂಪಾವನಕ್ಕೆ ಭೇಟಿ ನೀಡಿದ್ದ ವೇಳೆ ಇದು ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಪಂಪಾವನ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ನೀರಾವರಿ ನಿಗಮವೇ ಅನುದಾನ ಕೊಡಬೇಕು ಎನ್ನುವ ಮಾತನ್ನಾಡಿದ್ದಾರೆ. ಆದರೆ ನಿಗಮವೂ ಈ ವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಕೇಳಿದರೆ ಇನ್ನೂ ಸರ್ವೇ ಕಾರ್ಯ ನಡೆದಿದೆ. ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಹೇಳಿದ್ದೇವೆ.
ವಿದ್ಯುತ್ ಲೈನ್‌ಗೆ ಜೆಸ್ಕಾಂ ಹಾಗೂ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಗೆ ಹೇಳಿದ್ದೇವೆ. ಸ್ವಲ್ಪ ಹಾನಿಯ ಕುರಿತಂತೆ ಸರ್ವೇ ನಡೆಸಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಡ್ಯಾಂ ಅಧಿಕಾರಿಗಳು. ಡ್ಯಾಂ ಗೇಟ್ ಮುರಿದು ಹಾನಿಯಾಗಿ ತಿಂಗಳುಗಟ್ಟಲೆ ಕಳೆದರೂ ಇನ್ನೂ ಹಾನಿ ಸಮೀಕ್ಷೆಯನ್ನೇ ಮಾಡದೇ ಇರುವುದು ಬೇಸರದ ಸಂಗತಿ.
ಸಾರ್ವಜನಿಕರ ಉದ್ದೇಶಕ್ಕಾಗಿ ನಿರ್ಮಿಸಿರುವ ಉದ್ಯಾನವನದ ಬಗ್ಗೆ ಇಷ್ಟೊಂದು ತಾತ್ಸಾರದ ಭಾವನೆ ತಾಳುತ್ತಿರುವುದು ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ಹಾನಿಯಾದ ಸ್ಥಳಗಳ ಪುನರ್ ನಿರ್ಮಾಣ ಮಾಡುವ ಕಾರ್ಯವಾಗಬೇಕಿದೆ.
-ದತ್ತು ಕಮ್ಮಾರ