Advertisement
ಇದರಡಿ ವಿವಿಧ ರಾಜ್ಯಗಳ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ರೂಪದಲ್ಲಿ ಅನುದಾನ ನೀಡಲಾಗಿತ್ತು. ಇದೇ ಮಾರ್ಚ್ 31ಕ್ಕೆ ಆ ಯೋಜನೆ ಅವಧಿ ಪೂರ್ಣಗೊಳ್ಳುತ್ತಿದೆ. ಆದರೆ, ಬಿಎಂಟಿಸಿ ಇದುವರೆಗೆ ಹಣ ಬಳಸಿಲ್ಲ. ಆದ್ದರಿಂದ ಅದನ್ನು ಬಡ್ಡಿಸಹಿತ ವಾಪಸ್ ನೀಡುವಂತೆ ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯವು ರಾಜ್ಯ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗಳ ನಿರ್ದೇಶಕರ ಮೂಲಕ ಬಿಎಂಟಿಸಿಗೆ ಸೂಚನೆ ನೀಡಿದೆ.
Related Articles
Advertisement
ಈ ಮಧ್ಯೆ “ಎಲೆಕ್ಟ್ರಿಕ್ ಬಸ್ ಖರೀದಿ ಯೋಜನೆ’ ವಿವಾದದ ಕೇಂದ್ರಬಿಂದು ಆಗಿದೆ. ಮೊದಲು 60 ಎಸಿ (12 ಮೀ. ಉದ್ದ) ಹಾಗೂ 20 ನಾನ್‌ಎಸಿ (9 ಮೀ. ಉದ್ದ) ಸೇರಿದಂತೆ 80 ಬಸ್‌ಗಳ ಖರೀದಿಗೆ ಬಿಎಂಟಿಸಿ ಈ ಹಿಂದೆ ಟೆಂಡರ್ ಕರೆದಿತ್ತು. ಅತ್ಯಂತ ಕಡಿಮೆ ದರದಲ್ಲಿ ಬಸ್‌ಗಳ ಪೂರೈಕೆಗೆ ಮುಂದೆ ಬಂದ ಗೋಲ್ಡ್‌ಸ್ಟೋನ್ ಕಂಪನಿಗೆ ಕಾರ್ಯಾದೇಶ ನೀಡಲು ಉದ್ದೇಶಿಸಲಾಗಿತ್ತು.
ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದೇ ಮಾದರಿಯಲ್ಲಿ ಮತ್ತೆ 500 ಬಸ್‌ಗಳ ಟೆಂಡರ್‌ಗೆ ಸಿದ್ಧತೆ ಕೂಡ ನಡೆಸಿತ್ತು. ಆದರೆ, ತದನಂತರದಲ್ಲಿ ಸರ್ಕಾರ ಬದಲಾಯಿತು. ಅದರೊಂದಿಗೆ ಈ ವಿಚಾರದಲ್ಲಿ ಅಭಿಪ್ರಾಯಗಳೂ ಬದಲಾದವು. “ಖರೀದಿಯೇ ಸೂಕ್ತ’ ಎಂಬ ಒತ್ತಾಯ ಕೇಳಿಬಂದಿತು. ಈ ಸಂಬಂಧದ ಮುಸುಕಿನ ಗುದ್ದಾಟದಲ್ಲಿ ಯೋಜನೆ ತಟಸ್ಥವಾಯಿತು.
ಈಗಾಗಲೇ ಹೈದರಾಬಾದ್, ಅಹಮದಾಬಾದ್, ಮುಂಬೈ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಅಥವಾ ಗುತ್ತಿಗೆಯಲ್ಲಿ ಸಾಕಷ್ಟು ಮುಂದೆಹೋಗಿವೆ. ಕೆಲವೆಡೆ ಈಗಾಗಲೇ ಬಸ್‌ಗಳು ರಸ್ತೆಗೂ ಇಳಿದಿವೆ. ಆದರೆ, ಬೆಂಗಳೂರಿಗೆ ಈ ವಿಚಾರದಲ್ಲಿ ಹಿನ್ನಡೆ ಆಗಿದೆ. ವಿಚಿತ್ರವೆಂದರೆ ಇಡೀ ದೇಶದಲ್ಲಿ ಎಲೆಕ್ಟ್ರಿಕ್ ಬಸ್ ಆರಂಭಿಸುವ ಪ್ರಕ್ರಿಯೆಗೆ ಅಂದು ಮುನ್ನುಡಿ ಬರೆದಿದ್ದೇ ಬಿಎಂಟಿಸಿ. ಈಗ ಅದೇ ಸಂಸ್ಥೆ ಎಲ್ಲಕ್ಕಿಂತ ಹಿಂದೆ ಉಳಿದಿದೆ.
