Advertisement

ಅನುದಾನ ಬಿಡುಗಡೆಗೊಂಡರೂ ಅನುಷ್ಠಾನಗೊಳ್ಳದ ಕಾಮಗಾರಿ

01:32 AM Jan 21, 2020 | Team Udayavani |

ಮಂಗಳೂರು: ಅನುದಾನ ಬಿಡುಗಡೆಗೊಂಡರೂ ಕೆಲವು ಪ್ರಮುಖ ಕಾಮಗಾರಿಗಳು ಅನುಷ್ಠಾನಗೊಳ್ಳದಿರುವ, ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಗತಿ ಪರಿಶೀಲನೆ ನಡೆಸಿದರು. “ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌) ಸಂಸ್ಥೆಗೆ ವಹಿಸಲಾದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡರೂ ಕೆಲಸ ಆರಂಭಗೊಂಡಿಲ್ಲ’ ಎಂದು ಶಾಸಕ ವೇದವ್ಯಾಸ ಕಾಮತ್‌ ದೂರಿದರು. ಕೆಆರ್‌ಐಡಿಎಲ್‌ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೂಜಾರಿ ಅವರು ಮಂಗಳೂರಿನಲ್ಲೇ ಕೆಆರ್‌ಐಡಿಎಲ್‌ನ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.

20 ಕಿಂಡಿ ಅಣೆಕಟ್ಟುಗಳು
ಜಿಲ್ಲೆಯಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ಒಟ್ಟು 265 ಕೋ.ರೂ. ವೆಚ್ಚದಲ್ಲಿ 20 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು 11ಕ್ಕೆ ಅನುಮೋದನೆ ದೊರೆತಿದೆ. 8 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದರು.

ಜಿಲ್ಲೆಯಲ್ಲಿ 16 ಕಡೆ ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇತ್ತು. ಅದನ್ನು ಸರಿಪಡಿಸಲಾಗಿದೆ. ಸರ್ವರ್‌ ಸಮಸ್ಯೆ ಇಡೀ ರಾಜ್ಯದ್ದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದರು.

ಹೆದ್ದಾರಿ ಕಾಮಗಾರಿ ವೇಗಗೊಳಿಸಲು ಸೂಚನೆ
“ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ 10 ವರ್ಷಗಳಾದರೂ ಪೂರ್ಣಗೊಂಡಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿ ಪಂಪ್‌ವೆಲ್‌ ಫ್ಲೈ ಓವರ್‌ ಕಾಮಗಾರಿ ಜ. 31ಕ್ಕೆ ಪೂರ್ಣಗೊಳ್ಳಲಿದ್ದು ಮಂಗಳೂರು – ಮೂಡುಬಿದಿರೆ ಹೆದ್ದಾರಿ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಗುರುಪುರ ಸೇತುವೆ ಕಾಮಗಾರಿ ಮೇಯಲ್ಲಿ ಪೂರ್ಣಗೊಳ್ಳಲಿದೆ ಎಂದರು.

Advertisement

ಜಿಲ್ಲೆಯಲ್ಲಿ ಒಟ್ಟು 830.56 ಎಕರೆ ಜಮೀನನನ್ನು ಮನೆ ನಿವೇಶನಗಳಿಗೆ ಕಾದಿರಿಸಲಾಗಿದ್ದು ಫೆಬ್ರವರಿ ಅಂತ್ಯದೊಳಗೆ ಹಕ್ಕುಪತ್ರ ನೀಡಲಾಗುವುದು ಎಂದು ಸಿಇಒ ಡಾ| ಆರ್‌. ಸೆಲ್ವಮಣಿ ತಿಳಿಸಿದರು.

ರಾಜೇಶ್‌ ನಾೖಕ್‌, ಡಾ| ವೈ. ಭರತ್‌ ಶೆಟ್ಟಿ, ಮೀನಾಕ್ಷಿ ಶಾಂತಿಗೋಡು, ಮಮತಾ ಶೆಟ್ಟಿ, ಧನಲಕ್ಷ್ಮೀ, ಪೊನ್ನು ರಾಜ್‌, ಸಿಂಧೂ ಬಿ.ರೂಪೇಶ್‌, ಎಸ್‌ಪಿ ಲಕ್ಷ್ಮೀಪ್ರಸಾದ್‌ ಪಾಲ್ಗೊಂಡಿದ್ದರು.

ಸಭೆಯಿಂದ ಹೊರನಡೆದ ಉಮಾನಾಥ ಕೋಟ್ಯಾನ್‌
ಮನಪಾ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಜತೆ ಮೊಬೈಲ್‌ನಲ್ಲಿ ಮಾತನಾಡುವಾಗ ಅವರು ಅಗೌರವ ತೋರಿದ್ದಾರೆ; ಇದರಿಂದ ನೋವಾಗಿದೆ. ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಶ್ರೀನಿವಾಸ ಪೂಜಾರಿ ಸಮಾಧಾನಿಸಿದರೂ ತೃಪ್ತರಾಗದ ಕೋಟ್ಯಾನ್‌ ಸಭೆಯಿಂದ ಹೊರನಡೆದರು. ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next