ನಿರ್ಧಾರ ಬದಲಾವಣೆ – ಅನುಮಾನ: ಎಲೆಕ್ಟ್ರಿಕ್ ಬಸ್‌ಗಳನ್ನು ಈ ಹಿಂದೆ ಗುತ್ತಿಗೆ ಪದ್ಧತಿಯಲ್ಲಿ ಪಡೆದು, ಕಾರ್ಯಾಚರಣೆ ಮಾಡುವುದಾಗಿ ಬಿಎಂಟಿಸಿ ಹೇಳಿತ್ತು. ಇದಕ್ಕೆ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಆಕ್ಷೇಪಿಸಿದಾಗ, ಈ ವಿನೂತನ ಮಾದರಿಯಿಂದ ಆಗುವ ಲಾಭಗಳ ಬಗ್ಗೆ ಬಿಎಂಟಿಸಿ ಮನದಟ್ಟು ಮಾಡಿಕೊಟ್ಟಿತ್ತು. ಬಸ್ ಖರೀದಿಯು ನಗರ ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಲಿದೆ.
ಈಗಾಗಲೇ ಸಂಸ್ಥೆಯು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅಂತಹದ್ದರಲ್ಲಿ ನೂರಾರು ಕೋಟಿ ರೂ. ಹೂಡಿಕೆ ಮಾಡುವುದು ಕಷ್ಟಸಾಧ್ಯ. ಹಾಗೊಂದು ವೇಳೆ, ಇಷ್ಟೊಂದು ಹಣ ಹೂಡಿಕೆ ಮಾಡಿ ಖರೀದಿಸಿದರೂ, ಮುಂದಿನ ದಿನಗಳಲ್ಲಿ ಈ ಮಾದರಿ ಬಸ್‌ಗಳು ಅಪ್ರಸ್ತುತವಾಗಬಹುದು. ಗುತ್ತಿಗೆ ಆಧಾರದಲ್ಲಿ ಇಂತಹ ಯಾವುದೇ “ರಿಸ್ಕ್’ ಇರುವುದಿಲ್ಲ. ನಿರ್ವಹಣಾ ವೆಚ್ಚವೂ ಬರುವುದಿಲ್ಲ.
ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಖರೀದಿ ಮಾಡುವ ಬಸ್‌ಗಳ ಆಯಸ್ಸು ಇರುವುದೇ 9ರಿಂದ 10 ವರ್ಷ. ನಂತರ ಅವು ಗುಜರಿಗೇ ಸೇರುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಗುತ್ತಿಗೆ ಮಾದರಿ ಅನುಸರಿಸುವುದು ಸೂಕ್ತ ಎಂಬ ವಾದವನ್ನು ಕೇಂದ್ರದ ಮುಂದಿಟ್ಟಿತ್ತು. ಇದಕ್ಕೆ ಅನುಮತಿಯೂ ದೊರಕಿತ್ತು.
ಆದರೆ, ನಂತರದಲ್ಲಿ ಏಕಾಏಕಿ ತನ್ನ ನಿಲುವು ಬದಲಿಸಿತು. “ಪ್ರಸ್ತುತ ಎಲೆಕ್ಟ್ರಿಕ್ ಬಸ್‌ಗಳನ್ನು ಲೀಸ್‌ನಲ್ಲಿ ತೆಗೆದುಕೊಂಡು ಸೇವೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಆದರೆ, ಕೇವಲ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಲ್ಲದೆ, ಇನ್ನೂ ಕಡಿಮೆ ದರದಲ್ಲಿ ಸೇವೆ ಸಿಗುವ ಸಾಧ್ಯತೆ ಇದೆ’ ಎಂದು ಮರುಪರಿಶೀಲನೆಗೊಳಪಡಿಸಿತು.